ಕವಾಡಿಗರಹಟ್ಟಿ ಪ್ರಕರಣಗಳು ನಿಯಂತ್ರಣಕ್ಕೆ, ಆತಂಕಪಡುವ ಅಗತ್ಯವಿಲ್ಲ- ದಿವ್ಯಪ್ರಭು ಜಿ.ಆರ್.ಜೆ.

 

 

 

 

ಚಿತ್ರದುರ್ಗ ಆ. 02 (ಕರ್ನಾಟಕ ವಾರ್ತೆ):
ಚಿತ್ರದುರ್ಗ ನಗರ ಸಮೀಪದ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಉಂಟಾಗಿದೆ ಎನ್ನಲಾದ ವಾಂತಿಭೇದಿ ಪ್ರಕರಣಗಳು ಸದ್ಯ ನಿಯಂತ್ರಣದಲ್ಲಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ.  ಮುಂಜಾಗ್ರತಾ ದೃಷ್ಟಿಯಿಂದ ಸಾರ್ವಜನಿಕರು ಕಾಯಿಸಿ, ಆರಿಸಿದ ನೀರನ್ನು ಕುಡಿಯಲು ಬಳಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.
ಕವಾಡಿಗರ ಹಟ್ಟಿಯಲ್ಲಿ ವಾಂತಿಭೇದಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದ ಕುರಿತಂತೆ ಎಲ್ಲ ಆಯಾಮಗಳಿಂದಲೂ ತನಿಖೆ ಹಾಗೂ ತಪಾಸಣೆ ನಡೆಸಲಾಗುತ್ತಿದೆ.  ನೀರಿನ ಗುಣಮಟ್ಟದ ಬಗ್ಗೆಯೂ ತಜ್ಞರಿಂದ ಪರೀಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ.  ಸದ್ಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೂ ಕ್ರಮ ವಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಈಗಾಗಲೆ ಸ್ಥಳದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು, ವೈದ್ಯರಿಂದ ತಪಾಸಣೆ ಹಾಗೂ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ.  ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ.  ಮಳೆಗಾಲದಲ್ಲಿ ಹೊಸ ನೀರು ಬಂದು, ಈ ನೀರು ಪೂರೈಕೆ ಮಾಡುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಾಯಿಸಿ, ಆರಿಸಿದ ನೀರನ್ನು ಕುಡಿಯಲು ಉಪಯೋಗಿಸಬೇಕು.  ಜಿಲ್ಲೆಯಲ್ಲಿನ ಎಲ್ಲ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಂಗ್ರಹಗಾರಗಳು, ಮೇಲ್ತೊಟ್ಟಿಗಳು, ಹಾಗೂ ಜಲ ಮೂಲಗಳನ್ನು ಪ್ರತಿ 15 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು, ಹಾಗೂ ಪ್ರತಿ ಬಾರಿಯೂ ನೀರಿನ ಗುಣಮಟ್ಟದ ಬಗ್ಗೆ ಪರಿಶೀಲನೆಯನ್ನು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳು ಕೈಗೊಳ್ಳುವಂತೆ ಈಗಾಗಲೆ ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours