80 ಕೋಟಿ ವೆಚ್ಚದಲ್ಲಿ ಇಂಗಳದಾಳು ಬಳಿ ನೂತನ ಕಟ್ಟಡ ನಿರ್ಮಾಣ:ಪಿ.ಸಿ.ರಾಜು

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ).ನ.28:
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿದ್ಯಾಲಯ ಕಾರ್ಯಾರಂಭ ಮಾಡಲಿದೆ. ಆರಂಭದಲ್ಲಿ 1 ರಿಂದ 5 ತರಗತಿವರೆಗೆ, ಪ್ರತಿ ತರಗತಿಗೆ 40 ರಂತೆ 200 ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಲಾಗುವುದು ಎಂದು ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಸಂಘಟನೆ ಪ್ರಾದೇಶಿಕ ಸಹಾಯಕ ಆಯುಕ್ತ ಪಿ.ಸಿ.ರಾಜು ಹೇಳಿದರು.
ಕೇಂದ್ರೀಯ ವಿದ್ಯಾಲಯ ಸ್ಥಾಪನೆಯ ಸಲುವಾಗಿ ಸೋಮವಾರ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ಸ್ಥಳ ಹಾಗೂ ಮೂಲಭೂತ ಸೌಕರ್ಯಗಳ ವೀಕ್ಷಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ  ಅವರು ಮಾತನಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ರೈಲ್ವೇ, ಅಂಚೆ, ಡಿ.ಆರ್.ಡಿ.ಓ, ಇಸ್ರೋ ಸೇರಿದಂತೆ ಅನೇಕ ಕೇಂದ್ರ ಸರ್ಕಾರಿ ಇಲಾಖೆ ಹಾಗೂ ಸಂಸ್ಥೆಗಳು ಇವೆ. ಇವುಗಳಲ್ಲಿ ಹೆಚ್ಚಿನ ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆ ಮಾಡುವಂತೆ ಬೇಡಿಕೆ ಬಂದಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ನಿರ್ದೇಶನದಂತೆ ಕೇಂದ್ರೀಯ ವಿದ್ಯಾಲಯ ಸ್ಥಾಪನೆಯ ಕುರಿತು ಸ್ಥಳ ಪರಿಶೀಲನೆ ನಡೆಸಲಾಗಿದೆ. ವರದಿಯನ್ನು ಇನ್ನೂ ಎರಡು ದಿನಗಳ ಒಳಗಾಗಿ ನೀಡಲಾಗುವುದು. ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದ ನೆಲ ಮಹಡಿಯಲ್ಲಿ ಬೋಧನಾ ಕೊಠಡಿಗಳು ವಿಶಾಲವಾಗಿವೆ. 10 ಬೋಧನಾ, 2 ಸ್ಟಾಫ್ ರೂಂ, 2 ಶೌಚಾಲಯ ಸೇರಿದಂತೆ 17 ಕೊಠಡಿಗಳು ಲಭ್ಯ ಇವೆ. ತರಗತಿಗಳನ್ನು ಆರಂಭಿಸಲು ಯಾವುದೇ ಕೊರತೆ ಇಲ್ಲ. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ 12 ತರಗತಿಯವರೆಗೆ ವಿದ್ಯಾಭ್ಯಾಸವನ್ನು ನೀಡಲಾಗುವುದು. ಕೇಂದ್ರ ಸರ್ಕಾರದಿಂದ ಖಾಯಂ ಬೋಧಕರ ನೇಮಕಾತಿಗೆ ಅನುಮತಿ ಲಭಿಸುವವರೆಗೆ ಹತ್ತಿರದ ಕೇಂದ್ರೀಯ ವಿದ್ಯಾಲಯಗಳ ಬೋಧಕರನ್ನು ನೇಮಿಸಲಾಗುವುದು ಎಂದರು.

9.38 ಎಕರೆ ಭೂಮಿ ಮಂಜೂರು, 80 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ : ಜಿಲ್ಲಾಡಳಿತದಿಂದ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ಇಂಗಳದಾಳು ಬಳಿ ಸರ್ವೇ ನಂ 27/3 ರಲ್ಲಿ 9.38 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಸದ್ಯ ಮಂಜೂರು ಮಾಡಿರುವ ಭೂಮಿಯಲ್ಲಿ ಹೈ ಓಲ್ಟೇಜ್ ವಿದ್ಯುತ್ ತಂತಿಗಳು ಹಾದು ಹೋಗಿವೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತ ಪಿ.ಸಿ.ರಾಜು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆ.ಪಿ.ಟಿ.ಸಿ.ಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಭರವಸೆ ನೀಡಿದರು.
ಕೇಂದ್ರ ಸರ್ಕಾರ ನಿಯಮಾನುಸಾರ ಅನುಮೋದನೆ ದೊರೆತ ಕೇಂದ್ರ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕೆ ರೂ.80 ಕೋಟಿ ಅನುದಾನ ದೊರೆಯಲಿದೆ. ಕೇಂದ್ರ ಲೋಕೋಪಯೋಗಿ ಇಲಾಖೆ ವತಿಯಿಂದ 18 ರಿಂದ 24 ತಿಂಗಳಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು  ಸಹಾಯಕ ಆಯುಕ್ತ ಪಿ.ಸಿ.ರಾಜು ಮಾಹಿತಿ ನೀಡಿದರು.
ವರ್ಗಾವಣೆಗೊಂಡ ಸರ್ಕಾರಿ ನೌಕರರ ಮಕ್ಕಳಗೆ ಆದ್ಯತೆ : ಕೇಂದ್ರೀಯ ವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ನೌಕರರು, ಕೇಂದ್ರ ಸರ್ಕಾರದ ಓಡೆತನದ ಸಾರ್ವಜನಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ರಾಜ್ಯ ಸರ್ಕಾರದ ನೌಕರರು, ರಾಜ್ಯ ಸರ್ಕಾರದ ಓಡೆತನದ ಸಾರ್ವಜನಿಕ ನಿಗಮ, ಸಂಸ್ಥೆಗಳಿಲ್ಲಿ ನೌಕರರು ಹಾಗೂ ಇತರೆ ಸಾರ್ವಜನಿಕರ ಮಕ್ಕಳಿಗೆ ಅನುಕ್ರಮವಾಗಿ ಪ್ರವೇಶಾತಿಯನ್ನು ನೀಡಲಾಗುವುದು. ಇದುವರೆ ರಾಜ್ಯದಲ್ಲಿ 53 ಕೇಂದೀಯ ವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿವೆ. ಹೆಚ್ಚಿನ ಬೇಡಿಕೆ ಕಂಡುಬಂದರೆ ವಿದ್ಯಾಲಯದ ಪ್ರವೇಶಾತಿ ಮಿತಿಯನ್ನು ಹೆಚ್ಚುಗೊಳಿಸಲಾಗುವುದು ಎಂದು ಸಹಾಯಕ ಆಯುಕ್ತ ಪಿ.ಸಿ.ರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ, ಸರ್ಕಾರಿ ವಿಜ್ಞಾನ ಪದವಿ ಕಾಲೇಜು ಪ್ರಾಂಶುಪಾಲ ಹನುಂತರಾಯ, ದಾವರಣಗೆರೆ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಬೀರಬಲ್ಲ ಧಿಂಡ್ವಾ, ಕೇಂದ್ರ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ರಾಜಗೋಪಾಲ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಮೋಹನ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours