21 ನಿವೇಶನ ರಹಿತ ಫಲಾನುಭವಿಗಳ ಆಯ್ಕೆ, 35 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ: ಶಾಸಕ  ಜಿ.ಹೆಚ್.ತಿಪ್ಪಾರೆಡ್ಡಿ.

 

 

 

 

ಚಿತ್ರದುರ್ಗ,ಜುಲೈ17:
ನಿವೇಶನ ರಹಿತ ಅರ್ಹ ಫಲಾನುಭವಿಗಳ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ತಾಲ್ಲೂಕಿನ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಾವರ ಗ್ರಾಮದಲ್ಲಿ ಶನಿವಾರ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮುಖ್ಯಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆಯಡಿಯಲ್ಲಿ ನಿವೇಶನ ರಹಿತ ಫಲಾನುಭವಿಗಳ ಆಯ್ಕೆ ಹಾಗೂ ನಿವೇಶನ ರಹಿತ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ನಿವೇಶನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡದೇ ಸಾಮಾಜಿಕ ನ್ಯಾಯವನ್ನು ಒದಗಿಸಿ ನಿಜವಾದ ಅರ್ಹ ಫಲಾನುಭವಿಗಳನ್ನು ಗ್ರಾಮಸಭೆಯ ಮೂಲಕ ಆಯ್ಕೆ ಮಾಡಿ ನಿವೇಶನ ಹಂಚಿಕೆ ಮಾಡಬೇಕು ಎಂದು ಹೇಳಿದರು.
ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲು ಅಧಿಕಾರಿಗಳು ಖುದ್ದು ಮನೆ ಮನೆ ಭೇಟಿ ಮಾಡಿ ಪರಿಶೀಲನೆ ನಡೆಸಿ, ನಿವೇಶನ ಇಲ್ಲದವರಿಗೆ ಮೊದಲ ಆದ್ಯತೆ ನೀಡಿ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು. ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವಂತೆ ಶಾಸಕರು ಮನವಿ ಮಾಡಿದರು.
ಗ್ರಾಮಸಭೆಯಲ್ಲಿ ಬೀರಾವರ ಗ್ರಾಮದ ನಿವೇಶನ ರಹಿತ 21 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಈ ಹಿಂದೆ ಈಗಾಗಲೇ ನಿವೇಶನ ಹಂಚಿಕೆ ಮಾಡಿದ ಗ್ರಾಮದ 35 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಸ್ವಚ್ಛಭಾರತ್ ಮಿಷನ್ ಯೋಜನೆಯಡಿಯಲ್ಲಿ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2600 ಕುಟುಂಬಗಳಿಗೆ ಘನತ್ಯಾಜ್ಯ ನಿರ್ವಹಣೆಗಾಗಿ ಕಸದ ಬುಟ್ಟಿ ವಿತರಣೆಗೆ ಚಾಲನೆ ನೀಡಿ, ಬೀರಾವರ ಗ್ರಾಮದ 272 ಕುಟುಂಬಗಳಿಗೆ ಕಸದ ಬುಟ್ಟಿ ವಿತರಣೆ ಹಾಗೂ ಬೀರಾವರ ಗ್ರಾಮದ ಐದು ಮಂದಿ ವಿಕಲಚೇತನರಿಗೆ ಸೋಲಾರ್ ಲ್ಯಾಟಿನ್ ವಿತರಣೆ ಮಾಡಲಾಯಿತು.
ಗ್ರಾಮಸಭೆಯಲ್ಲಿ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ದೇವರಾಜ್, ಉಪಾಧ್ಯಕ್ಷೆ ಶಂಕ್ರಮ್ಮ ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ್, ರೂಪ ಅಜ್ಜಪ್ಪ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಹನುಮಂತಪ್ಪ, ನೋಡಲ್ ಅಧಿಕಾರಿ ಲೋಕೇಶ್, ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆನಂದ್ ಸೇರಿದಂತೆ ಬೀರಾವರ ಗ್ರಾಮಸ್ಥರು ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ತಾಲ್ಲೂಕಿನ ಐಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀರಾವರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ನಿವೇಶನ ರಹಿತ ಫಲಾನುಭವಿಗಳ ಆಯ್ಕೆ ಹಾಗೂ ನಿವೇಶನ ರಹಿತ ಫಲಾನುಭವಿಗಳಿಗೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹಕ್ಕುಪತ್ರ ವಿತರಣೆ ಮಾಡಿದರು.

 

 

[t4b-ticker]

You May Also Like

More From Author

+ There are no comments

Add yours