ಹೊಳಲ್ಕೆರೆ: ಚಿತ್ರದುರ್ಗ ಜಿಲ್ಲೆ ಹಾಗೂ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿತ್ರದುರ್ಗ ರವರ ಸೂಚನೆಯಂತೆ ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವ ಸಲುವಾಗಿ ದಿನಾಂಕ:27/08/2022ರ ಶನಿವಾರದಂದು ಹೊಳಲ್ಕೆರೆ ಪುರಸಭೆ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ವಿಶೇಷ ಆಂದೋಲವನ್ನು ಹೊಳಲ್ಕೆರೆ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು,
ಈ ವಿಶೇಷ ಆಂದೋಲನದಲ್ಲಿ ಪುರಸಭೆ ಸಿಬ್ಬಂದಿಗಳು, ಮಹಿಳಾ ಸ್ವ ಸಹಾಯ ಗುಂಪುಗಳು, ಮತಗಟ್ಟೆ ಮಟ್ಟದ ಅಧಿಕಾರಿಗಳು, ಪುರಸಭೆಯ ಸದಸ್ಯರಾದ ಸೈಯದ್ ಸಜೀಲ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್ ಬಿ ವಿಜಯಕುಮಾರ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಲಾಯಿತು ಹಾಗೂ ಮನೆ ಮನೆಗಳಿಗೆ ಭೇಟಿ ನೀಡಿ ಗುರುತಿನ ಚೀಟಿ ನಮೂನೆ ನೀಡಿ ಮತದಾರರ ಗುರುತಿನ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಗಳನ್ನು ಸಂಗ್ರಹಿಸಿ ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲಾಯಿತು. ಹೊಳಲ್ಕೆರೆ ಪುರಸಭೆಯ ಪೌರಕಾರ್ಮಿಕರೂ ಸಹ ಈ ಆಧಾರ್ ಜೋಡಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು.
ವೋಟರ್ ಹೆಲ್ಪ್ ಲೈನ್ ತಂತ್ರಾಂಶ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು ವಿದ್ಯಾವಂತ, ಪ್ರಜ್ಞಾವಂತ ನಾಗರಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ವಯಂ ಸೇವಾ ಸಂಸ್ಥೆಗಳು ಸಹ ಸ್ವಯಂ ಪ್ರೇರಿತರಾಗಿ ಈ ತಂತ್ರಾಂಶವನ್ನು ತಮ್ಮ ಮೊಬೈಲ್ನಲ್ಲಿ ಅನುಸ್ಥಾಪಿಸಿಕೊಂಡು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿ ಜೋಡಣೆ ಕಾರ್ಯಕ್ಕೆ ನೆರವಾಗುವಂತೆ ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂ ಮನವಿ ಮಾಡಿಕೊಂಡಿದ್ದಾರೆ.
+ There are no comments
Add yours