ಕಸ ವಿಂಗಡಣೆಗೆ ಧರ್ಮಪುರ ಗ್ರಾಮ ಪಂಚಾಯಿತಿ ಮಾದರಿ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 21:
ಸ್ವಚ್ಛ ಭಾರತ ಅಭಿಯಾನವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ಆರೋಗ್ಯ ದೃಷ್ಠಿಯಿಂದ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಮೊದಲೆಲ್ಲಾ ಹಳ್ಳಿಗಳಲ್ಲಿ ಹಸಿ ಕಸ, ಒಣ ಕಸ ಎಲ್ಲವನ್ನೂ ಮಿಶ್ರಣ ಮಾಡಿ ಮನೆಗಳ ಬಳಿ ಇರುತ್ತಿದ್ದ ತಿಪ್ಪೆಗುಂಡಿಗೆ ಎಸೆಯುತ್ತಿದ್ದರು. ಪಕ್ಕದಲ್ಲೇ ಮನೆಗಳಿರುತ್ತಿದ್ದ ಕಾರಣ ಸೊಳ್ಳೆಗಳು, ಕ್ರಿಮಿ ಕೀಟಗಳಿಗೆ ನಾವೇ ಆಹ್ವಾನ ನೀಡಿ ರೋಗಗಳನ್ನು ತಂದು ಕೊಳ್ಳುವಂತಹ ಪರಿಸ್ಥಿತಿ ನಾವೇ ನಿರ್ಮಿಸಿಕೊಂಡಿದ್ದೇವೆ. ಆದರೆ ಈಗ ಹಸಿ ಕಸ, ಒಣ ಕಸ ಪ್ರತ್ಯೇಕಗೊಳಿಸಿ ಮನೆ ಬಳಿ ಬರುವ ಸ್ವಚ್ಛತಾವಾಹಿನಿಗೆ ನೀಡುವುದರಿಂದ ನಮ್ಮ ಗ್ರಾಮ ಜೊತೆಗೆ ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿ ಧರ್ಮಪುರ ಗ್ರಾಮ ಪಂಚಾಯಿತಿಯ ಕಾರ್ಯ ಮಾದರಿ ಏನಿಸಿದೆ.

ಕಸ ನಿರ್ವಹಣೆಯಲ್ಲಿ ಧರ್ಮಪುರ ಯಶಸ್ವಿ: ಹಿರಿಯೂರು ತಾಲ್ಲೂಕಿನ ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರ, ಶ್ರಾವಣಗೆರೆ, ಕೃಷ್ಣಾಪುರ, ಅರಳಿಕೆರೆ, ಬೆನಕನಹಳ್ಳಿ ಗ್ರಾಮಗಳಲ್ಲಿ ಘನತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಪಂಚಾಯಿತಿ ವ್ಯಾಪ್ತಿಯ ಪ್ರತೀ ಮನೆಗೂ 2 ಕಸದ ಬುಟ್ಟಿಗಳನ್ನು ನೀಡಲಾಗಿದೆ. ಅದರಲ್ಲಿ ಹಸಿಕಸ  ಮತ್ತು ಒಣಕಸ ಎಂದು ವಿಂಗಡಣೆ ಮಾಡುವ ಕ್ರಮ ವಹಿಸಲಾಗಿದೆ. ಈ ಮೂಲಕ ಧರ್ಮಪುರ ಗ್ರಾಮ ಪಂಚಾಯಿತಿಯ ಕಾರ್ಯ ಯಶಸ್ವಿಯಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ನೀರು ನೈರ್ಮಲ್ಯ ಸಮಿತಿಯ ಸದಸ್ಯರುಗಳಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಘಟಕಾಂಶಗಳ ಕುರಿತು ಗ್ರಾಮ ಸಭೆಗಳಲ್ಲಿ ಮಾಹಿತಿ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ  ಕಸದ ತೊಟ್ಟಿಗಳನ್ನು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ.

 

 

ಕಸ ವಿಂಗಡಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು: ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಸಿಕಸ ಒಣ ಕಸ ನಿರ್ವಹಣೆ ಕುರಿತು ಸ್ವಚ್ಛವಾಹಿನಿ ಮೂಲಕ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕಸ ವಿಂಗಡಣೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಬೀದಿ ನಾಟಕದ ಮೂಲಕ ಮಾಹಿತಿ, ಮತ್ತು ಸ್ವಚ್ಛತಾವಾಹಿನಿಯಲ್ಲಿ ಕಸ ವಿಂಗಡಣೆಯ ಬಗ್ಗೆ ತಿಳಿ ಹೇಳುವಂತಹ ಹಾಡುಗಳ ಮೂಲಕ ಜನ ಜಾಗೃತಿ ಮೂಡಿಸಲಾಗಿದೆ.

ತ್ಯಾಜ್ಯ ವಿಲೇವಾರಿಗೆ ಶುಲ್ಕ ಸಂಗ್ರಹಣೆ : ಪ್ರತಿ ಮನೆಯಿಂದ ರೂ.20/- ಅಂಗಡಿ ಮತ್ತು ಹೋಟೆಲ್‍ಗಳಿಂದ ರೂ.40/- ಗಳ ಶುಲ್ಕವನ್ನು ಪಡೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಘನ ತ್ಯಾಜ್ಯ ಸಂಗ್ರಹಣೆ ವಿಂಗಡಣೆ  ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ. ಸ್ವಚ್ಛ ಸಂಕೀರ್ಣ ಘಟಕಗಳಲ್ಲಿ ಗ್ರಾಮ ಪಂಚಾಯಿತಿಯ ಸ್ವ-ಸಹಾಯ ಸಂಘದ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮನೆ ಜೊತೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಬೇಕು. ಪರಿಸರ ನಮ್ಮ ಮನೆಯೆಂದೇ ಭಾವಿಸಿ ಸ್ವಚ್ಛಗೊಳಿಸಿದರೆ ಧರ್ಮಪುರ ಗ್ರಾಮ ಪಂಚಾಯಿತಿಯಂತೆ ಇತರೆ ಗ್ರಾಮ ಪಂಚಾಯಿತಿಗಳು ಸಹ ಮಾದರಿ ಗ್ರಾಮ ಎನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.
ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ: ಧರ್ಮಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ. ಸಾರ್ವಜನಿಕರು ಈಗಾಗಲೇ ಕಸವನ್ನು ವಿಂಗಡಿಸಿ ಕೊಡುತ್ತಿದ್ದಾರೆ. ಸ್ವಚ್ಛ ಸಂಕೀರ್ಣ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸಂಗ್ರಹಿಸಿದ ಹಸಿಕಸ, ಒಣಕಸವನ್ನು ಬೇರ್ಪಡಿಸಲಾಗುತ್ತದೆ. ಸಂಗ್ರಹಿಸಿದ ಪ್ಲಾಸ್ಟಿಕ್, ರೊಟ್ಟು, ಗ್ಲಾಸ್‍ಗಳನ್ನು  ಕಸ ವಿಲೇವಾರಿ ಘಟಕದಲ್ಲಿ ಸಂಗ್ರಹಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಹಸಿ ಕಸವನ್ನು ದೊಡ್ಡ ಗುಂಡಿಯೊಳಗೆ ಹಾಕಿ ಗೊಬ್ಬರವನ್ನಾಗಿ ತಯಾರಿಸಿ ವರ್ಷಕೊಮ್ಮೆ ಅದನ್ನು ರೈತರಿಗೆ ನೀಡಲಾಗುತ್ತದೆ ಎನ್ನುತ್ತಾರೆ ಧರ್ಮಪುರ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಿಕ್ಕಣ್ಣ ಇದ್ದರು.

[t4b-ticker]

You May Also Like

More From Author

+ There are no comments

Add yours