ಗೋಡಂಬಿ ತೋಟದಲ್ಲಿ ಜಿಲ್ಲಾ ಮಟ್ಟದ ಗೋಡಂಬಿ ಬೆಳೆಯ ವಿಚಾರ ಸಂಕಿರಣ

 

 

 

 

ವರದಿ: ರವಿ ಉಗ್ರಾಣ

 

 

ಚಳ್ಳಕೆರೆ:  ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೇಂದ್ರ ಸರಕಾರದ ಕೊಚ್ಚಿನ್‌ನ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಹಿರಿಯೂರಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಚಳ್ಳಕೆರೆಯ ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿಯ ರೈತರಾದ ವಸಂತ ಮತ್ತು ಬಿ.ಕೆ.ದಯಣ್ಣ ಅವರ ಗೋಡಂಬಿ ತೋಟದಲ್ಲಿ ಜಿಲ್ಲಾ ಮಟ್ಟದ ಗೋಡಂಬಿ ಬೆಳೆಯ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.


ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಕೇಂದ್ರ ಸರಕಾರದ ಕೊಚ್ಚಿನ್‌ನ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಎನ್.ಹುಬ್ಬಳ್ಳಿ, ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ, ಸಂಶೋಧನಾ ನಿರ್ದೇಶಕ ಡಾ.ಮೃತ್ಯುಂಜಯ ಸಿ.ವಾಲಿ, ವಿಸ್ತರಣಾ ನಿರ್ದೇಶಕ ಡಾ.ಹೇಮ್ಲಾ ನಾಯ್ಕ್, ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಮುಖ್ಯಸ್ಥ ಡಾ.ಕೆ.ಮಂಜಪ್ಪ, ಹಿರಿಯೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಓ.ಕುಮಾರ್, ಚಳ್ಳಕೆರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರುಪಾಕ್ಷಪ್ಪ, ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ತಾಲೂಕಿನ ಸಾಣಿಕೆರೆಯಲ್ಲಿ ಸರಕಾರದಿಂದ ಮಂಜೂರಾಗಿರುವ ಮಧ್ಯ ಕರ್ನಾಟಕದ ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಸುಮಾರು ೯೩ ಎಕರೆ ಭೂಮಿ ಮೀಸಲಿದ್ದು, ಅದನ್ನು ಮಾರುಕಟ್ಟೆಯ ದರದ ಶೇಕಡ ೫೦ರಷ್ಟು ಹಣ ಪಾವತಿಸಿ ತೋಟಗಾರಿಕೆ ಇಲಾಖೆಗೆ ನೊಂದಣಿ ಮಾಡಿಸಿಕೊಳ್ಳಬೇಕು. ಅದಾದ ನಂತರ ಒಣ ಬೇಸಾಯ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅಗತ್ಯ ಅನುದಾನ ಬಿಡುಗಡೆ ಆಗಲಿದೆ. ಈ ಬಗ್ಗೆ ಸದನದಲ್ಲಿ ಮೂರ್‍ನಾಲ್ಕು ಬಾರಿ ಚರ್ಚಿಸಿರುವುದಾಗಿ ಹೇಳಿದರು.
ಕೊಚ್ಚಿನ್‌ನ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.ವೆಂಕಟೇಶ್ ಎನ್.ಹುಬ್ಬಳ್ಳಿ ಮಾತನಾಡಿ, ದೇಶದ ೧೯ ರಾಜ್ಯಗಳಲ್ಲಿ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ಪಡಿಸಲು ಹಣಕಾಸಿನ ಸೌಲಭ್ಯ ಒದಗಿಸಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಗೋಡಂಬಿ ಬೆಳೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ. ದೇಶದ ೧೯ ರಾಜ್ಯಗಳ ೧೧ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗೋಡಂಬಿ ಬೆಳೆಯಲಾಗುತ್ತಿದೆ. ಆದರೆ ಕೇವಲ ೭.೫ ಲಕ್ಷ ಟನ್ ಉತ್ಪಾದನೆ ಆಗುತ್ತಿದೆ. ನಾಲ್ಕು ಸಾವಿರ ಸಂಸ್ಕರಣ ಘಟಕಗಳಿದ್ದು, ಅಗತ್ಯವಾಗಿ ಬೇಕಾದ ೧೬ ಲಕ್ಷ ಮೆಟ್ರಿಕ್ ಟನ್ ಕಚ್ಚಾ ಬೀಜವನ್ನು ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ೮ ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ೨೦೦೧ರಲ್ಲಿ ಈ ಕಚ್ಚಾ ಬೀಜದ ಬೆಲೆ ೩೦ ರೂ. ಇದ್ದು, ಈಗ ೧೪೦ ರಿಂದ ೧೫೦ ರೂ.ಗೆ ದಾಟಿದೆ. ಬರದ ನಾಡಿಗೆ ಬಂಗಾರದ ಬೆಳೆ ಗೋಡಂಬಿಯಾಗಿದ್ದು ಈ ಭಾಗದ ರೈತರು ಗೋಡಂಬಿ ಬೆಳೆಯಲು ಮುಂದಾಗಬೇಕು. ನಮ್ಮ ನಿರ್ದೇಶನಾಲಯದಿಂದ ಉಚಿತವಾಗಿ ಸಸಿಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಮಾತನಾಡಿ, ಗೋಡಂಬಿ ಸಸಿಗಳನ್ನು ಜೂನ್ ೩೦ ರ ಒಳಗಾಗಿ ನಾಟಿ ಮಾಡುವುದು ಸೂಕ್ತ ಸಮಯ. ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಸ್ಥಳೀಯ ತೋಟಗಾರಿಕೆ ಇಲಾಖೆಗಳು ರೈತರಿಗೆ ಗೋಡಂಬಿ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದ್ದು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

[t4b-ticker]

You May Also Like

More From Author

+ There are no comments

Add yours