Wednesday, October 23 2024

ಮುರುಘಾಶರಣರ ಜನ್ಮ ದಿನವನ್ನು ಸಮಾನತೆಯ ದಿನವಾಗಿ ಆಚರಣೆ: ಸಿಎಂ ಬಸವರಾಜ್ ಬೊಮ್ಮಾಯಿ

 

 

 

 

ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಮುರುಘಾ ಶರಣ ಜನ್ಮದಿನಾಚರಣೆ ಅಂಗವಾಗಿ ಚಿತ್ರದುರ್ಗದ ಪರಿವರ್ತನಾ ಪರ ಧರ್ಮ ಸಂಸತ್ ಆಯೋಜಿಸಿದ್ದ ಸಮಾನತಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮುರುಘಾ ಶರಣರ ಜನ್ಮ ದಿನವನ್ನು ಸಮಾನತೆಯ ದಿನವಾಗಿ ಆಚರಿಸಲಾಗುವುದು ಎಂದು ಘೋಷಣೆ ಮಾಡಿದರು.
ವೈಚಾರಿಕತೆಯನ್ನು ಪುನಃ ಬಿತ್ತಲು ಕೈಹಾಕಿರುವ ಸಾಹಸವಿದು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ಬಸವಣ್ಣನವರ ವಿಚಾರಧಾರೆಗಳು ಇನ್ನೂ ಜೀವಂತವಾಗಿವೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ನೀಡಿದ ತತ್ವಗಳು ಇಂದಿಗೂ ಪ್ರಸ್ತುತ ಎಂದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಅನಿಷ್ಠಗಳ ವಿರುದ್ಧ ಹೋರಾಟ ಮಾಡಿದರೂ ಇನ್ನೂ ಕೂಡಾ ಕೆಲ ಪದ್ಧತಿಗಳು ಪ್ರಚಲಿತವಾಗಿವೆ. ಇವುಗಳನ್ನು ಬದಲಿಸಲು ದಿಟ್ಟ ಹೆಜ್ಜೆ ಇಟ್ಟಿದ್ದು ಮುರುಘಾ ಶರಣರು. ಬಸವತತ್ವವನ್ನು ಅಳವಡಿಸಿಕೊಂಡು ಮುರುಘಾ ಶರಣರು ಕೆಲಸ ಮಾಡುತ್ತಿದ್ದಾರೆ ಎಂದರು.
ದ್ವನಿ ಇಲ್ಲದವರಿಗೆ ದ್ವನಿ ಕೊಡಲು, ಗುರುತೇ ಇಲ್ಲದವರಿಗೆ ಗುರುತು ಕೊಡುವ ಕೆಲಸವನ್ನು ಮುರಾಘ ಶರಣರು ೨೧ನೇ ಶತಮಾನದಲ್ಲಿ ಮಾಡುತ್ತಿದ್ದಾರೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಇದನ್ನೇ ಮಾಡಿದ್ದರು. ಅದನ್ನೇ ಮಾದರಿಯನ್ನಾಗಿಟ್ಟುಕೊಂಡು ಮುರುಘಾ ಶರಣರು ಪ್ರತಿರೋಧದ ಮಧ್ಯೆಯೂ ಪರಿವರ್ತನೆಯ ಕೆಲಸ ಮಾಡುತ್ತಿದ್ದಾರೆ ಎಂದರು. ಸರ್ವರಿಗೂ ಸಮಾನತೆ ಕೊಡುವ ತತ್ವವನ್ನು ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಮುರುಘಾ ಶರಣರು ನಡೆಸಿರುವುದಕ್ಕೆ ನಮ್ಮ ಭಕ್ತಿಪೂರ್ಣ ಅಭಿನಂದನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಸಮಾಜದ ಬದಲಾವಣೆ ಮಾಡಬೇಕು ಎಂಬ ಧ್ಯೇಯ ಇಟ್ಟಕೊಂಡು ಬಸವಣ್ಣ, ಮಹಾವೀರ್, ಪೈಗಂಬರ್, ಬುದ್ಧ ಇವರೆಲ್ಲಾ ಬದಲಾವಣೆ ತಂದರು. ಏಕಚಿತ್ತದಿಂದ ಪರಿವರ್ತಕರಾಗಿ ಕ್ರಾಂತಿ ಮಾಡಿದರು. ಸಮಾಜದ ಪರಿವರ್ತನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದರು ಎಂದರು.
ರಾಮ ಸೇತುವೆ ಕಟ್ಟಲು ಅಳಿಲು ರಾಮನಿಗೆ ಸಹಾಯ ಮಾಡಿದಂತೆ ನಾವು ಕೂಡಾ ಉತ್ತಮ ಸಮಾಜ ನಿರ್ಮಾಣಕ್ಕೆ ಅಳಿಲು ಸೇವೆ ಮಾಡಬೇಕಿದೆ. ನಾವು ಪರಿವರ್ತನೆಗೆ ಚಿಂತನೆ ಮಾಡುವ ಕಾಲ ಬಂದಿದೆ. ಸರ್ಕಾರ, ಸಮಾಜ ಹೊಂದಾಣಿಕೆಯಿಂದ ಹೋಗಬೇಕು. ಪರಮಪೂಜ್ಯರ ನೇತೃತ್ವದಲ್ಲಿ ಸೇರಿ ನಾವೆಲ್ಲಾ ಮಾಡೋಣ ಎಂದರು. ಮುರುಘಾ ಮಠಕ್ಕೆ ಒಂದು ದಿವ್ಯ ಪರಂಪರೆ ಇದೆ. ಒಂದು ಕಾಲದಲ್ಲಿ ಮೈಸೂರು ಮಹಾರಾಜರಿಗೆ ಸಹಾಯ ಮಾಡಿದ ಮಠ ಆ ಬೌದ್ಧಿಕ ಆಸ್ತಿ ಜತೆಗೆ ಈಗಿನ ಶರಣರು ಆಧ್ಯಾತ್ಮಿಕತೆಯನ್ನು ಕಟ್ಟಿಕೊಟ್ಟಿದ್ದಾರೆ. ಶೈಕ್ಷಣಿಕ ಆರೋಗ್ಯ ಕ್ರಾಂತಿಯನ್ನು ಈ ಮಠದಿಂದ ಮಾಡಲಾಗಿದೆ. ಮುರುಘಾಶರಣರ ಅನುಭವಗಳು ನಮ್ಮೆಲ್ಲರಿಗೂ ದಾರಿ ದೀಪ ಎಂದರು.
ಕನ್ನಡ ನಾಡಿನಲ್ಲಿ ವಚನ ಸಾಹಿತ್ಯ, ದಾಸ್ಯ ಸಾಹಿತ್ಯ ಹಳೆಗನ್ನಡ, ಹೊಸಕನ್ನಡ, ಭಂಡಾಯ ಸಾಹಿತ್ಯ ಎಲ್ಲವೂ ನಮ್ಮ ಕನ್ನಡದ ಆಸ್ತಿ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ, ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಸಚಿವರುಗಳಾದ ಗೋವಿಂದ ಕಾರಜೋಳ, ವಿ. ಸುನೀಲ್‌ಕುಮಾರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ರಾಜ್‌ಕುಮಾರ್ ತೇಲ್‌ಕೂರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours

ಬೇಸಿಗೆ ಹೆಚ್ಚುತ್ತಿದೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯ ಶರವೇಗದಲ್ಲಿ ನಡೆಯಬೇಕು: ಶಾಸಕ ಟಿ.ರಘುಮೂರ್ತಿ

ನೂತನ ವಾರ್ತಾಧಿಕಾರಿಗಳಾಗಿ ಜೆ.ಮಂಜೇಗೌಡ ಅಧಿಕಾರ ಸ್ವೀಕಾರ

[t4b-ticker]