224 ಕ್ಷೇತ್ರಗಳಿಗೆ ಅಭಿವೃದ್ದಿಗೆ ಹಣ ಕೊಡ್ತಾರಾ ಸಿಎಂ ಬೊಮ್ಮಾಯಿ, ಯಾರಿಗೆಷ್ಟು ಹಣ ಸರ್ಕಾರದ ಲೆಕ್ಕಚಾರವೇನು!

 

 

 

 

ಬೆಂಗಳೂರು: ರಾಜ್ಯದ  ಉತ್ತಮ ಸರ್ಕಾರ  ಎಂಬ  ಭಾವನೆಯೇ ಕಾಣುತ್ತಿಲ್ಲವೆಂದು ಬಿಜೆಪಿ ವರಿಷ್ಠರು, ಸಂಘ ಪರಿವಾರದ ಮುಖಂಡರೇ ಆಂತರಿಕವಾಗಿ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಬದಲಾಯಿಸುವ ಉದ್ದೇಶದಿಂದ ಬೊಮ್ಮಾಯಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಆಡಳಿತ ಪಕ್ಷದ ಶಾಸಕರು ಈ ಬಗ್ಗೆ ಮುಖ್ಯಮಂತ್ರಿ ಮೇಲೆ ಒತ್ತಡ ತರುತ್ತಿದ್ದರು. ಜನರ ಮುಂದೆ  ಚುನಾವಣೆಗೆ ಹೋಗಲು ಅಭಿವೃದ್ಧಿ ಕಾರ್ಯ ಹೆಚ್ಚಾಗಿ ನಡೆಯಬೇಕೆಂಬುದನ್ನು ಪಕ್ಷದ ಗಮನಕ್ಕೂ ತಂದಿದ್ದರು. ಸಂಘ ಪರಿವಾರದ ಮುಖಂಡರು ಸಹ ಈ ನಿಟ್ಟಿನಲ್ಲಿ ಅಭಿಪ್ರಾಯ  ತಿಳಿಸಿದ್ದರೆಂದು ಮೂಲಗಳು ಹೇಳಿವೆ.

ಬಜೆಟ್ ಘೋಷಣೆ ಆದೇಶ:  ಬಜೆಟ್​ನಲ್ಲಿ ತಾವು ಘೋಷಿಸಿರುವ ಯೋಜನೆಗಳ ಜಾರಿಗೆ ಬೊಮ್ಮಾಯಿ ವಿಶೇಷ ಆಸಕ್ತಿ  ವಹಿಸಿದ್ದು  ಈಗಾಗಲೇ 160 ಘೋಷಣೆ  ಜಾರಿಯಾಗಿದ್ದು  ಇನ್ನೂ 20ಕ್ಕೂ ಹೆಚ್ಚು ಆದೇಶಗಳು ಹೊರಬರಬೇಕಾಗಿದೆ. ಅವುಗಳ ಅನುಷ್ಠಾನಕ್ಕೂ ವೇಗ ನೀಡಲು ಮುಂದಾಗಿದ್ದಾರೆ.

 

 

ಅವಧಿಪೂರ್ವ ಚುನಾವಣೆ?: ಮುಖ್ಯಮಂತ್ರಿಗಳು ಯಾವಾಗ ಎಲ್ಲ ಕ್ಷೇತ್ರಗಳಿಗೂ ವಿವಿಧ ಇಲಾಖೆಗಳ ಮೂಲಕ ಅನುದಾನ ನೀಡಲು ನಿರ್ಧಾರ ಕೈಗೊಂಡರೋ ರಾಜಕೀಯ ವಲಯದಲ್ಲಿ ಅವಧಿಪೂರ್ವ ಚುನಾವಣೆ ನಡೆಯಬಹುದೇ ಎಂಬ ಅನುಮಾನ ಕಾಡಲಾರಂಭಿಸಿದೆ. ಪಕ್ಷದ ಹೈಕಮಾಂಡ್ ಗುಜರಾತ್ ಜತೆಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಬಹುದೇ ಎಂಬ ಪ್ರಶ್ನೆಯೂ ಇದೆ. ಆದರೆ ಬಿಜೆಪಿ ಮೂಲಗಳು ಮಾತ್ರ ಅವಧಿಪೂರ್ವ ಚುನಾವಣೆ ಇಲ್ಲವೇ ಇಲ್ಲ ಎನ್ನುತ್ತಿವೆ.

ಸಿಎಂ  ಲೆಕ್ಕಾಚಾರವೇನು?: ರಾಜ್ಯಾದ್ಯಂತ ಒಂದು ವರ್ಷ ಅಭಿವೃದ್ಧಿ ಕಾರ್ಯ ನಡೆಯುವಂತಾದರೆ ಪರ್ಸೆಂಟೇಜ್, ನೇಮಕಾತಿ ಸೇರಿದಂತೆ ವಿವಿಧ ಹಗರಣಗಳ ಆರೋಪವನ್ನು ಮರೆತು ಜನ ಪಕ್ಷ ಬೆಂಬಲಿಸುತ್ತಾರೆಂಬ ಭರವಸೆ ಮೇಲೆ ಕ್ಷೇತ್ರವಾರು ದೊಡ್ಡ ಮೊತ್ತದ ಹಣ ಬಿಡುಗಡೆಗೆ ಸಿಎಂ ನಿರ್ಧರಿಸಿದ್ದಾರೆ.

ಪಕ್ಷವಾರು ಮಾಹಿತಿ: ವಿಧಾನಸಭೆ ಒಟ್ಟು ಸದಸ್ಯರ ಸಂಖ್ಯೆ 224. ಅದರಲ್ಲಿ ಬಿಜೆಪಿ 119, ಕಾಂಗ್ರೆಸ್ 69, ಜೆಡಿಎಸ್ 32, ಬಿಎಸ್​ಪಿ 1, ಪಕ್ಷೇತರರು 2 ಹಾಗೂ ಸ್ಪೀಕರ್ ಇದ್ದಾರೆ. ಬಿಜೆಪಿಗೆ ಒಬ್ಬ ಪಕ್ಷೇತರ ಹಾಗೂ ಬಿಎಸ್​ಪಿ ಬೆಂಬಲ ನೀಡುತ್ತಿವೆ. ಸ್ಪೀಕರ್ ಸೇರಿ ಬಿಜೆಪಿಯ ಸಂಖ್ಯೆ 122 ಇದೆ. ಕಾಂಗ್ರೆಸ್​ಗೆ ಒಬ್ಬ ಪಕ್ಷೇತರ ಸೇರಿ 70 ಆಗುತ್ತದೆ. ಆಡಳಿತ ಪಕ್ಷದ ಸದಸ್ಯರ ಸಂಖ್ಯೆ 122 ಆದರೆ, ಪ್ರತಿಪಕ್ಷಗಳ ಸಂಖ್ಯೆ 102. ಬಿಜೆಪಿ ಸದಸ್ಯರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ.ಗಳಂತೆ ಒಟ್ಟಾರೆ 6100 ಕೋಟಿ ರೂ.ಗಳು ಹಾಗೂ ಪ್ರತಿಪಕ್ಷಗಳ ಸದಸ್ಯರ ಕ್ಷೇತ್ರಗಳಿಗೆ ತಲಾ 25 ಕೋಟಿ ರೂ.ಗಳಂತೆ ಒಟ್ಟಾರೆ 2550 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತದೆ.

ಹಣ ಬಿಡುಗಡೆ ಹೇಗೆ?: ಬಜೆಟ್​ನಲ್ಲಿ ವಿವಿಧ ಇಲಾಖೆಗಳಿಗೆ ಅನುದಾನ ನೀಡಲಾಗಿದೆ. ಆ ಮೊತ್ತವನ್ನೇ ಕ್ರೋಡೀಕರಿಸಿ ಹಂಚಿಕೆ ಮಾಡಲಾಗುತ್ತದೆ. ಶಾಸಕರು ಸೂಚಿಸಿದ ಕಾಮಗಾರಿ ಕೈಗೊಳ್ಳಲಾಗುತ್ತದೆ.

[t4b-ticker]

You May Also Like

More From Author

+ There are no comments

Add yours