ಬೆಸ್ಕಾಂ ನೌಕರರು ಸುರಕ್ಷತೆಗೆ ಒತ್ತು ನೀಡಿ, ಕರ್ತವ್ಯ ನಿರ್ವಹಿಸಿ:ಕೆ.ವಿ.ಗೋವಿಂದಪ್ಪ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ)ನ.24:
“ನಿಮ್ಮ ಸುರಕ್ಷತೆ, ನಿಮ್ಮ ಜೀವ, ನಿಮ್ಮ ಕೈಯಲ್ಲಿದೆ. ಇದನ್ನು ಅರಿತು ಬೆಸ್ಕಾಂ ನೌಕರರು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು” ಎಂದು ಬೆಸ್ಕಾಂ ಚಿತ್ರದುರ್ಗ ವಲಯ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಬೆಸ್ಕಾಂ ಚಿತ್ರದುರ್ಗ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ವಿದ್ಯುತ್ ಸುರಕ್ಷತಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ತುಂಬಾ ಬೇಜಾಬ್ದಾರಿತನ, ಅಜಾಗರೂಕತೆಯಿಂದಾಗಿ ಹೆಚ್ಚಾಗಿ ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ಹಾಗಾಗಿ ತಾವುಗಳು ಮಾರ್ಗದಲ್ಲಿ ಕೆಲಸ ಮಾಡುವಾಗ ಮಾರ್ಗ ಮುಕ್ತತೆ ಪಡೆದು, ಜೊತೆಗೆ ಕಡ್ಡಾಯವಾಗಿ ಅರ್ಥಿಂಗ್ ಮಾಡಿಕೊಳ್ಳಬೇಕು. ಸುರಕ್ಷತಾ ಸಾಮಗ್ರಿಗಳಾದ ಹಗ್ಗ, ಏಣಿ, ಸೆಪ್ಟಿ ಬೆಲ್ಟ್, ಹೆಲ್ಮೆಟ್, ಹ್ಯಾಂಡ್ ಗ್ಲೌಸ್, ಲೈನ್ ಟೆಸ್ಟರ್, ಕಟಿಂಗ್ ಪ್ಲೇಯರ್, ಅರ್ಥಿಂಗ್ ರಾಡ್ ಸೇರಿದಂತೆ ಇತ್ಯಾದಿ ಸುರಕ್ಷತಾ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ನೌಕರರ ಸುರಕ್ಷತೆ ಬಹಳ ಮುಖ್ಯ ಎಂದು ಹೇಳಿದರು.
ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವಾಗ ಮೊಬೈಲ್ ಬಳಕೆ ಮಾಡಕೂಡದು. ಆದಷ್ಟು ತಾಳ್ಮೆ, ಏಕಾಗ್ರತೆಯಿಂದ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರದೆ ಕೆಲಸದ ಸ್ಥಳದಲ್ಲಿ ಭಯ, ಭಕ್ತಿಯಿಂದ ಕೆಲಸ ಮಾಡಿದಾಗ ಮಾತ್ರ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.
ವಿದ್ಯುತ್ ಕಣ್ಣಿಗೆ ಕಾಣದಂತಹ ವಾಹಕವಾಗಿದ್ದು, ಅದರೊಂದಿಗೆ ಕಾರ್ಯನಿರ್ವಹಿಸುವಾಗ ಸಾಕಷ್ಟು ಮುಂಜಾಗ್ರತಾ ಅಗತ್ಯವಾಗಿದೆ. ನಿಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಬಗೆಹರಿಸಲು ತೆರಳುವಾಗ ಕನಿಷ್ಟ ಇಬ್ಬರು ಅಥವಾ ಮೂರು ಮಂದಿ ಸಿಬ್ಬಂದಿ ತೆರಳಬೇಕು. ಯಾವುದೇ ಕಾರಣಕ್ಕೂ ಒಬ್ಬರು ತೆರಳಬೇಡಿ. ಬೆಸ್ಕಾಂ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗೊತ್ತಿದ್ದು, ಗೊತ್ತಿಲ್ಲದೆಯೋ ವಿದ್ಯುತ್ ಅವಘಡಗಳು ಸಂಭವಿಸುತ್ತಿದೆ. ಹಾಗಾಗಿ ಗಡಿಯಲ್ಲಿ ನಿಂತು ದೇಶ ಕಾಯುತ್ತಾ ಜನರಿಗೆ ರಕ್ಷಣೆ ನೀಡುವ ಸೈನಿಕರಂತೆ, ಬೆಸ್ಕಾಂ ನೌಕರರೂ ಜನರನ್ನು ಕಾಪಾಡಬೇಕು. ಅದು ನಿಮ್ಮ ಕರ್ತವ್ಯವೂ ಹೌದು. ಹಾಗಾಗಿ ವಿದ್ಯುತ್ ಅವಘಡಗಳು ಸಂಭವಿಸದಂತೆ ರೈತರು, ಸಾರ್ವಜನಿಕರಿಗೆ ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿದರೆ ವಿದ್ಯುತ್ ಅವಘಡಗಳನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಚಿತ್ರದುರ್ಗ ವಿಭಾಗದ ವ್ಯಾಪ್ತಿಯಲ್ಲಿ 2022ರ ಏಪ್ರಿಲ್ ಮಾಹೆಯಿಂದ ಈವರೆಗೆ 27 ವಿದ್ಯುತ್ ಅವಘಡಗಳು ಸಂಭವಿಸಿವೆ. ಹಿರಿಯೂರು, ಚಿತ್ರದುರ್ಗದಲ್ಲಿ ಹೆಚ್ಚು ಅಘಘಡಗಳು ಸಂಭವಿಸಿದ್ದು, ಮುಂದಿನ ದಿನಗಳಲ್ಲಿ ಅವಘಡಗಳು ಸಂಭವಿಸದಂತೆ ಕ್ರಮವಹಿಸಬೇಕು ಎಂದು ಹೇಳಿದರು.
ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಡಿ.ಜಯಣ್ಣ ಮಾತನಾಡಿ, ಬೆಸ್ಕಾಂ ನೌಕರರು ಸುರಕ್ಷತಾ ಸಾಮಗ್ರಿಗಳನ್ನು ಧರಿಸಿಕೊಂಡು, ಸುರಕ್ಷತಾ ವಲಯ ನಿರ್ಮಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಅಪಘಾತ ರಹಿತ ವಿಭಾಗವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಹೇಳಿದರು.
ಹೊಸದುರ್ಗ ಉಪ ವಿಭಾಗದ ಪವರ್ ಮ್ಯಾನ್ ವೆಂಕಟೇಶ್ ಮಾತನಾಡಿ, ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಕೆಲಸ ಹಾಗೂ ಸಮಯದ ಒತ್ತಡ ಇದ್ದೆ ಇರುತ್ತದೆ. ಆದಾಗ್ಯೂ ಸುರಕ್ಷಾತಾ ಕ್ರಮಗಳನ್ನು ಅನುಸರಿಸಿ ಅತ್ಯಂತ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದ ಅವರು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿಯೂ ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ. ಹಾಗಾಗಿ ಬೆಸ್ಕಾಂನಲ್ಲಿ ಸಿಬ್ಬಂದಿ ಕೊರತೆ ನಿಗಿಸಲು ಕ್ರಮವಹಿಸುವ ಅಗತ್ಯವಿದೆ ಎಂದು ತಮ್ಮ ಅನಿಸಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬೆಸ್ಕಾಂ ನೌಕರರಿಗೆ ಸುರಕ್ಷತಾ ಮಂತ್ರ ಬೋಧಿಸಲಾಯಿತು.
ಕಾರ್ಯಾಗಾರದಲ್ಲಿ ಬೆಸ್ಕಾಂ ದಾವಣಗೆರೆ ಅಧೀಕ್ಷಕ ಇಂಜಿನಿಯರ್ ಬಿ.ಎಸ್.ಜಗದೀಶ್, ಬೆಸ್ಕಾಂ ಗುಣಮಟ್ಟ ಸುರಕ್ಷತಾ ಮತ್ತು ಪ್ರಮಾಣಿತ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಮತ, ಕೆಪಿಟಿಸಿಎಲ್ ಟಿ.ಎಲ್ ಮತ್ತು ಎಸ್.ಆರ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಾಜಿಯಾ, ಲೆಕ್ಕ ಅಧಿಕಾರಿಗಳಾದ ದೇವರಾಜಯ್ಯ, ತಿಪ್ಪೇಶ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಮಹಂತೇಶ್, ಸ್ಥಳೀಯ ಸಮಿತಿ ಅಧ್ಯಕ್ಷ ಆರ್.ರವಿಕುಮಾರ್, ಕಾರ್ಯದರ್ಶಿ ಚಿದಾನಂದಪ್ಪ ಸೇರಿದಂತೆ ಬೆಸ್ಕಾಂ ಅಧಿಕಾರಿಗಳು, ನೌಕರರು ಇದ್ದರು.
[t4b-ticker]

You May Also Like

More From Author

+ There are no comments

Add yours