ಆಡುಮಲ್ಲೇಶ್ವರಕ್ಕೆ ನೂತನ ಸಾರಿಗೆ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ

 

 

 

 

ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ನಗರ ಸಾರಿಗೆ ಕಾರ್ಯಾಚರಣೆ.
ಚಿತ್ರದುರ್ಗ (ಕರ್ನಾಟಕ ವಾರ್ತೆ) ಅಕ್ಟೋಬರ್ 23:
ಚಿತ್ರದುರ್ಗ ನಗರದ ಮದಕರಿ ಸರ್ಕಲ್‍ನಿಂದ ಆಡುಮಲ್ಲೇಶ್ವರ ನೂತನ ನಗರ ಸಾರಿಗೆ ಮಾರ್ಗಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಚಾಲನೆ ನೀಡಿದರು.
ನಗರದ ಮದಕರಿ ಸರ್ಕಲ್‍ನಲ್ಲಿ ಭಾನುವಾರ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗೀಯ ಘಟಕದಿಂದ ಮದಕರಿ ಸರ್ಕಲ್ ಟು ಆಡುಮಲ್ಲೇಶ್ವರ ನೂತನ ಸಾರಿಗೆ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಐತಿಹಾಸಿಕ ಕೋಟೆನಾಡಿನ ಸುಂದರ ಪ್ರವಾಸಿ ತಾಣಗಳಲ್ಲೊಂದಾದ ಜೋಗಿಮಟ್ಟಿಯ ಆಡುಮಲ್ಲೇಶ್ವರಕ್ಕೆ ಆಟೋದಲ್ಲಿ ಹೋಗಿ ಬರುವುದು ದುಬಾರಿಯಾಗಲಿದೆ. ಈ ಹಿನ್ನಲೆಯಲ್ಲಿ ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ಘಟಕದಿಂದ ನಗರ ಸಾರಿಗೆ ಕಾರ್ಯಚರಣೆ ನಡೆಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಜೋಗಿಮಟ್ಟಿಯ ಆಡುಮಲ್ಲೇಶ್ವರ ವನ್ಯಧಾಮವನ್ನು ವೀಕ್ಷಣೆ ಮಾಡಲು ರಜೆಯ ದಿನಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ, ಪ್ರವಾಸಿಗರು, ಸಾರ್ವಜನಿಕರು ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ಆಡುಮಲ್ಲೇಶ್ವರಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಉತ್ತಮವಾಗಿಲ್ಲದಿರುವುದುರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಆಡುಮಲ್ಲೇಶ್ವರ ವನ್ಯಧಾಮಕ್ಕೆ ನಗರ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದ ಕಡಿಮೆ ದರದಲ್ಲಿ ನಗರದ ಜನತೆ ಸಂಚಾರ ಮಾಡಲು ಅನುಕೂಲಮಾಡಿಕೊಟ್ಟಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದರು.
ಚಿತ್ರದುರ್ಗ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಆಡುಮಲ್ಲೇಶ್ವರಕ್ಕೆ ಸಾರ್ವಜನಿಕ ಪ್ರಯಾಣಿಕರ ಹಿತ ದೃಷ್ಠಿಯಿಂದ ಪ್ರತಿ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಬೆಳಿಗ್ಗೆ 9.30ಕ್ಕೆ, 1.30ಕ್ಕೆ ಹಾಗೂ ಸಂಜೆ 4.30ಕ್ಕೆ ನಗರ ಸಾರಿಗೆ ಬಸ್ ಸಂಚರಿಸಲಿದೆ. ನೂತನ ಬಸ್ ಕಾರ್ಯಚರಣೆಯು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಮದಕರಿ ಸರ್ಕಲ್, ಜೋಗಿಮಟ್ಟಿ ವೃತ್ತ ಮಾರ್ಗವಾಗಿ ದಾರುಕಾ ಬಡಾವಣೆ ಹಾಗೂ ಆಡುಮಲ್ಲೇಶ್ವರ ತಲುಪಲಿದೆ ಎಂದು ಕೆಎಸ್‍ಆರ್‍ಟಿಸಿ ಘಟಕ ವ್ಯವಸ್ಥಾಪಕ ಎಂ.ಹೊನ್ನಪ್ಪ ಮಾಹಿತಿ ನೀಡಿದರು.
ಚಿತ್ರದುರ್ಗ ಬಸ್ ನಿಲ್ದಾಣದಿಂದ ಆಡುಮಲ್ಲೇಶ್ವರ ಕಿರು ಮೃಗಾಲಯವು 6 ಕಿ.ಮೀ ದೂರವಿದ್ದು, ಚಿತ್ರದುರ್ಗ ಬಸ್ ನಿಲ್ದಾಣದಿಂದ ಜೋಗಿಮಟ್ಟಿ ವೃತ್ತಕ್ಕೆ ರೂ.8, ದಾರುಕಾ ಬಡಾವಣೆಗೆ ರೂ.10 ಹಾಗೂ ಆಡುಮಲ್ಲೇಶ್ವರಕ್ಕೆ ರೂ.20 ಬಸ್ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವೆಂಕಟೇಶ್, ಹರೀಶ್, ಶ್ರೀನಿವಾಸ್, ನಾಮನಿರ್ದೇಶನ ಸದಸ್ಯರಾದ ಕೃಷ್ಣ, ನಾಗರಾಜ್, ಕೆಎಸ್‍ಆರ್‍ಟಿಸಿ ಚಿತ್ರದುರ್ಗ ವಿಭಾಗೀಯ ಘಟಕದ ವಿಭಾಗೀಯ ಯಾಂತ್ರಿಕ ಅಭಿಯಂತರ ಟಿ.ಎಂ.ಅಯಾಜ್ ಸೇರಿದಂತೆ ಕೆಎಸ್‍ಆರ್‍ಟಿಸಿ ಸಿಬ್ಬಂದಿ ಹಾಗೂ ಮುಖಂಡರಾದ ವೇದ ಪ್ರಕಾಶ್, ಮಹೇಶ್, ಮತ್ತಿತರರು ಇದ್ದರು.
ಫೋಟೋ ವಿವರ: ಚಿತ್ರದುರ್ಗ ನಗರದ ಮದಕರಿ ಸರ್ಕಲ್‍ನಲ್ಲಿ ಭಾನುವಾರ ಆಡುಮಲ್ಲೇಶ್ವರ ನೂತನ ನಗರ ಸಾರಿಗೆ ಮಾರ್ಗಕ್ಕೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
=======

 

 

[t4b-ticker]

You May Also Like

More From Author

+ There are no comments

Add yours