ಜಿಲ್ಲೆಯಾದ್ಯಂತ ಅಪಘಾತ ಕಪ್ಪುಚುಕ್ಕೆ ಸ್ಥಳಗಳ ಗುರುತಿಸಲು ಜಂಟಿ ಸಮೀಕ್ಷೆಗೆ ಸೂಚನೆ: ಡಿಸಿ ಕವಿತಾ ಎಸ್.ಮನ್ನಿಕೇರಿ

 

 

 

 

ಚಿತ್ರದುರ್ಗ: (ಕರ್ನಾಟಕ ವಾರ್ತೆ)ಸೆಪ್ಟೆಂಬರ್21:
ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಮಟ್ಟದ ಹೆದ್ದಾರಿಗಳಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಗುರುತಿಸಲಾಗಿರುವ ಹಾಗೂ ಅಪಘಾತಕ್ಕೆ ಕಾರಣವಾಗುವ ಅಪಘಾತ ಕಪ್ಪುಚುಕ್ಕೆ ಸ್ಥಳಗಳ ಕುರಿತು ವಿವಿಧ ಇಲಾಖೆಗಳ ಸಮನ್ವಯತೆಯಲ್ಲಿ ಜಂಟಿ ಸಮೀಕ್ಷಾ ಕಾರ್ಯ ಕೈಗೊಳ್ಳುವುದರ ಜೊತೆಗೆ ಅಪಘಾತಗಳನ್ನು ತಪ್ಪಿಸಲು ಕೈಗೊಳ್ಳಬೇಕಿರುವ ಮಾರ್ಗೋಪಾಯಗಳ ಕುರಿತು ಸಮಗ್ರ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾನಾಡಿದರು.
ಪದೇ ಪದೇ ಜರುಗುವ ಅಪಘಾತ ವಲಯಗಳಲ್ಲಿ ಅಪಘಾತ ನಿಯಂತ್ರಣಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮಗಳಾದ ರಿಪ್ಲೆಕ್ಟರ್, ಬ್ಲಿಂಕಿಂಗ್ ಲೈಟ್ಸ್, ರಸ್ತೆಯ ಅಕ್ಕಪಕ್ಕದ ಮರಗಳಿಗೆ ಕೆಮ್ಮಣ್ಣು, ಸುಣ್ಣ ಬಳಿಯುವುದು, ಸೂಚನಾ ಫಲಕ ಅಳವಡಿಸುವುದು ಸೇರಿದಂತೆ ಅಪಘಾತ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.
ಈ ಹಿಂದೆ ಗುರಿತಿಸಲಾಗಿರುವ ಕಪ್ಪುಚುಕ್ಕೆ ಸ್ಥಳಗಳಲ್ಲಿ ಅಪಘಾತ ತಪ್ಪಿಸಲು ಬ್ಲಿಂಕಿಂಗ್ ಲೈಟ್ಸ್ ಸೇರಿದಂತೆ ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳುವ ನಿರ್ದೇಶನಗಳನ್ನು ಈಗಾಗಲೇ ಪಾಲಿಸಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಈಗಾಗಲೇ ಗುರುತಿಸಲಾಗಿರುವ ಅಪಘಾತ ವಲಯಗಳೊಂದಿಗೆ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ನಗರದ ಜೆಎಂಐಟಿ ವೃತ್ತ, ಬಸವೇಶ್ವರ ಆಸ್ಪತ್ರೆ, ನಾಮಕಲ್ ಗ್ಯಾರೇಜ್, ಹಂಪನೂರು, ಕೊಳಹಾಳ್, ಈರಜ್ಜನಹಟ್ಟಿ, ಕೊಳಹಾಳ, ಚಿಕ್ಕಬೆನ್ನೂರು, ಹಿರಿಯೂರು ನಗರದ ವೇದಾವತಿ ಬ್ರಿಡ್ಜ್, ದುಮ್ಮಿ, ಹೊಳಲ್ಕೆರೆ-ಹೊಸದುರ್ಗ ರಸ್ತೆ ಸೇರಿದಂತೆ ಹೆಚ್ಚು ಅಪಘಾತ ಸಂಭವಿಸುವ ಜಿಲ್ಲೆಯಾದ್ಯಂತ 15 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಅಪಘಾತ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕಾಗಿದೆ ಎಂದು ಹೇಳಿದ ಅವರು, 46 ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸುವ ಅಗತ್ಯವಿದೆ.  ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಬದಿಯ ಡಾಬಾಗಳಲ್ಲಿ ಊಟದ ಜೊತೆಗೆ ಅನಧಿಕೃತವಾಗಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಇದರಿಂದ ಅಪಘಾತಗಳು ಹೆಚ್ಚಾಗಿ ನಡೆಯುತ್ತವೆ.  ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶ ಮಾಡುವ ಮಾರ್ಗದಲ್ಲಿ ಹಾಗೂ ದಾವಣಗೆರೆಯಿಂದ ಚಿತ್ರದುರ್ಗ ನಗರಕ್ಕೆ ಪ್ರವೇಶಿಸುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಪ್ರವೇಶಕ್ಕೆ ಮುನ್ನವೇ ರಸ್ತೆಯಲ್ಲಿ ಸರಿಯಾದ ಸೂಚನಾ ಫಲಕ ಅಳವಡಿಸದೇ ಇರುವುದರಿಂದ ವಾಹನಗಳು ಮುಂದೆ ಸಾಗಿ ಮತ್ತೆ ಹಿಂದೆ ಬರುವಂತಾಗಿದೆ. ಹಾಗಾಗಿ ಇಂತಹ ಕಡೆ ಸೂಚನಾ ಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು  ತಿಳಿಸಿದರು.
ಲಿಖಿತ ದೃಢೀಕರಣ ನೀಡಲು ಸೂಚನೆ:
*********** ಚಿತ್ರದುರ್ಗ ನಗರದ ವಿವಿಧೆಡೆ ರಸ್ತೆ ಹಾಗೂ ವಿಭಜಕ ನಿರ್ಮಾಣದಲ್ಲಿ ಸರ್ಕಾರದ ಮಾನದಂಡ ಅನುಸರಿಸಲಾಗಿದೆಯೇ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಪ್ರಶ್ನಿಸಿದರು, ಅಲ್ಲದೆ ಸರ್ಕಾರದ ಮಾನದಂಡ ಅನುಸರಿಸಿರುವ ಕುರಿತು ಲಿಖಿತವಾಗಿ ದೃಢೀಕರಣ ನೀಡಬೇಕು, ನಗರ ವ್ಯಾಪ್ತಿಯಲ್ಲಿ ನಿರ್ಮಿಸಿರುವ ಪ್ರತಿಯೊಂದು ರಸ್ತೆಯ ಬಗ್ಗೆ ಸಂಪೂರ್ಣ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು.  ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ್ ಅವರು, ನಗರ ವ್ಯಾಪ್ತಿಯಲ್ಲಿ ಸರ್ಕಾರದ ಮಾನದಂಡವನ್ನು ಅನುಸರಿಸಿಯೇ ರಸ್ತೆ ಹಾಗೂ ಡಿವೈಡರ್ ನಿರ್ಮಿಸಲಾಗಿದೆ ಈ ಬಗ್ಗೆ ಲಿಖಿತವಾಗಿ ದೃಢೀಕರಣ ನೀಡಲಾಗುವುದು ಎಂದರು.
ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಏಕಮುಖ ರಸ್ತೆ ಎಂದು  (ಒನ್‍ವೇ) ಅಧಿಸೂಚನೆಯಾಗಿದ್ದರೂ ತಡೆಗೋಡೆ ನಿರ್ಮಿಸಲಾಗಿದ್ದು, ಇದರ ಅಗತ್ಯವಿತ್ತೇ? ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಭಿಪ್ರಾಯ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಏಕಮುಖ ರಸ್ತೆ ಎಂದು ಈ ಹಿಂದೆಯೇ ಅಧಿಸೂಚಿಸಿರುವುದರಿಂದ ತಡೆಗೋಡೆಯ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.  ಈ ಮಾರ್ಗದ ರಸ್ತೆ ವಿಸ್ತರಣೆ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯದ ತೀರ್ಪು ಪ್ರಕಟವಾದ ನಂತರ ತಡೆಗೋಡೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಈಗಾಗಲೇ 31 ಆಟೋ ನಿಲ್ದಾಣಗಳಿವೆ. ಇನ್ನೂ ಹೆಚ್ಚಿನ ಸ್ಥಳಗಳಲ್ಲಿ ಆಟೋ ನಿಲ್ದಾಣಕ್ಕೆ ಸ್ಥಳ ಗುರುತಿಸುವಂತೆ  ಪೊಲೀಸ್ ಇಲಾಖೆಗೆ ಮನವಿ ಬರುತ್ತಿದ್ದು, ಈ ಸಂಬಂಧ ನಗರಸಭೆ ಅವರು ಸ್ಥಳ ಗುರುತಿಸುವ ಜೊತೆಗೆ ಆಟೊ ನಿಲ್ದಾಣ ನಿರ್ಮಿಸಲು ಕ್ರಮ ವಹಿಸಬೇಕಿದೆ ಎಂದು ಸಂಚಾರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಾಜು ಸಭೆಗೆ ಮಾಹಿತಿ ನೀಡಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಅಗತ್ಯ ಇರುವೆಡೆ ಆಟೋ ಸ್ಟ್ಯಾಂಡ್ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾರ್ಕಿಂಗ್‍ಗೆ ಸ್ಥಳ ಪರಿಶೀಲಿಸಿ ವರದಿ ನೀಡಿ:
*********ಚಿತ್ರದುರ್ಗ ನಗರದ ಪ್ರಮುಖ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ ಸರಿಯಾದ ಪಾರ್ಕಿಂಗ್‍ಗೆ ವ್ಯವಸ್ಥೆ ಇಲ್ಲ.  ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಮಾಡುತ್ತಿರುವುದರಿಂದ, ರಸ್ತೆ ಕಿರಿದಾಗಿ, ಒಂದು ವಾಹನ ಮುಂದೆ ಸಾಗುವವರೆಗೂ, ಬೇರೆ ವಾಹನ ಮುಂದಕ್ಕೆ ಸಂಚರಿಸಲು ಸಾಧ್ಯವಾಗುತ್ತಿಲ್ಲ.  ವಾಹನ ದಟ್ಟಣೆ ಹೆಚ್ಚಾಗಿ ಸುಗಮ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಂಚಾರ ಪೊಲೀಸ್ ಠಾಣೆ ಅಧಿಕಾರಿಗಳು ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಅಧಿಕಾರಿಗಳು ಚಿತ್ರದುರ್ಗ ನಗರದಲ್ಲಿ ಜಂಟಿ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು.  ದೊಡ್ಡ ಕಟ್ಟಡಗಳನ್ನು ಕಟ್ಟಲು, ನೆಲಮಹಡಿಯಲ್ಲಿ ಕಡ್ಡಾಯವಾಗಿ ಪಾರ್ಕಿಂಗ್‍ಗೆ ಅವಕಾಶ ಮಾಡಿಕೊಂಡಿದ್ದಲ್ಲಿ ಮಾತ್ರ ನಗರಸಭೆ ಅನುಮತಿ ನೀಡಬೇಕು.  ನಗರದ ವಿವಿಧೆಡೆ ಪಾರ್ಕಿಂಗ್‍ಗೆ ಇರುವ ಸ್ಥಳಗಳನ್ನು ಗುರುತಿಸಿಕೊಂಡು, ನೆಲಮಹಡಿಯಲ್ಲಿ ಪಾರ್ಕಿಂಗ್‍ಗೆ ವ್ಯವಸ್ಥೆ ಮಾಡಿಕೊಳ್ಳಬೇಕು, ಅಲ್ಲದೆ ಅದರ ಮೇಲ್ಭಾಗದಲ್ಲಿ ಮಳಿಗೆಗಳನ್ನು ನಿರ್ಮಿಸಿಕೊಂಡು ನಗರಸಭೆಗೆ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಲ್ಮೆಟ್ ಕಡ್ಡಾಯಗೊಳಿಸಿ :
*********** ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಹೆಲ್ಮೆಟ್ ಅನುಷ್ಠಾನವಾಗುತ್ತಿಲ್ಲ. ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಅನುಷ್ಠಾನ ಕಡ್ಡಾಯವಾಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದರು.  ಈ ಕುರಿತು ಉತ್ತರಿಸಿದ ಎಸ್‍ಪಿ ಅವರು, ಈಗಾಗಲೆ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದು ಎಸ್‍ಪಿ ಅವರು ಹೇಳಿದರು.
ಟ್ರಾಫಿಕ್ ನಿಯಂತ್ರಣಕ್ಕೆ ಸಿಗ್ನಲ್ ಅಳವಡಿಕೆ :
********** ನಗರದ ಗಾಂಧಿ ವೃತ್ತ ಹಾಗೂ ಎಸ್‍ಬಿಐ (ಹಿಂದಿನ ಎಸ್‍ಬಿಎಂ) ಬ್ಯಾಂಕ್ ವೃತ್ತದ ಬಳಿ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸುವುದು ಅಗತ್ಯವಾಗಿದ್ದು, ಈ ಬಗ್ಗೆ ಈ ಹಿಂದೆಯೂ ಪ್ರಸ್ತಾಪ ಮಾಡಲಾಗಿತ್ತು ಎಂದು ಎಸ್‍ಪಿ ಅವರು ಹೇಳಿದರು.  ಎರಡೂ ಕಡೆ ಸಿಗ್ನಲ್ ಲೈಟ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಫೆನ್ಸಿಂಗ್ ತೆಗೆಯುವವರ ವಿರುದ್ಧ ಕೇಸ್ ದಾಖಲಿಸಿ :
******* ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಹಾಗೂ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಸ್ತೆಯ ಇಕ್ಕೆಲಗಳಲ್ಲಿ ಕೆಲವೆಡೆ ಗೋಡೆ ಅಥವಾ ಫೆನ್ಸಿಂಗ್ ನಿರ್ಮಿಸಲಾಗಿದೆ.  ಆದರೆ ಕೆಲವು ಡಾಬಾಗಳು, ಹೋಟೆಲ್ ನವರು ಗೋಡೆ ಅಥವಾ ಫೆನ್ಸಿಂಗ್ ತೆರವುಗೊಳಿಸಿ, ಹೆದ್ದಾರಿಯಿಂದ ತಮ್ಮ ಅಂಗಡಿ, ಹೋಟೆಲ್‍ಗಳಿಗೆ ನೇರ ಪ್ರವೇಶಕ್ಕೆ ಅವಕಾಶ ಮಾಡಿಕೊಂಡಿದ್ದು, ಇದರಿಂದ ಅಪಘಾತ ಸಂಭವ ಹೆಚ್ಚಾಗಿದೆ ಎಂದು ಎಸ್‍ಪಿ ಅವರು ಹೇಳಿದರು.  ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಇಂತಹವುಗಳನ್ನು ಮುಚ್ಚಲು ಅನೇಕ ಸಲ ಕ್ರಮ ಕೈಗೊಂಡರೂ, ಇದು ಪುನರಾವರ್ತನೆಯಾಗುತ್ತಿದೆ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಎಸ್‍ಪಿ ಅವರು, ಅಂತಹ ಡಾಬಾ, ಹೋಟೆಲ್‍ಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಲ್ಲಿ, ಕಾನೂನು ರೀತ್ಯಾ ನಾವು ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಟಿ.ಎಸ್.ಮಲ್ಲಿಕಾರ್ಜುನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಸತೀಶ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯಿತ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ. ಸತ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours