ಜನನ ಮರಣ ನೋಂದಣಿ ಪ್ರಕ್ರಿಯ ಲೋಪಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ: ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ

 

 

 

 

ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆ

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜುಲೈ 15: ಜನನ-ಮರಣ ನೋಂದಣಿ ಪ್ರಕ್ರಿಯೆ ನಿಯಮಾನುಸಾರ ಜರುಗಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಲೋಪದೋಷ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಕಾನೂನು ಬಾಹಿರವಾಗಿ ಜನನ ಹಾಗೂ ಮರಣ ಪ್ರಮಾಣ ಪತ್ರ ನೀಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ನಾಗರೀಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ತಿಂಗಳು ದಾಖಲಾಗುವ ಜನನ ಹಾಗೂ ಮರಣಗಳನ್ನು, ಅಧಿಕಾರಿಗಳು ತಪ್ಪದೇ ಅದೇ ತಿಂಗಳು ಜನನ ಮತ್ತು ಮರಣ ನೋಂದಣಾಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಹೊರಗುತ್ತಿಗೆ ಸಿಬ್ಬಂದಿಗೆ ಜನನ ಮತ್ತು ಮರಣ ನೋಂದಣಿ ಮಾಡಲು ಅಧಿಕಾರವಿಲ್ಲ. ಸರ್ಕಾರಿ ನೌಕರರನ್ನೇ ಈ ಕೆಲಸಕ್ಕೆ ನೇಮಿಸಬೇಕು. ಪ್ರತಿ ದಿನ ಆರೋಗ್ಯಾಧಿಕಾರಿಗಳು ಪರಿಶೀಲಿಸಿ ಆಯಾ ದಿನದಂದೇ ಜನನ ಮತ್ತು ಮರಣ ನೋಂದಣಿಯನ್ನು ಪೂರ್ಣಗೊಳಿಸಬೇಕು. ನೋಂದಣಿ ಪ್ರಕ್ರಿಯೆಯಲ್ಲಿ ಕಂಡುಬರುವ ನ್ಯೂನತೆ ಸರಿಪಡಿಸಬೇಕು ಎಂದರು.
ಇ-ಜನ್ಮ ತಂತ್ರಾಂಶದಲ್ಲಿ 15085 ಜನನ ನೋಂದಣಿ ಬಾಕಿ : ಜಿಲ್ಲೆಯಲ್ಲಿ 2015 ರಿಂದ ಜನನ ನೊಂದಣಿಯನ್ನು ಈ ಜನ್ಮ ತಂತ್ರಾಂಶದಲ್ಲಿ ನಮೂದು ಮಾಡುವುದು ಕಡ್ಡಾಯವಾಗಿದೆ. ಇದುವರೆಗೂ 15085 ಜನನ ನೋಂದಣಿ ಈ ಜನ್ಮ ತಂತ್ರಾಂಶದಲ್ಲಿ ವಿವಿಧ ತಾಲೂಕು ವ್ಯಾಪ್ತಿಯಲ್ಲಿ ಬಾಕಿಯಿವೆ. ಇದರಿಂದ ಜನನ ಪ್ರಮಾಣ ಪತ್ರ ಪಡೆಯುವರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದು, ಹಣ ವ್ಯಯಿಸಿ ಜನ್ಮ ಪ್ರಮಾಣ ಪತ್ರ ಪಡೆಯುವಂತೆ ಆಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಈ ಜನ್ಮ ತಂತ್ರಾಂಶದಲ್ಲಿ ಒಂದು ವರ್ಷದ ಅವಧಿಯೊಳಗೆ ನೋಂದಣಿಗೆ ಅವಕಾಶವಿದೆ. ಅವಧಿ ಮೀರಿದ ನೋಂದಣಿಗಳನ್ನು ಈಗ ಸರಿಪಡಿಸಿ ನೋಂದಣಿ ಮಾಡಲು ಕಾನೂನು ತೊಡಕು ಎದುರಾಗಿದೆ. ಈ ಎಲ್ಲಾ ಪ್ರಕರಣಗಳನ್ನು ಒಟ್ಟುಗೂಡಿಸಿ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಬೇಕು. ಈ ಎಲ್ಲಾ ಪ್ರಕರಣಗಳಿಗೆ ತಗಲುವ ವೆಚ್ಚವನ್ನು ನೋಂದಣಿ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಂದಲೇ ಭರಿಸಲು ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಜರುಗಿದ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು. ಇ-ಜನ್ಮ ತಂತ್ರಾಂಶದಲ್ಲಿ ಜಿಲ್ಲೆಯಲ್ಲಿ 1533 ಮರಣ ನೋಂದಣಿ ಬಾಕಿ ಇದೆ.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ್ ಮಾತನಾಡಿ, ಜನನ ಮರಣ ನೋಂದಣಿ ನಮೂನೆ-1 ಮತ್ತು ನಮೂನೆ-2ರಲ್ಲಿ ಗ್ರಾಮಮಟ್ಟದಲ್ಲಿ ಗ್ರಾಮಲೆಕ್ಕಿಗರು ಜನನ-ಮರಣ ನೋಂದಣಿ ಅಧಿಕಾರಿಗಳು ಮನೆಯಲ್ಲಾದ ಜನನ ಮರಣ ನೋಂದಣಿ ಮಾಡುವಾಗ ತಪ್ಪದೇ ತಂದೆ ತಾಯಿಯ ಇಬ್ಬರ ಆಧಾರ್ ಕಾರ್ಡ್, ಪಡಿತರ ಚೀಟಿ, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಚಾಲನಾ ಪರವಾನಗಿ, ಪಾಸ್ ಪೋರ್ಟ್  ದಾಖಲೆಗಳನ್ನು ಕಡ್ಡಾಯವಾಗಿ ತಪ್ಪದೇ ಸಂಗ್ರಹಿಸಿ, ಜನನ-ಮರಣ ನೋಂದಣಿಯನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಎಲ್ಲ ಜನ-ಮರಣ ನೋಂದಣಾಧಿಕಾರಿಗಳು ಮಾಸಿಕ ವರದಿ ಸಲ್ಲಿಸುವಾಗ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗಿರುವ ಘಟನೆಗಳ ಚೆಕ್‍ಲಿಸ್ಟ್‍ನೊಂದಿಗೆ ತಮ್ಮ ನೊಂದಣಿ ಘಟನೆಗಳ ಸಂಖ್ಯೆಯನ್ನು ತಾಳಿ ಮಾಡಿ ಪರಿಶೀಲಿಸಿ ವರದಿ ಸಲ್ಲಿಸುವುದು. ಎಲ್ಲ ಘಟನೆಗಳಿಗೆ ಕಡ್ಡಾಯವಾಗಿ ಉಚಿತ ಪ್ರಮಾಣ ಪತ್ರಗಳು ವಿತರಣೆಯಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.
ನೋಂದಣಿ ಘಟಕಗಳು 1175:  2022ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಗ್ರಾಮೀಣ ಮತ್ತು ನಗರದ ಪ್ರದೇಶದಲ್ಲಿ ಒಟ್ಟು 1175 ನೋಂದಣಿ ಘಟಕಗಳಿವೆ. ಗ್ರಾಮೀಣ ಪ್ರದೇಶದಲ್ಲಿ 1163 ನೋಂದಣಿ ಘಟಕಗಳು ಹಾಗೂ ನಗರ ಪ್ರದೇಶದಲ್ಲಿ 12 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. 102 ಸರ್ಕಾರಿ ಆಸ್ಪತ್ರೆಗಳು ಹಾಗೂ 34 ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟು 136 ನೋಂದಣಿ ಘಟಕಗಳು ಆಸ್ಪತ್ರೆಗಳಲ್ಲಿ ಇವೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ  ಸಭೆಗೆ ಮಾಹಿತಿ ನೀಡಿದರು.
ನೋಂದಣಿ ಘಟಕ ಸರ್ಕಾರಿ ಅಧಿಕಾರಿ ನಿರ್ವಹಿಸಲಿ: ಜನನ-ಮರಣ ನೋಂದಣಿ ಸಂದರ್ಭಗಳಲ್ಲಿ ಆಸ್ಪತ್ರೆಗಳಲ್ಲಿ ಬಹಳಷ್ಟು ಲೋಪದೋಷಗಳು ಕಂಡುಬರುತ್ತಿವೆ. ಪ್ರತಿಯೊಬ್ಬರಿಗೂ ಜನನ-ಮರಣ ಪ್ರಮಾಣ ಪತ್ರ ಅತ್ಯವಶ್ಯಕವಾಗಿದೆ.  ಹಾಗಾಗಿ ನೋಂದಣಿ ಘಟಕಕ್ಕೆ ಕಡ್ಡಾಯವಾಗಿ ಸರ್ಕಾರಿ ನೌಕರರು  ನೋಂದಣಿ ಶಾಖೆಯನ್ನು ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಹೊರಗುತ್ತಿಗೆ ಸಿಬ್ಬಂದಿಗೆ ಅವಕಾಶ ಮಾಡಿಕೊಡಬಾರದು ಎಂದು ಸಲಹೆ ನೀಡಿದರು.
ಜಿಲ್ಲೆಯ ಎಲ್ಲಾ ನೋಂದಣಿ ಮತ್ತು ಉಪ ನೋಂದಣಿ ಘಟಕಗಳಲ್ಲಿ ಘಟಿಸುವ ಎಲ್ಲಾ ಜನನ ಮರಣ ಘಟನೆಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದು ಮತ್ತು ಉಚಿತ ಪ್ರಮಾಣ ಪತ್ರಗಳನ್ನು ವಿತರಿಸಬೇಕು. ಸಕಾಲಯೋಜನೆಯಡಿ ಕಡ್ಡಾಯವಾಗಿ ಜನನ ಮರಣ ಪ್ರಮಾಣ ಪತ್ರಗಳ ವಿತರಣೆಯಾಗಬೇಕು. ಸಕಾಲ ವಿಷಯ ನಿರ್ವಾಹಕರು ಪ್ರಮಾಣ ಪತ್ರಗಳ ವಿತರಣೆ, ಶುಲ್ಕ ಪಾವತಿ, ವಿಷಯ ವಹಿ ನಿರ್ವಹಿಸುವುದು. ಜನನ ಮರಣ ಪ್ರಮಾಣ ಪತ್ರಗಳ ದಾಸ್ತಾನು ವಹಿ ನಿರ್ವಹಿಸಬೇಕು. ನೋಂದಣಿದಾರರು ನಮೂನೆ-1 ಮತ್ತು 2ರಲ್ಲಿ ಜನನ-ಮರಣ ಘಟನೆಗಳ ವರದಿಯಲ್ಲಿ ನೋಂದಣಿ ಪ್ರಕ್ರಿಯೆ ಮುಗಿದ ನಂತರ ತಪ್ಪದೇ ಸಹಿ ಹಾಕಬೇಕು ಎಂದು ನೋಂದಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌತಿ ಖಾತೆ ವರ್ಗಾವಣೆಗೆ ಕಾನೂನು ಬಾಹಿರ ಮರಣ ಪ್ರಮಾಣ ಪತ್ರ : ಹೊಳಲ್ಕೆರೆ ತಾಲೂಕಿನ ಎಂಜಿಹಳ್ಳಿ ವೃತ್ತದ ಗ್ರಾಮಲೆಕ್ಕಾಧಿಕಾರಿ ಕಾನೂನು ಬಾಹಿರವಾಗಿ ಪೌತಿ ಖಾತೆ ವರ್ಗಾವಣೆಗೆ ಅನುಕೂಲವಾಗುವಂತೆ ಮರಣ ಪ್ರಮಾಣ ಪತ್ರ ನೀಡಿರುವ ಪ್ರಕರಣದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಏಳೆಂಟು ಪ್ರಕರಣಗಳಲ್ಲಿ ಗ್ರಾಮಲೆಕ್ಕಾಧಿಕಾರಿ ನಿಮಯ ಬಾಹಿರವಾಗಿ ಮರಣ ಪತ್ರವನ್ನು ನೀಡಿದ್ದಾರೆ. ಈ ಕುರಿತು ಗ್ರಾಮಲೆಕ್ಕಾಧಿಕಾರಿ ಅನಮಾತಿಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಆನಂದ ಪ್ರಕಾಶ್, ತಹಶೀಲ್ದಾರ್ ಸತ್ಯನಾರಾಯಣ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours