ಇಂಗಳದಾಳ್ ಬಳಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸ್ಥಳ ನಿಗಧಿ: ಎ.ನಾರಾಯಣಸ್ವಾಮಿ

 

 

 

 

ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಾಸ್ಟರ್ ಪ್ಲಾನ್ ರೂಪಿಸಿ
-ಕೇಂದ್ರ ಸಚಿವ ಎ ನಾರಾಯಣಸ್ವಾಮಿ
**************
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.2:
ಜನರು ಹಾಗೂ ಜನಪ್ರತಿನಿಧಿಗಳ ಹೋರಾಟದ ಪ್ರತಿಫಲವಾಗಿ ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದೆ. ಭವಿಷ್ಯದ ದೃಷ್ಟಿಯಿಂದ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮಾಸ್ಟರ್ ಪ್ಲಾನ್ ರೂಪಿಸಬೇಕು. ಕೇವಲ 17 ಎಕರೆ ಜಾಗದಲ್ಲಿ ಕಾಲೇಜು ಸ್ಥಾಪನೆಯ ಯೋಜನೆ ಬದಲಿಗೆ, 65 ರಿಂದ 70 ಎಕರೆ ಜಾಗದಲ್ಲಿ ವಿಶಾಲ ಹಾಗೂ ಸುಸಜ್ಜಿತ ವೈದ್ಯಕೀಯ ಕಾಲೇಜು ಸ್ಥಾಪನೆಗೆ ವಿಸ್ತøತ ಯೋಜನಾ ವರದಿ ಸಿದ್ದಪಡಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮೆಡಿಕಲ್ ಕಾಲೇಜು ಆರಂಭಿಸುವ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಅವರು ಮಾತನಾಡಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೆಡಿಕಲ್ ಕಾಲೇಜು ಆರಂಭಿಸಲು ಸೂಕ್ತ ಕಟ್ಟಡ ಹಾಗೂ ಸ್ಥಳ ನಿಗದಿ ಮಾಡುವ ಕುರಿತು ಇನ್ನೊಮ್ಮೆ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳ ಪರೀಶೀಲನೆ ನಡೆಸಿ ವಾರದಲ್ಲಿ ವರದಿ ನೀಡಬೇಕು. ಚಿತ್ರದುರ್ಗ ಜಿ.ಆರ್.ಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಈಗಾಗಲೇ ವಿದ್ಯಾರ್ಥಿಗಳು ಓದುತ್ತಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದ ಮೇಲೆ ಸವಾರಿ ಮಾಡಿ ಬಲವಂತದಿಂದ ಸ್ನಾತಕೋತ್ತರ ಕೇಂದ್ರವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸಾಧ್ಯವಿಲ್ಲ. ವಿ.ವಿ ಉಪಕುಲಪತಿಗಳು ಸಂಪೂರ್ಣ ಒಪ್ಪಿ ಸ್ಥಳ ನೀಡಿದರೆ ಯಾವುದೇ ಅಭ್ಯಂತರವಿಲ್ಲ. ಮುಂದಿನ ಸಭೆಗೆ ಕಡ್ಡಾಯವಾಗಿ ದಾವಣಗೆರೆ ವಿ.ವಿ ಅಧಿಕಾರಿಗಳು ಹಾಜರಿಬೇಕು ಎಂದರು.

 

 

ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ಆಯೋಜನೆಗೆ ಸೂಚನೆ: ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಎಂಎಫ್ (ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ) ಅಡಿ ರೂ.200 ಕೋಟಿ ಅನುದಾನ ಹಂಚಿಕೆ ಮಾಡಲುವ ಸಂಬಂಧ ಜಿಲ್ಲಾ ಸಚಿವರ ಅಧ್ಯಕ್ಷತೆಯಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳ ಸಭೆ ಆಯೋಜಿಸುವಂತೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಡಿ.ಎಂ.ಎಫ್ ಜೊತೆಗೆ ಕೆ.ಎಂ.ಇ.ಆರ್.ಸಿ ಅನುದಾನವನ್ನೂ ಬಳಕೆ ಮಾಡುವ ಕುರಿತು ಶಾಸಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುವಂತೆ ನಿರ್ದೇಶನ ನೀಡಿದರು.
111 ಎಕರೆ ಸರ್ಕಾರಿ ಜಮೀನು: ಚಿತ್ರದುರ್ಗ ನಗರಸಭೆಯ ವ್ಯಾಪ್ತಿಗೆ ಹತ್ತಿರ ಇರುವ ಇಂಗಳದಾಳು ಗ್ರಾಮದ ಬಳಿ 111 ಎಕರೆ ಸರ್ಕಾರಿ ಜಮೀನು ಲಭ್ಯವಿದೆ. ಇದರಲ್ಲಿ 80 ಎಕರೆ ಜಮೀನಿಗೆ ಮಂಜೂರಾತಿಗೆ 57 ಅರ್ಜಿಗಳು ಬಂದಿವೆ. 30 ಎಕರೆ ಜಮೀನು ಪ್ರದೇಶದಲ್ಲಿ ನಾಲ್ಕು ಗುಡ್ಡಗಳು ಇವೆ ಎಂದು ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಸಭೆಗೆ ಮಾಹಿತಿ ನೀಡಿದರು.
ಈ ಸರ್ಕಾರಿ ಜಮೀನಿನಲ್ಲಿ ಯಾವ ಖಾಸಗಿ ವ್ಯಕ್ತಿಗಳು ಉಳಿಮೆ ಮಾಡುತ್ತಿಲ್ಲ. ಜಮೀನು ಮಂಜೂರಾತಿಗೆ ಬಂದ ಅರ್ಜಿಗಳನ್ನು ವಜಾ ಮಾಡಿ ಈ ಸ್ಥಳ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸೂಕ್ತವಾಗಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
150 ಮೆಡಿಕಲ್ ವಿದ್ಯಾರ್ಥಿಗಳ ಪ್ರವೇಶಕ್ಕೆ ಒಪ್ಪಿಗೆ : ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೆಡಿಕಲ್ ಕಾಲೇಜು ಆರಂಭಕ್ಕೆ ಅನುಮತಿ ದೊರೆತಿದೆ. 150 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಈ ಕುರಿತು ರಾಷ್ಟ್ರೀಯ ವೈದ್ಯಕೀಯ ಪರಿಷತ್ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವ ವಿದ್ಯಾಲಯವು ಅನುಮೋದನೆ ನೀಡಿವೆ. ಕಾಲೇಜಿಗೆ 75 ಸಿಬ್ಬಂದಿಗಳ ಅವಶ್ಯಕತೆಯಿದೆ. ಈ ಕುರಿತು ಹಣಕಾಸು ಇಲಾಖೆ ಹುದ್ದೆ ಮಂಜೂರಾತಿಗೆ ಪತ್ರ ಬರೆಯಲಾಗಿದೆ. ಹಣಕಾಸು ಇಲಾಖೆ ಅನುಮತಿ ನೀಡಬೇಕಿದೆ. ತಾತ್ಕಾಲಿಕವಾಗಿ ಜಿ.ಆರ್.ಹಳ್ಳಿ ಜ್ಞಾನಗಂಗೋತ್ರಿ ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜು ಆರಂಭಿಸಲು ಅನುಮತಿ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ. ಇದುವರೆಗೂ ಸರ್ಕಾರದಿಂದ ಚಿತ್ರದುರ್ಗ ವೈದ್ಯಕೀಯ ಕಾಲೇಜಿಗೆ ಯಾವುದೇ ಅನುದಾನ ನೀಡಿರುವುದಿಲ್ಲ. ಕಾಲೇಜು ಆರಂಭಿಸಲು, ಅಗತ್ಯ ಪೀಠೊಪಕರಣ, ಕಚೇರಿ ಸ್ಥಾಪನೆಗೆ ಅನುದಾನದ ಅಗತ್ಯವಿದೆ ಎಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ವಿಶೇಷ ಅಧಿಕಾರಿ ಡಾ.ಯುವರಾಜ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕ ಕೆ.ಸಿ.ವೀರೇಂದ್ರ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ದಿವಾಕರ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours