ಕಾತ್ರಾಳು ಕೆರೆಗೆ ತುಂಗೆ ಹರಿದು ಬಂದ ಹಿನ್ನಲೆ ಸಿಹಿ ಹಂಚಿ, ಸಂಭ್ರಮಿಸಿದ ರೈತರು

 

 

 

 

ಚಿತ್ರದುರ್ಗ: ತುಂಗಾ ಜಲಾಶಯ  ಭರ್ತಿಯಾಗಿ ನೀರು ನದಿಗೆ ಹೋಗುತ್ತಿರುವ ಹಿನ್ನಲೆ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ವತಿಯಂದ ಜುಲೈ ಅಂತ್ಯಕ್ಕೆ ಬಯಲು ಸೀಮೆ ಬಾಗಿನ ಸಮರ್ಪರಣೆ ಮಾಡಲು ನಿರ್ಧರಿಸಲಾಗಿದೆ.
ಕಾತ್ರಾಳು  ಕೆರೆಗೆ ತುಂಗಾ ನದಿ ನೀರು ಪೂರೈಕೆಯಾದ ಹಿನ್ನಲೆ ಹೋರಾಟ ಸಮಿತಿ ವತಿಯಿಂದ ಶನಿವಾರ ಕೆರೆಯಂಗಳದಲ್ಲಿ ಹಮ್ಮಿಕೊಳ್ಳಲಾದ ತರಳಬಾಳು ಶ್ರೀಗಳಿಗೆ ಧನ್ಯತೆ ಅರ್ಪಿಸುವ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತುಂಗಾ ನದಿಯಿಂದಲೇ ಹೆಚ್ಚು ನೀರಿನ ಪಾಲು ಇದೆ. ಹಾಗಾಗಿ ಜಲಾಶಯ ಭರ್ತಿಯಾಗಿರುವುದರಿಂದ ಈ ಬಾರಿ ಗಾಜನೂರು ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಣೆ ಮಾಡಲಾಗುವುದು. ಕನಿಷ್ಟ ಒಂದು ಸಾವಿರ ಜನರು ತೆರಳುವ ನಿರೀಕ್ಷೆಯಿದೆ ಎಂದರು.
    ತರಳಬಾಳು ಶ್ರೀಗಳ ದೂರದೃಷ್ಠಿಯಿಂದಾಗಿ ಜಿಲ್ಲೆಯ ೪೨ ಕೆರೆಗಳಿಗೆ ತುಂಗ ಭದ್ರೆ ನದಿಯಿಂದ ಏತ ನೀರಾವರಿ ಮೂಲಕ ನೀರು ಹರಿಸಲಾಗುತ್ತಿದೆ. ಹೋರಾಟ ಸಮಿತಿ ಶ್ರೀಗಳಿಗೆ ಧನ್ಯತೆ ವ್ಯಕ್ತಪಡಿಸುತ್ತಿದೆ. ಎಲ್ಲ ಕೆರೆಗಳ ಅಚ್ಚಕಟ್ಟುದಾರರ ಸಭೆ ನಡೆಸಿ ತರಳಬಾಳು ಶ್ರೀಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಸಂಬಂಧ ಶೀಘ್ರ ಶ್ರೀಗಳ ಸಂಪರ್ಕಿಸಿ ಅಪ್ಪಣೆ ಪಡೆಯಲಾಗುವುದೆಂದರು.
    ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ್ ಮಾತನಾಡಿ ಜಿಲ್ಲೆಯ ಕೆರೆಗಳಿಗೆ ತುಂಗ ಭದ್ರೆಯಿಂದ ನೀರು ಹರಿದು ಬರಲು ಶುರುವಾಗಿದೆ. ಕಳೆದ ಐದು ವರ್ಷಗಳಿಂದ ಕೆರೆಗಳಲ್ಲಿ ಗಿಡ ಮರಗಳ ತೆಗೆಸಿ ಏರಿ ಭದ್ರ ಮಾಡುವಂತೆ ಹಲವಾರು ಬಾರಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಗಮಕ್ಕೆ ತರಲಾಗಿದ್ದರೂ ಉದಾಸೀನ ತೋರಲಾಗಿದೆ.  ಇನ್ನು ಮೇಲಾದರೂ ಕೆರೆಗಳ ಏರಿ ಭದ್ರ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಲಿ ಎಂದರು.
      ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ ಈ ಮೊದಲು `ಭದ್ರಾ ಮೇಲ್ದಂಡೆ ಯೋಜನೆಯಡಿ ಕಾತ್ರಾಳು, ಮುದ್ದಾಪುರ, ಸುಲ್ತಾನಿಪುರ ಕೆರೆಗಳಿಗೆ ನೀರು ತುಂಬಿಸುವ ಅವಕಾಶ ಕಲ್ಪಿಸಲಾಗಿತ್ತು. ಇದಕ್ಕೂ ಮೊದಲು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳ ಇಚ್ಚಾಶಕ್ತಿ ಬಲವಾಗಿ ಕಾತ್ರಾಳು ಕೆರೆಗೆ ನೀರು ಹರಿದಿದೆ. ಇದಕ್ಕಾಗಿ ಸಮಿತಿಯು ಅವರಿಗೆ ಧನ್ಯತೆ ಅರ್ಪಿಸುತ್ತಿದೆ ಎಂದರು.
     ಹರಿಹರದ ರಾಜನಹಳ್ಳಿ ಸಮೀಪದ ತುಂಗಾ ಭದ್ರಾ ನದಿಯಿಂದ ೫೬೫ ಕೋಟಿ ರುಪಾಯಿ ವೆಚ್ಚದಲ್ಲಿ ೪೨ ಕೆರೆಗಳಿಗೆ ತೀರು ತುಂಬಿಸಲಾಗುತ್ತಿದೆ. ಕಾತ್ರಾಳು ಕೆರೆಗೆ ನೀರು ಬಂದಿದ್ದು ಮುದ್ದಾಪುರ ಹಾಗೂ ಸುಲ್ತಾನಿಪುರ ಕೆರೆಗಳಿಗೆ ನೀರು ಪೂರೈಕೆ ಕಾಮಗಾರಿ ನಡೆಯುತ್ತಿದೆ. ಅದು ಶೀಘ್ರ ಪೂರ್ಣಗೊಂಡಲ್ಲಿ ಮುಂದಿನ ವರ್ಷ ಈ ಕೆರೆಗಳಿಗೂ ತುಂಗಭದ್ರಾ ನೀರು ಪೂರೈಕೆಯಾಗಲಿದೆ. ರೈತರು ತಮ್ಮ ವ್ಯಾಪ್ತಿಯ ಕೆರೆಗಳ  ಏರಿ ಭದ್ರ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹಾಕಬೇಕೆಂದರು.
 ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮುದ್ದಾಪುರ ನಾಗರಾಜ್,ರೈತ ಸಂಘದ ಮುಖಂಡ ಕಬ್ಬಿಗೆರೆ ನಾಗರಾಜ್, ಕಮ್ಯನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಸುರೇಶ್‌ಬಾಬು, ರಾಜಪ್ಪ, ಮುದ್ದಾಪುರ ಮಂಜುನಾಥ್, ಹಿರೇಕಬ್ಬಿಗೆರೆ ರಾಜಪ್ಪ, ಜಯಣ್ಣ, ರಾಯಣ್ಣನಹಳ್ಳಿ ಅನಿಲ್ ಕುಮಾರ್,  ಪ್ರದೀಪ್ ರಾಜ್, ಸಿದ್ದವ್ವನದುರ್ಗ ಶಿವಕುಮಾರ್, ಪರಮೇಶ್ವರಪ್ಪ,  ಶಿವಣ್ಣ ಮೇಸ್ಟ್ರು, ವಿಜಾಪುರದ ಎಸ್‌ಎಂ ತಿಪ್ಪೇಸ್ವಾಮಿ,ನಾಗರಾಜಪ್ಪ, ರೇವಣಸಿದ್ದಪ್ಪ ಧನ್ಯತೆ ಅರ್ಪಣೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
[t4b-ticker]

You May Also Like

More From Author

+ There are no comments

Add yours