ಮುರುಘಾ ಶರಣರಿಗೆ 9 ದಿನ ನ್ಯಾಯಾಂಗ ಬಂಧನ

 

 

 

 

ಚಿತ್ರದುರ್ಗ,ಸೆ.6: -ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮುರುಘಾ ಮಠದ ಶಿವಮೂರ್ತಿ ಶ್ರೀಗಳಿಗೆ ನ್ಯಾಯಾಲಯವು 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಇಂದು ಬೆಳಿಗ್ಗೆ ೧೧ಕ್ಕೆ ಶ್ರೀಗಳನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಕೆ.ಕೋಮಲಾ ಅವರು 9 ದಿನಗಳ ಕಾಲ ಸೆ.14 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು.
ಪೋಕ್ಸೋ ಪ್ರಕರಣದ ಸಂಬಂಧಿಸಿದಂತೆ ಸೆ.1 ರಂದು ಸೆರೆಯಾಗಿದ್ದ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಪ್ರಕರಣದ ತನಿಖೆಯ ದೃಷ್ಟಿಯಿಂದ ಸೆ.೨ರಂದು ತನಿಖಾಧಿಕಾರಿಗಳು ಪೊಲೀಸ್ ವಶಕ್ಕೆ ಪಡೆದಿದ್ದರು.
ಸೆ.೩ ರಂದು ಅವರನ್ನು ಪುರುಷತ್ವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆರೋಪಿಯು ಮುರುಘಾ ಮಠದಲ್ಲಿ ತಂಗುತ್ತಿದ್ದ ಕೊಠಡಿಯ ಮಹಜರು ಪ್ರಕ್ರಿಯೆ ಸೆ.೪ರಂದು ನಡೆದಿತ್ತು ಈ ಮಹಜರು ವರದಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

 

 

ಸೆ.7 ಕ್ಕೆ ಜಾಮೀನು ಅರ್ಜಿ:
ಕೋರ್ಟಿಗೆ ಹಾಜರು ಪಡಿಸುವ ಮುನ್ನ. ಶ್ರೀಗಳನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೋರ್ಟ್?ಗೆ ಹಾಜರು ಪಡಿಸುವ ವೇಳೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಶರಣರಿಗೆ ಜಾಮೀನು ಕೋರಿ ಅವರ ಪರ ವಕೀಲರು ಶನಿವಾರವೇ ಅರ್ಜಿ ಸಲ್ಲಿಸಿದ್ದಾರೆ. ಸೆ.7ರಂದು ಈ ಅರ್ಜಿ ವಿಚಾರಣೆಗೆ ಬರಲಿದೆ.
ಕೋರ್ಟ್ 9 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಪೊಲೀಸರು, ಮುರುಘಾ ಶರಣರನ್ನು ಬಿಗಿ ಬಂದೋಬಸ್ತಿನಲ್ಲಿ ಜೈಲಿಗೆ ಸ್ಥಳಾಂತರಿಸಲಾಯಿತು.
ಹಳೇ ಬೆಂಗಳೂರು ರಸ್ತೆಯಲ್ಲಿರುವ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದ್ದು, ಜಿಲ್ಲಾ ಕಾರಾಗೃಹ ಮುಂಭಾಗ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.

ಕೊಠಡಿಯ ಮಹಜರು:
ಬಾಲಕಿಯರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಸೆ.೧ರಂದು ಬಂಧನಕ್ಕೆ ಒಳಗಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ನಿನ್ನೆ ಮುರುಘಾ ಮಠಕ್ಕೆ ಕರೆತಂದ ಪೊಲೀಸರು, ಅವರು ತಂಗುತ್ತಿದ್ದ ಕೊಠಡಿಯ ಮಹಜರು ನಡೆಸಿದ್ದರು.
ಸಂತ್ರಸ್ತ ಬಾಲಕಿಯರು ಸೂಚಿಸಿದ್ದ ಪ್ರತೀ ಸ್ಥಳದಲ್ಲೂ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಸ್ವಾಮೀಜಿ ಕೊಠಡಿ, ಸ್ನಾನದ ಕೋಣೆ, ಕೊಠಡಿ ಮುಂಭಾಗ, ಸ್ಕೈಯ್ ವಾಕ್ ಸಮೀಪ ಹಾಗೂ ಹಾಸ್ಟೆಲ್ ಬಳಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ.
ಬಟ್ಟೆಗಳು ವಶ:
ಮಹಜರು ವೇಳೆ ಕೃತ್ಯಕ್ಕೆ ಸಂಬಂಧಿಸಿದ ಕೆಲ ಸಾಕ್ಷ್ಯಗಳ ಮಾಹಿತಿಯನ್ನೂ ಪೊಲೀಸರು ಕಲೆಹಾಕಿದ್ದಾರೆ. ಕೊಠಡಿಯಲ್ಲಿ ಇದ್ದ ಕೆಲವು ಬಟ್ಟೆಗಳನ್ನ ಪೊಲೀಸರು ಈ ವೇಳೆ ವಶಕ್ಕೆ ಪಡೆದುಕೊಂಡಿದ್ದಾರೆ. ಅದರೊಂದಿಗೆ ಮಠದ ಸಿಬ್ಬಂದಿಯನ್ನೂ ವಿಚಾರಣೆ ನಡೆಸಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಮುರುಘಾ ಶ್ರೀಗಳ ಕೋಣೆಗೆ ಯಾರೆಲ್ಲಾ ಹೋಗುತ್ತಿದ್ದರು. ಅವರ ಕೋಣೆಗೆ ಯಾರಿಗೆಲ್ಲಾ ಪ್ರವೇಶವಿತ್ತು ಎನ್ನುವ ಮಾಹಿತಿಯನ್ನು ಪೊಲೀಸರು ಕೇಳಿ ಪಡೆದುಕೊಂಡಿದ್ದಾರೆ. ಕೋಣೆಗೆ ಯಾರಿಗೆಲ್ಲ ಅವಕಾಶ ಇತ್ತು, ಬಾಲಕಿಯರು ಹೋಗುತ್ತದ್ದರೆ, ಹೋಗಿದ್ದರೆ, ಯಾರು ಕರ್ಕೊಂಡು ಹೋಗುತ್ತಿದ್ದರ ಎನ್ನುವುದರ ಮಾಹಿತಿ ಸಂಗ್ರಹ ಮಾಡಿದ್ದಾರೆ.

ಮುಂದುವರೆದ ವಿಚಾರಣೆ:
ಆರೋಪಿ ಮುರುಘಾ ಶರಣರು ತಂಗುತ್ತಿದ್ದ ಕೊಠಡಿಯಲ್ಲಿ ದೋಷಾರೋಪಕ್ಕೆ ಪೂರಕವಾಗಿ ಲಭ್ಯವಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಇನ್ನೂ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಹೇಳಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ ೧೬೪ರ ಅಡಿ ಸಂತ್ರಸ್ತ ಬಾಲಕಿಯರು ನ್ಯಾಯಾಲಯದಲ್ಲಿ ದಾಖಲಿಸಿದ ಹೇಳಿಕೆಯ ಪ್ರತಿಯು ಮುಚ್ಚಿದ ಲಕೋಟೆಯಲ್ಲಿ ತನಿಖಾಧಿಕಾರಿಯ ಕೈಸೇರಿದೆ. ಇದರಲ್ಲಿರುವ ಅಂಶಗಳ ಆಧಾರದಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನಲಾದ ಸ್ಥಳಕ್ಕೆ ಆರೋಪಿಯೊಂದಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ.
ವೈದ್ಯಕೀಯ ತಪಾಸಣೆ:
ಈ ನಡುವೆ ಪ್ರಕರಣದ ತನಿಖಾಧಿಕಾರಿ ಆಗಿರುವ ಡಿವೈಎಸ್‌ಪಿ ಅನಿಲ್ ಕುಮಾರ್ ನೇತೃತ್ವದ ತಂಡ ಕೇಳಿದ ಪ್ರಶ್ನೆಗಳಿಗೆ ಆರೋಪಿಯಿಂದ ಸಮರ್ಪಕ ಉತ್ತರ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಆರೋಪಿಯನ್ನು ಆಗಾಗ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಆರೋಗ್ಯದ ಮೇಲೆ ನಿಗಾ ಇಟ್ಟು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮುರುಘಾ ಮಠಕ್ಕೆ ತೆರಳಿದಂತೆ ಸ್ಥಳ ಮಹಜರ್ ವೇಳೆಯಲ್ಲಿ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಠಕ್ಕೆ ಬಂದ ಶ್ರೀಗಳ ಕಂಡಂತ ಅವರ ಶಿಷ್ಯವೃಂದವು, ಸ್ವಾಮೀಜಿ ಪರಿಸ್ಥಿತಿ ಕಂಡು ಕಣ್ಣೀರಿಟ್ಟಿರುವ ಬಗ್ಗೆ ತಿಳಿದು ಬಂದಿದೆ.
ವಿದ್ಯಾರ್ಥಿಗಳ ಸ್ಥಳಾಂತರ:
ಶ್ರೀಗಳ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿದ್ದ ಎಲ್ಲ ವಿದ್ಯಾರ್ಥಿನಿಯರನ್ನೂ ಆಗಸ್ಟ್ ೩೧ರಂದು ಮಠದ ಆವರಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.
೫ನೇ ತರಗತಿಯಿಂದ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡುತ್ತಿದ್ದ ೧೦೫ ವಿದ್ಯಾರ್ಥಿನಿಯರು ಹಾಸ್ಟೆಲ್‌ನಲ್ಲಿದ್ದರು. ಗಣೇಶ ಹಬ್ಬದ ಹಿಂದಿನ ದಿನ ೫೪ ಮಕ್ಕಳು ಪಾಲಕರೊಂದಿಗೆ ಊರಿಗೆ ತೆರಳಿದ್ದರು. ಉಳಿದವರಲ್ಲಿ ೧೨ ಮಕ್ಕಳಿಗೆ ಬಾಲಕಿಯರ ಬಾಲಮಂದಿರ ಹಾಗೂ ೩೭ ಮಕ್ಕಳಿಗೆ ಗೂಳಯ್ಯನಹಟ್ಟಿಯ ಮೊರಾರ್ಜಿ ವಸತಿ ಶಾಲೆಯಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಇಬ್ಬರು ಸಂತ್ರಸ್ತ ವಿದ್ಯಾರ್ಥಿನಿಯರನ್ನು ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ. ಲೋಕೇಶ್ವರಪ್ಪ ತಿಳಿಸಿದ್ದಾರೆ.
ವರದಿಗೆ ಸಿದ್ಧತೆ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಶ್ರೀಗಳ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧ ಕೈಗೊಂಡಿರುವ ತನಿಖಾ ಕ್ರಮಗಳ ಕುರಿತು ರಾಜ್ಯ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಆಯೋಗ ವಿವರವಾದ ವರದಿ ಕೇಳಿದೆ.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಆಯೋಗದ ಕಾರ್ಯದರ್ಶಿ ಈ ಸಂಬಂಧ ಪತ್ರ ಬರೆದಿದ್ದು ವರದಿ ನೀಡಲು ಸಿದ್ದತೆ ಕೈಗೊಳ್ಳಲಾಗಿದೆ.

[t4b-ticker]

You May Also Like

More From Author

+ There are no comments

Add yours