ಎಸ್‍ಎಸ್‍ಎಲ್‍ಸಿ ವರೆಗೂ ಆರ್‍ಟಿಇ ನಡಿ ಮಕ್ಕಳಿಗೆ ಶಿಕ್ಷಣ ಮುಂದುವರಿಕೆಗೆ ಅವಕಾಶವಾಗಬೇಕು:ಅಧ್ಯಕ್ಷೆ ಜಯಶ್ರೀ

 

 

 

 

ಎಸ್‍ಎಸ್‍ಎಲ್‍ಸಿ ವರೆಗೂ ಆರ್‍ಟಿಇ ನಡಿ ಮಕ್ಕಳಿಗೆ ಶಿಕ್ಷಣ ಮುಂದುವರಿಕೆಗೆ ಅವಕಾಶವಾಗಬೇಕು
*****************
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಸರ್ಕಾರಕ್ಕೆ ಶಿಫಾರಸು
*****************
ಚಿತ್ರದುರ್ಗ ಅ. 21 (ಕರ್ನಾಟಕ ವಾರ್ತೆ) :
ಪ್ರಸ್ತುತ ಆರ್‍ಟಿಇ (ಶಿಕ್ಷಣ ಹಕ್ಕು) ನಡಿ ಇದುವರೆಗೆ 8 ನೇ ತರಗತಿಯವರೆಗೆ ಮಕ್ಕಳು ಖಾಸಗಿ ಶಾಲೆಗಳಲ್ಲಿಯೂ ಉಚಿತವಾಗಿ ಶಿಕ್ಷಣ ಪಡೆಯಲು ಅವಕಾಶವಿದೆ, ಮಕ್ಕಳ ಉತ್ತಮ ಭವಿಷ್ಯ ದೃಷ್ಟಿಯಿಂದ ಇದನ್ನು 10 ನೇ ತರಗತಿಯವರೆಗೂ ವಿಸ್ತರಿಸುವಂತೆ ಆಯೋಗವು ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಜಯಶ್ರೀ ಅವರು ಹೇಳಿದರು.
ಆರ್‍ಟಿಇ, ಪೋಕ್ಸೋ ಹಾಗೂ ಬಾಲನ್ಯಾಯ ಕಾಯ್ದೆ ಅನುಷ್ಠಾನ ಕುರಿತು ಮತ್ತು ಮಕ್ಕಳೂ ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆರ್‍ಟಿಇ ನಡಿ ಪ್ರಸ್ತುತ 7981 ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ, ಶಾಲೆಯಿಂದ 1587 ಮಕ್ಕಳು ಹೊರಗುಳಿದಿದ್ದರು, ಈ ಪೈಕಿ 1537 ವಿದ್ಯಾರ್ಥಿಗಳನ್ನು ಪುನಃ ಶಿಕ್ಷಣದ ವಾಹಿನಿಗೆ ಕರೆತರಲಾಗಿದೆ ಎಂದು ಡಿಡಿಪಿಐ ರವಿಶಂಕರ್ ರೆಡ್ಡಿ ಅವರು ಮಾಹಿತಿ ನೀಡಿದರು.  ಆಯೋಗದ ಅಧ್ಯಕ್ಷರು ಪ್ರತಿಕ್ರಿಯಿಸಿ, 16 ವರ್ಷದವರೆಗೂ ಕಡ್ಡಾಯ ಶಿಕ್ಷಣ ಕಾಯ್ದೆ ಇರುವುದರಿಂದ, ಆರ್‍ಟಿಇ ನಡಿ 10ನೇ ತರಗತಿಯವರೆಗೂ ಮಕ್ಕಳು ಉಚಿತವಾಗಿ ತಮ್ಮ ವ್ಯಾಸಂಗ ಮುಂದುವರೆಸಲು ಅವಕಾಶ ಮಾಡಿ ಎಂದು ಸಾರ್ವಜನಿಕರಿಂದ ಮನವಿ ಕೇಳಿಬರುತ್ತಿವೆ.  ಹೀಗಾಗಿ ಆಯೋಗವು ಕೂಡ ಸಾರ್ವಜನಿಕರ ಮನವಿಯನ್ನು ಪುರಸ್ಕರಿಸಿ, ಆರ್‍ಟಿಇ ನಡಿ 10 ನೇ ತರಗತಿಯವರೆಗೂ ಮಕ್ಕಳು ಉಚಿತವಾಗಿ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ವಿಸ್ತರಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಿಫಾರಸು ಮಾಡಲಿದೆ.  ಎಲ್ಲ ಮಕ್ಕಳು ಶಾಲೆಯಿಂದ ಹೊರಗುಳಿಯದೆ, ಕನಿಷ್ಟ 10 ನೇ ತರಗತಿಯವರೆಗೆ ಕಡ್ಡಾಯವಾಗಿ ಶಿಕ್ಷಣ ಪಡೆಯುವಂತಾಗಬೇಕು ಎಂದರು.  ಅಂಗನವಾಡಿ ಕಟ್ಟಡಕ್ಕೆ ನಿವೇಶನ ಲಭ್ಯವಿಲ್ಲದಿರುವ ಕಡೆ, ಸರ್ಕಾರಿ ಶಾಲಾ ಆವರಣದಲ್ಲಿಯೇ ಅಂಗನವಾಡಿ ಕಟ್ಟಡಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
ಎಲ್ಲ ಶಾಲೆ ಮಕ್ಕಳಿಗೆ ತೆರೆದ ಮನೆ :
**********ಶಾಲಾ ಮಕ್ಕಳನ್ನು ಠಾಣೆಗೆ ಭೇಟಿ ಮಾಡಿಸಿ, ಮಕ್ಕಳಿಗೆ ಪೊಲೀಸ್ ಬಗೆಗಿನ ಭಯ ಹೋಗಲಾಡಿಸಿ, ಪೊಲೀಸ್‍ಇಲಾಖೆಯ ಕಾರ್ಯಗಳು, ರಸ್ತೆ ಸುರಕ್ಷತಾ ನಿಯಮಗಳು, ಬಾಲ್ಯ ವಿವಾಹ, ಮಕ್ಕಳ ರಕ್ಷಣೆಗೆ ಇರುವ ಕಾಯ್ದೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ತೆರೆದ ಮನೆ ಕಾರ್ಯಕ್ರಮದಡಿ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಅವರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿ ಆಯೋಗದ ಅಧ್ಯಕ್ಷರು ಜನವರಿ ತಿಂಗಳ ಒಳಗಾಗಿ ಜಿಲ್ಲೆಯ ಎಲ್ಲ ಶಾಲೆಯ ಮಕ್ಕಳಿಗೂ ಕೂಡ ತೆರೆದ ಮನೆ ಕಾರ್ಯಕ್ರಮದಡಿ ಪೊಲೀಸ್ ಠಾಣೆಗೆ ಭೇಟಿ ಮಾಡಿಸಿ, ಅವರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕು.  ನವೆಂಬರ್ ತಿಂಗಳನ್ನು ಮಕ್ಕಳ ತಿಂಗಳಾಗಿ ಆಚರಿಸುವುದರಿಂದ, ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ಕಡ್ಡಾಯವಾಗಿ ಮಕ್ಕಳ ಗ್ರಾಮ ಸಭೆಗಳನ್ನು ಆಯೋಜಿಸಿ, ಮಕ್ಕಳು ನಿರ್ಭೀತಿಯಿಂದ ಈ ಸಭೆಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ಕಲ್ಪಿಸಬೇಕು.  ಎಲ್ಲ ಶಾಲೆಗಳಲ್ಲಿ ಒಳ್ಳೆಯ ಸ್ಪರ್ಶ ಹಾಗೂ ಕೆಟ್ಟ ಸ್ಪರ್ಶ (ಗುಡ್ ಟಚ್ ಅಂಡ್ ಬ್ಯಾಡ್ ಟಚ್) ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಭಿತ್ತಿ ಪತ್ರಗಳನ್ನು ಅಳವಡಿಸಬೇಕು,  ಅಲ್ಲದೆ ಶಾಲೆಗಳಲ್ಲಿ ಮಕ್ಕಳಿಗೆ ಅರಿವು ಮೂಡಿಸಬೇಕು ಎಂದು ಆಯೋಗದ ಅಧ್ಯಕ್ಷರು ಸೂಚನೆ ನೀಡಿದರು.
118 ಪೋಕ್ಸೋ ಕೇಸ್‍ಗಳಿವೆ :
***********ಎಸ್‍ಪಿ ಪರಶುರಾಂ ಅವರು ಮಾತನಾಡಿ, ಕಳೆದ ವರ್ಷ 82 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದವು, ಈ ಪೈಕಿ 5 ಸುಳ್ಳು ಪ್ರಕರಣಗಳಾಗಿದ್ದವು, 72 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.  ಈ ವರ್ಷ 79 ಪೋಕ್ಸೋ ಕೇಸ್‍ಗಳು ದಾಖಲಾಗಿದ್ದು, ಈ ಪೈಕಿ 34 ತನಿಖೆಯಲ್ಲಿವೆ, 8 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಹಾಕಲು ಸಿದ್ಧಪಡಿಸಲಾಗಿದೆ.   ಅವಧಿ ಮೀರಿದ ಯಾವುದೇ ಪ್ರಕರಣಗಳು ಇಲ್ಲ ಎಂದರು.  ಆಯೋಗದ ಅಧ್ಯಕ್ಷರು ಪ್ರತಿಕ್ರಿಯಿಸಿ, ಕೋವಿಡ್ ಲಾಕ್‍ಡೌನ್ ಅವಧಿಯಲ್ಲಿ ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಹೆಚ್ಚು ವರದಿಯಾಗಿವೆ.  ಜಿಲ್ಲೆಯಲ್ಲಿ 2021 ರಲ್ಲಿ 136 ಹಾಗೂ ಈ ವರ್ಷ 71 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ.  ಪೋಕ್ಸೋ ಪ್ರಕರಣಗಳಲ್ಲಿ ಪೊಲೀಸರು 60 ದಿನಗಳ ಒಳಗಾಗಿ ಚಾರ್ಜ್ ಶೀಟ್ ಸಲ್ಲಿಸಬೇಕು.  ಬಾಲ್ಯ ವಿವಾಹ ಮಾಡಲು ಪ್ರಯತ್ನಿಸುವವರ ವಿರುದ್ಧ ಎಫ್‍ಐಆರ್ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಚಿತ್ರದುರ್ಗ ಮಠದ ಸ್ವಾಮೀಜಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಸಹಕಾರದಿಂದ ಉತ್ತಮವಾಗಿ ತನಿಖಾ ಕಾರ್ಯ ಕೈಗೊಳ್ಳಲು ಸಾಧ್ಯವಾಗಿದೆ ಎಂದು ಎಸ್‍ಪಿ ಅವರು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಡಾ. ಆರ್. ಪ್ರಭಾಕರ್ ಅವರು ಮಾತನಾಡಿ, ಮಠದ ಆವರಣದಲ್ಲಿನ ಹಾಸ್ಟೆಲ್‍ನಲ್ಲಿನ ಒಟ್ಟು 103 ಮಕ್ಕಳ ಪೈಕಿ 44 ಮಕ್ಕಳು ಚಿತ್ರದುರ್ಗ ಜಿಲ್ಲೆಯವರಾಗಿದ್ದು, 44 ಮಕ್ಕಳಿಗೂ ಮೂರು ಬಾರಿ ಆಪ್ತ ಸಮಾಲೋಚನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.  ಅಲ್ಲದೆ ಉಳಿದ ಜಿಲ್ಲೆಗಳಿಗೆ ಸಂಬಂಧಿಸಿದ ಮಕ್ಕಳಿಗೆ ಆಯಾ ಜಿಲ್ಲೆಯಲ್ಲಿಯೇ ಮಕ್ಕಳ ಕಲ್ಯಾಣ ಸಮಿತಿಯಿಂದ ಮೂರು ಬಾರಿ ಆಪ್ತ ಸಮಾಲೋಚನೆ ನಡೆಸಲು ನಿರ್ದೇಶನವಿದೆ ಎಂದರು.  ಎಸ್‍ಪಿ ಪರಶುರಾಮ್ ಅವರು ಮಾತನಾಡಿ, ಹಾಸ್ಟೆಲ್‍ನಲ್ಲಿದ್ದು, ಪ್ರಸ್ತುತ ಬೇರೆಡೆ ಹೋಗಿರುವ ಮಕ್ಕಳ ಪೈಕಿ, ಕಳೆದ 5 ವರ್ಷಗಳ ಅವಧಿಯಲ್ಲಿ ಹಾಸ್ಟೆಲ್‍ನಲ್ಲಿದ್ದು, ಬೇರೆಡೆ ಹೋಗಿರುವ ಮಕ್ಕಳ ವಿವರವನ್ನು ಒದಗಿಸಿದಲ್ಲಿ, ದೂರುಗಳ ಬಗ್ಗೆ ತನಿಖೆಗೆ ಅನುಕೂಲವಾಗಲಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನ ಪಡೆದು, ಬಳಿಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು,  ಮಠದ ಹಾಸ್ಟೆಲ್‍ನಲ್ಲಿದ್ದ ಮಕ್ಕಳ ವಿವರ ಸಂಗ್ರಹಿಸಿ ಎಸ್‍ಪಿ ಅವರಿಗೆ ನೀಡಲು ಕ್ರಮ ವಹಿಸಬೇಕು.  ರಕ್ಷಣೆಯಲ್ಲಿರುವ ಮಕ್ಕಳ ಶಿಕ್ಷಣ ಅಬಾಧಿತವಾಗಿ ಮುಂದುವರೆಸಲು ಅನುಕೂಲವಾಗುವಂತೆ ಮಕ್ಕಳು ಕೋರುವ ಕಡೆ ಸರ್ಕಾರಿ ಹಾಸ್ಟೆಲ್‍ನಲ್ಲಿ ಪ್ರವೇಶಕ್ಕೆ ಅವಕಾಶ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಉಪಕಾರ್ಯದರ್ಶಿ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ಹಾಸ್ಟಲ್ ವ್ಯವಸ್ಥೆ ಮಾಡಿ ಬಳಿಕ ಘಟನೋತ್ತರ ಅನುಮತಿ ಪಡೆಯಲಾಗುವುದು ಎಂದರು.
ಶಾಲೆಯಿಂದ ಸಮೀಪ ಮದ್ಯದಂಗಡಿ ಇದ್ದಲ್ಲಿ ತೆರವುಗೊಳಿಸಿ :
************ ಶಾಲೆ, ಕಾಲೇಜುಗಳಿಗೆ ಸಮೀಪದಲ್ಲಿ ಯಾವುದೇ ಮದ್ಯ ಮಾರಾಟದ ಅಂಗಡಿಗಳು ಇರುವುದು ಕಾನೂನು ಬಾಹಿರ.  ಹೀಗಾಗಿ ಜಿಲ್ಲೆಯ ಎಲ್ಲೆಡೆ ಇದನ್ನು ಪರಿಶೀಲಿಸಿ, ಒಂದು ವೇಳೆ ಶಾಲೆಯಿಂದ 100 ಮೀ. ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಅಂಗಡಿಗಳಿದ್ದಲ್ಲಿ ಸ್ಥಳಾಂತರಿಸಲು ಕ್ರಮ ವಹಿಸಬೇಕು ಎಂದು ಆಯೋಗದ ಅಧ್ಯಕ್ಷರು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ ರವಿಶಂಕರ ರೆಡ್ಡಿ ಅವರು, ದೊಡ್ಡಸಿದ್ದವ್ವನಹಳ್ಳಿಯ ಸರ್ಕಾರಿ ಶಾಲೆಯ ಕಾಂಪೌಂಡ್ ಎದುರುಗಡೆಯೇ ಎಂಎಸ್‍ಐಲ್ ಮದ್ಯ ಮಾರಾಟ ಮಳಿಗೆ ಇದೆ ಎಂದು ಸಭೆಯ ಗಮನಕ್ಕೆ ತಂದರು.  ಆಯೋಗದ ಅಧ್ಯಕ್ಷರು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, 15 ದಿನಗಳ ಒಳಗಾಗಿ ಇದನ್ನು ಬೇರೆಡೆ ಸ್ಥಳಾಂತರಿಸಲು ಕ್ರಮ ವಹಿಸಬೇಕು.  ಅಲ್ಲದೆ ಮದ್ಯ ಮಾರಾಟ ಅಂಗಡಿಗಳಲ್ಲಿ ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡದಂತೆ ಸೂಕ್ತ ಕ್ರಮ ವಹಿಸಬೇಕು, ತಪ್ಪಿದಲ್ಲಿ ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಕಟ್ಟೆಗಳು ತುಂಬಿದ್ದು, ಮಕ್ಕಳಲ್ಲಿ ಜಾಗೃತಿ ಮೂಡಿಸಿ :
********** ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸುರಿದ ವ್ಯಾಪಕ ಮಳೆಯಿಂದಾಗಿ ಎಲ್ಲೆಡೆ ಕೆರೆ, ಕಟ್ಟೆಗಳು ತುಂಬಿ ತುಳುಕುತ್ತಿವೆ.   ನೀರನ್ನು ಕಂಡರೆ, ಜಿಗಿಯುವುದು, ಆಡುವುದು ಮಾಡುವ ಮನಸ್ಥಿತಿಯ ಮಕ್ಕಳು ಅಪಾಯದ ಬಗ್ಗೆ ನಿರ್ಲಕ್ಷ ವಹಿಸುತ್ತಾರೆ.  ಹೀಗಾಗಿ ಎಲ್ಲ ಶಾಲೆ  ಕಾಲೇಜುಗಳಲ್ಲಿ ಮಕ್ಕಳಿಗೆ ಸುರಕ್ಷತೆಯ ಅರಿವು ಮೂಡಿಸಬೇಕು.  ಯಾವುದೇ ಮಕ್ಕಳು ಕೆರೆ, ಕಟ್ಟೆಗಳಲ್ಲಿ ನೀರಿಗಿಳಿಯದಂತೆ ಸೂಚನೆ ನೀಡಬೇಕು.  ಈ ಬಗ್ಗೆ ಡಿಡಿಪಿಐ ಅವರು ಸುತ್ತೋಲೆ ಹೊರಡಿಸಿ, ಶಾಲೆಗಳಿಗೆ ನಿರ್ದೇಶನ ನೀಡುವಂತೆ ಸೂಚನೆ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷರು, ಶಾಲೆ ಆವರಣದಲ್ಲಿ ಬಿಸಿಯೂಟ ಸ್ಥಳಗಳಲ್ಲಿ ಸುರಕ್ಷತೆ ಕೈಗೊಳ್ಳಬೇಕು.  ಶಿಕ್ಷಕರಿಗೆ ಈ ನಿಟ್ಟಿನಲ್ಲಿ ಸೂಕ್ತ ತಿಳುವಳಿಕೆ ನೀಡಬೇಕು,  ಕೃಷಿ ಹೊಂಡಗಳಿಗೆ ಬಿದ್ದು ಮಕ್ಕಳು ಸಾವನ್ನಪ್ಪಿರುವ ಅನೇಕ ಘಟನೆಗಳು ಜರುಗಿದ್ದು, ಈ ಬಗ್ಗೆ ಸೂಕ್ತ ರೀತಿಯಲ್ಲಿ ರಕ್ಷಣೆಗಾಗಿ ಕೃಷಿ ಹೊಂಡಗಳಿಗೆ ಫೆನ್ಸಿಂಗ್ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.
ಸಭೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಹಿರಿಯ ನ್ಯಾಯಾಧೀಶರಾದ ಗಿರೀಶ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ. ಲೋಕೇಶ್ವರಪ್ಪ, ಡಿಹೆಚ್‍ಒ ಡಾ. ರಂಗನಾಥ್, ಜಿ.ಪಂ. ಉಪಕಾರ್ಯದರ್ಶಿ ರಂಗಸ್ವಾಮಿ, ಚಿತ್ರದುರ್ಗ ವಿಭಾಗ ಡಿವೈಎಸ್‍ಪಿ ಅನಿಲ್ ಕುಮಾರ್ ಸೇರಿದಂತೆ ಎಲ್ಲ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಿಡಿಪಿಒ ಗಳು ಹಾಗೂ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours