ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲು ಡಿಸಿ ದಿವ್ಯಪ್ರಭು ಸೂಚನೆ

 

 

 

 

ಚಿತ್ರದುರ್ಗ ಡಿ. 02 (ಕರ್ನಾಟಕ ವಾರ್ತೆ) :
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು, ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆಸಿದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ, ರಾಗಿ ಬೆಳೆ ಉತ್ತಮವಾಗಿ ಬಂದಿದೆ.  ಒಟ್ಟು 39893 ಹೆ. ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದ್ದು, ಈಗಾಗಲೆ ರಾಗಿ ಕಟಾವು ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭವಾಗಿದೆ.  ಜಿಲ್ಲೆಯಲ್ಲಿ ಅಂದಾಜು 75 ಸಾವಿರ ಟನ್ ರಾಗಿ ಉತ್ಪಾದನೆಯಾಗುವ ನಿರೀಕ್ಷೆ ಇದೆ.  ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಸರ್ಕಾರದಿಂದ ಮಾರ್ಗಸೂಚಿ ಬರುವುದನ್ನು ನಿರೀಕ್ಷಿಸಲಾಗುತ್ತಿದೆ.  ಅತಿ ಶೀಘ್ರದಲ್ಲಿಯೇ ಮಾರ್ಗಸೂಚಿ ಬರಲಿದ್ದು, ರೈತರ ನೊಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಈಗಿನಿಂದಲೇ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿನಿರ್ದೇಶಕ ಮಧುಸೂಧನ್ ಅವರು ಮಾತನಾಡಿ, ಜಿಲ್ಲೆಯಲ್ಲಿ ರಾಗಿ ಬೆಳೆ ಕಟಾವು ಪ್ರಕ್ರಿಯೆ ಆರಂಭವಾಗಿದ್ದು, ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ಬೇಡಿಕೆ ಬರುತ್ತಿದೆ.  ರಾಗಿಗೆ ಪ್ರತಿ ಕ್ವಿಂಟಾಲ್‍ಗೆ ರೂ. 3578 ರೂ. ಬೆಂಬಲ ಬೆಲೆಯನ್ನು ಪ್ರಸ್ತಾಪಿಸಲಾಗಿದೆ.  ಕಳೆದ ವರ್ಷ ಬೆಂಬಲ ಬೆಲೆಯಲ್ಲಿ ಜಿಲ್ಲೆಯಲ್ಲಿ ರೈತರಿಂದ ಒಟ್ಟು 1.60 ಲಕ್ಷ ಕ್ವಿಂ. ರಾಗಿ ಖರೀದಿಸಲಾಗಿತ್ತು.  ಈ ಬಾರಿ  ಅಂದಾಜು 3 ಲಕ್ಷ ಕ್ವಿಂ. ರಾಗಿ ಬೆಂಬಲ ಬೆಲೆಯಲ್ಲಿ ಖರೀದಿಯಾಗುವ ಸಾಧ್ಯತೆ ಇದೆ.  ಸರ್ಕಾರದಿಂದ ಮಾರ್ಗಸೂಚಿ ಬಂದ ಕೂಡಲೆ ರೈತರ ನೊಂದಣಿ ಕಾರ್ಯವನ್ನು ಪ್ರಾರಂಭಿಸಲಾಗುವುದು.  ಕಳೆದ ಬಾರಿ ಜಿಲ್ಲೆಯಲ್ಲಿ ಹೊಸದುರ್ಗ, ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲಾಗಿತ್ತು.  ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಆವಕವಾಗುವ ನಿರೀಕ್ಷೆ ಇದ್ದು, ಹೊಸದುರ್ಗ ತಾಲ್ಲೂಕಿನಲ್ಲಿ ಅತಿ ಹೆಚ್ಚು 23770 ಹೆ. ನಲ್ಲಿ ಬಿತ್ತನೆಯಾಗಿದೆ.  ಉಳಿದಂತೆ ಚಿತ್ರದುರ್ಗ-2155, ಹೊಳಲ್ಕೆರೆ-6173, ಚಳ್ಳಕೆರೆ-60 ಹಾಗೂ ಮೊಳಕಾಲ್ಮೂರು 285 ಹೆ. ನಲ್ಲಿ ಬಿತ್ತನೆಯಾಗಿದೆ.  ಹಿರಿಯೂರು ತಾಲ್ಲೂಕಿನಲ್ಲಿಯೂ 7450 ಹೆ. ನಲ್ಲಿ ರಾಗಿ ಬಿತ್ತನೆಯಾದ ಕಾರಣ, ಇಲ್ಲಿಯೂ ಖರೀದಿ ಕೇಂದ್ರ ಪ್ರಾರಂಭಿಸಲು ಬೇಡಿಕೆ ಬರುವ ಸಾಧ್ಯತೆ ಇದೆ ಎಂದರು.  ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಹೊಸದುರ್ಗದಲ್ಲಿ ಎರಡು ಕೇಂದ್ರ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನಲ್ಲಿ ತಲಾ ಒಂದು ಖರೀದಿ ಕೇಂದ್ರ ಪ್ರಾರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು.  ಹಿರಿಯೂರು ತಾಲ್ಲೂಕಿನಲ್ಲಿಯೂ ಬೇಡಿಕೆ ಬಂದರೆ ಖರೀದಿ ಕೇಂದ್ರ ಪ್ರಾರಂಭಿಸಲು ಈಗಲೆ ಸಿದ್ಧತೆ ಮಾಡಿಕೊಳ್ಳಿ,  ರೈತರು ನೊಂದಣಿ ಮಾಡಿಕೊಳ್ಳಲು ಕೂಡ ವ್ಯವಸ್ಥೆ ಮಾಡಿಕೊಳ್ಳಬೇಕು, ಖರೀದಿ ಕೇಂದ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬಂದಲ್ಲಿ, ಅವರಿಗೆ ಟೋಕನ್ ನೀಡಿ, ಸಮಯವನ್ನು ನಿಗದಿಪಡಿಸುವ ಕಾರ್ಯ ಆಗಬೇಕು.  ರೈತರಿಗೆ ಯಾವುದೇ ತೊಂದರೆಯಾಗದ ರೀತಿ, ಹಾಗೂ ಯಾವುದೇ ಗೊಂದಲ, ಗದ್ದಲಕ್ಕೆ ಅವಕಾಶವಾಗದ ರೀತಿ, ಪ್ರತಿಯೊಂದನ್ನೂ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಬೇಕು.   ಖರೀದಿಸಿದ ರಾಗಿಯನ್ನು ದಾಸ್ತಾನು ಮಾಡಲು ಅಗತ್ಯ ಗೋದಾಮುಗಳ ವ್ಯವಸ್ಥೆ ಹಾಗೂ ರಾಗಿ ಸಾಗಾಣಿಕೆಗೆ ಲಾರಿಗಳ ವ್ಯವಸ್ಥೆ ಮಾಡಿಕೊಳ್ಳಬೇಕು.  ರೈತರು ತರುವ ಚೀಲವನ್ನು ಅವರಿಗೇ ವಾಪಸ್ ಕೊಟ್ಟು, ಇಲಾಖೆಯಿಂದ ಬೇರೆ ಚೀಲದಲ್ಲಿ ತುಂಬಿಸಿಡಬೇಕು.  ರಾಗಿಯ ಗುಣಮಟ್ಟವನ್ನು ಪರಿಶೀಲಿಸಲು ಅನುಭವಿ ಗ್ರೇಡರ್‍ಗಳನ್ನು ನೇಮಿಸಿಕೊಳ್ಳಬೇಕು.  ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗುವಂತಿರಬೇಕು, ಅಲ್ಲದೆ ಪಾರದರ್ಶಕವಾಗಿ ರೈತರಿಂದಲೇ ರಾಗಿ ಖರೀದಿಯಾಗಬೇಕು.  ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲದಂತೆ, ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುವಂತೆ ಮಾಡಬೇಕು.  ಖರೀದಿ ಕೇಂದ್ರಗಳಲ್ಲಿ ರೈತರಿಗೆ ಅಗತ್ಯ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಿಕೊಳ್ಳಬೇಕು.  ಗಲಾಟೆ, ಗದ್ದಲವಾಗದಂತೆ ಮುಂಜಾಗ್ರತಾ ಕ್ರಮವಾಗಿ ಖರೀದಿ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಬೇಕು.  ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತಾ ಕ್ರಮಗಳು ಹಾಗೂ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ನಿರ್ಲಕ್ಷ್ಯ ತೋರುವ ಅಧಿಕಾರಿ, ಸಿಬ್ಬಂದಿಗಳು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ ಶಂಕರ್ ಪತ್ತಾರ್, ಚಿತ್ರದುರ್ಗ ತಹಸಿಲ್ದಾರ್ ಸತ್ಯನಾರಾಯಣ, ಹೊಸದುರ್ಗ ತಹಸಿಲ್ದಾರ್ ಮಲ್ಲಿಕಾರ್ಜುನ್, ಡಿವೈಎಸ್‍ಪಿ ಎನ್. ಲೋಕೇಶ್ ಹಾಗೂ ಕೃಷಿ, ಎಪಿಎಂಸಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours