Monday, September 23 2024

ಜಟಾಪಟಿಗೆ ಬಿದ್ದ ಮಹಿಳಾ ಅಧಿಕಾರಿಗಳಿಗೆ ಎತ್ತಂಗಡಿ ಬಿಸಿ

 

 

 

 

ಬೆಂಗಳೂರು, ಫೆ. ೨೧- ಬಹಿರಂಗವಾಗಿ ಪರಸ್ಪರ ಆರೋಪ-ಪ್ರತ್ಯಾರೋಪಗಳ ಮೂಲಕ ಜಟಾಪಟಿ ನಡೆಸಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಇವರುಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು, ಈ ಇಬ್ಬರು ಅಧಿಕಾರಿಗಳಿಗೆ ಯಾವುದೇ ಹುದ್ದೆ ತೋರದೆ ಎತ್ತಂಗಡಿ ಮಾಡಿ ಸರ್ಕಾರ ಬಿಸಿ ಮುಟ್ಟಿಸಿದೆ.ಮಹಿಳಾ ಅಧಿಕಾರಿಗಳ ಜಗಳದಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಪತಿ ಸರ್ವೆ ಮತ್ತು ಭೂದಾಖಲೆ ಇಲಾಖೆ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ಅವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.ಸೇವಾ ನಿಯಮಗಳನ್ನು ಉಲ್ಲಂಘಿಸಿ ಬಹಿರಂಗವಾಗಿ ಪರಸ್ಪರ ನಿಂದನೆ ಮಾಡಿಕೊಂಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಅವರಿಗೆ ಸರ್ಕಾರ ನೋಟಿಸ್ ಜಾರಿ ಮಾಡಿದ ಬೆನ್ನಲ್ಲೆ ವರ್ಗಾವಣೆ ಶಿಕ್ಷೆಯನ್ನು ನೀಡಿದೆ.ಈ ಇಬ್ಬರು ಅಧಿಕಾರಿಗಳನ್ನು ಅವರು ಈಗ ಅಲಂಕರಿಸಿದ್ದ ಹುದ್ದೆಗಳಿಂದ ವರ್ಗಾವಣೆ ಮಾಡಲಾಗಿದೆ.ರೋಹಿಣಿ ಸಿಂಧೂರಿ ಅವರು ಧಾರ್ಮಿಕ ಮತ್ತು ಮುಜರಾಯಿ ಇಲಾಖೆಯ ಆಯುಕ್ತರಾಗಿದ್ದರು. ಆ ಸ್ಥಾನಕ್ಕೆ ಹೆಚ್. ಬಸವರಾಜೇಂದ್ರ ಅವರನ್ನು ನಿಯೋಜಿಸಲಾಗಿದೆ. ರೋಹಿಣಿಯವರಿಗೆ ಯಾವುದೇ ಸ್ಥಳ ತೋರಿಸಿಲ್ಲ. ಹಾಗೆಯೇ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರನ್ನು ವರ್ಗಾಯಿಸಿದ್ದು, ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಐ ಎ ಎಸ್ ಅಧಿಕಾರಿ ಭಾರತಿ ಅವರನ್ನು ನೇಮಕ ಮಾಡಲಾಗಿದೆ.ಐಪಿಎಸ್ ಅಧಿಕಾರಿ ರೂಪಾರವರ ಪತಿ ಮೌನೀಶ್ ಮೌದ್ಗಿಲ್ ಅವರನ್ನು ವರ್ಗಾಯಿಸಲಾಗಿದ್ದು, ಸರ್ವೆ ಇಲಾಖೆಯ ಆಯುಕ್ತರಾಗಿದ್ದ ಮೌನೀಶ್ ಮೌದ್ಗಿಲ್ ರವರನ್ನು ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

 

 

ಸರ್ವೇ ಇಲಾಖೆಯ ಆಯುಕ್ತರಾಗಿ ಸರ್ವೆ ಇಲಾಖೆಯ ಹೆಚ್ಚುವರಿ ನಿರ್ದೇಶಕರಾಗಿದ್ದ ಸಿ.ಎನ್. ಶ್ರೀಧರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಹೆಚ್.ವಿ. ದರ್ಶನ್ ಅವರನ್ನು ತುಮಕೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಈ ಇಬ್ಬರು ಅಧಿಕಾರಿಗಳ ಜಟಾಪಟಿ ಸರ್ಕಾರಕ್ಕೆ ಮುಜುಗರ ತಂದಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ನೋಟಿಸ್ ಜಾರಿ ಮಾಡಿ ಹದ್ದು ಮೀರಿ ವರ್ತಿಸದಂತೆ ಖಡಕ್ ಸೂಚನೆಯನ್ನು ನೀಡಲಾಗಿದೆ.
ಯಾವುದೇ ಅಧಿಕಾರಿಗಳು ಬಹಿರಂಗವಾಗಿ ಒಬ್ಬರ ವಿರುದ್ಧ ಒಬ್ಬರು ಆರೋಪ ಮಾಡುವುದು ಸೇವಾ ನಿಯಮಗಳ ಉಲ್ಲಂಘನೆಯಾಗುತ್ತದೆ. ಯಾವುದೇ ಕಾರಣಕ್ಕೂ ಬಹಿರಂಗವಾಗಿ ಹೇಳಿಕೆ ನೀಡಬಾರದು. ನೀಡಿದರೆ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೋಟಿಸ್‌ನಲ್ಲಿ ನೀಡಲಾಗಿದೆ.
ಅಧಿಕಾರಿಗಳು ಆರೋಪ ಮಾಡಲು ಸೂಕ್ತ ವೇದಿಕೆ ಇರುವಾಗ ಅದು ಬಿಟ್ಟು ಮಾಧ್ಯಮಗಳ ಮುಂದೆ ಹೋಗಿರುವುದು ಸರಿಯಲ್ಲ. ನಿಮ್ಮ ಆರೋಪಗಳನ್ನು ಸಕ್ಷಮ ಪ್ರಾಧಿಕಾರದ ಮುಂದೆ ಮಾಡಬಹುದು. ಇನ್ನು ಮುಂದೆ ಮಾಧ್ಯಮಗಳ ಮುಂದೆ ಹೋಗಬೇಡಿ ಎಂದು ನೋಟಿಸ್ ಜಾರಿ ಮಾಡಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ನೋಟಿಸ್‌ನಲ್ಲಿ ಹೇಳಿದ್ದಾರೆ.ನಿನ್ನೆ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲೂ ಈ ಇಬ್ಬರು ಅಧಿಕಾರಿಗಳ ಜಟಾಪಟಿ ವಿಚಾರ ಪ್ರಸ್ತಾಪವಾಗಿ ಇಬ್ಬರನ್ನು ವರ್ಗಾಯಿಸುವಂತೆ ಕೆಲ ಸಚಿವರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದರು.ಮುಖ್ಯಮಂತ್ರಿಗಳು ಸಹ ಈ ಇಬ್ಬರು ಅಧಿಕಾರಿಗಳ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ವರ್ಗಾವಣೆ ಮಾಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದ ಬೆನ್ನಲ್ಲೆ ಈ ಇಬ್ಬರು ಅಧಿಕಾರಿಗಳ ವರ್ಗಾವಣೆ ಆದೇಶ ಹೊರ ಬಿದ್ದಿದೆ.ಈ ಇಬ್ಬರು ಅಧಿಕಾರಿಗಳು ನಿನ್ನೆ ಮುಖ್ಯ ಕಾರ್ಯದರ್ಶಿಗಳಿಗೆ ದೂರು-ಪ್ರತಿದೂರು ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮಾಧ್ಯಮಗಳ ಮುಂದೆ ಮಾತನಾಡದಂತೆ ಅಧಿಕಾರಿಗಳಾದ ರೂಪಾ ಮತ್ತು ಸಿಂಧೂರಿ ಅವರಿಗೆ ಸೂಚಿಸಿದ್ದರು.

[t4b-ticker]

You May Also Like

More From Author

+ There are no comments

Add yours

ದ್ವೀತಿಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಮದುವೆಯಲ್ಲಿ ಅಣ್ಣನ ಮಗಳಿಗೆ ಬಂದ ಉಡುಗೊರೆ ಕದ್ದ ತಮ್ಮನನ್ನು ಒಂದುವರೆ ಗಂಟೆಯಲ್ಲಿ ವಶಕ್ಕೆ ಪಡೆದ ಪೋಲಿಸ್

[t4b-ticker]