100 ಅಂಗವಿಕಲರಿಗೆ ವಾಹನ ನೀಡಿದ ಸಂತೃಪ್ತಿ ಮತ್ತು ಹೆಮ್ಮೆ ನನಗಿದೆ: ಸಚಿವ ಬಿ.ಶ್ರೀರಾಮುಲು

 

 

 

 

ಮೊಳಕಾಲ್ಮುರು: ಅಂಗವಿಕಲರಿಗೆ 100 ದ್ವಿಚಕ್ರ ವಾಹನ ವಿತರಣೆ

 

 

ಚಿತ್ರದುರ್ಗ,ನವೆಂಬರ್08:
ಜಿಲ್ಲೆಯಲ್ಲಿ 8 ಸಾವಿರ ಮಂದಿ ದೈಹಿಕ ಅಂಗವಿಕಲರಿದ್ದು, ದೈಹಿಕ ವಿಕಲಚೇತನರೆಲ್ಲರಿಗೂ ದ್ವಿಚಕ್ರ ವಾಹನ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಮೊಳಕಾಲ್ಮುರು ಪಟ್ಟಣದಲ್ಲಿ ಸೋಮವಾರ ಡಿಎಂಎಫ್ ಅನುದಾನದಲ್ಲಿ ಅಂಗವಿಕಲರಿಗೆ 100 ದ್ವಿಚಕ್ರ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 35 ಸಾವಿರ ವಿಕಲಚೇತನರಿದ್ದು, ಎಲ್ಲ ವಿಕಲಚೇತನರಿಗೂ ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ದ್ವಿಚಕ್ರ ವಾಹನ ನೀಡುವಂತೆ ಅನೇಕ ವಿಕಲಚೇತನರು ಮನವಿ ಮಾಡಿದ ಮೇರೆಗೆ ಅಂಗವಿಕಲರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಡಿಎಂಎಫ್ ನಿಧಿಯಿಂದ ಅಂಗವಿಕಲರಿಗೆ 600 ದ್ವಿಚಕ್ರ ವಾಹನ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ಶಾಸಕರ ಅನುದಾನದಲ್ಲಿಯೂ ಉಳಿದ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.


ವಿಕಲಚೇತನರಿಗೆ ವಿತರಿಸಿರುವ ದ್ವಿಚಕ್ರ ವಾಹನವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ವಾಹನವನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೇ.45ರ ಮೇಲ್ಪಟ್ಟ ಹಾಗೂ ಶೇ.75ರೊಳಗಿನ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ರಾಜ್ಯ ಸರ್ಕಾರ ರೂ.600 ರಿಂದ ರೂ.800 ರೂಪಾಯಿಗೆ ಹೆಚ್ಚಳ ಮಾಡಿ ಮಾಸಾಶನ ನೀಡಲಾಗುತ್ತಿದೆ. ಸಂಧ್ಯಾ ಸುರಕ್ಷಾ ಯೋಜನಾ ಫಲಾನುಭವಿಗಳಿಗೆ ರೂ.200 ಹೆಚ್ಚಳ ಮಾಡಿ ರೂ.1200 ಮಾಸಾಶನ ನೀಡುತ್ತಿದ್ದಾರೆ ಎಂದರು.
ಕೋವಿಡ್ ಸಂದರ್ಭದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ಬೇರೆ ಇಲಾಖೆಯ ಫ್ರಂಟ್‍ಲೈನ್ ವರ್ಕರ್ಸ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಈಗಾಗಲೇ 100 ಕೋಟಿಗೂ ಅಧಿಕ ಮಂದಿಗೆ ಕೋವಿಡ್ ಲಸಿಕೆ ನೀಡಿರುವುದು ದೊಡ್ಡ ಮಟ್ಟದ ಸಾಧನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊಳಕಾಲ್ಮರು ತಾಲ್ಲೂಕಿನಲ್ಲಿ ಕೋವಿಡ್ ಮೊದಲ ಅಲೆಯಲ್ಲಿ ಶೇ.43 ರಷ್ಟು ಲಸಿಕೆ ಸಾಧನೆ ಮಾಡಲಾಗಿದೆ. ಎರಡನೇ ಅಲೆಯಲ್ಲಿ ಶೇ.50ರಷ್ಟು ಲಸಿಕೆ ಪಡೆಯಲಾಗಿದೆ. ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಲಸಿಕೆ ಪಡೆಯುವಂತೆ ಮನವೋಲಿಸುವಾಗ ಅವರ ಮೇಲೆ ಹಲ್ಲೆಗಳಾಗಿರುವುದನ್ನು ನಾವು ನೋಡಿದ್ದೇವೆ. ನಮ್ಮಗಳ ಜೀವ ರಕ್ಷಣೆ ಮಾಡುವ ಸಲುವಾಗಿ ಫ್ರಂಟ್‍ಲೈನ್ ವರ್ಕರ್ಸ್ ತಮ್ಮ ಜೀವವನ್ನೇ ಪಣಕ್ಕಿಟ್ಟು ಕಾರ್ಯನಿರ್ವಹಿಸಿದ್ದಾರೆ. ಇದರ ಕಾರ್ಯ ಸ್ಯುತಿರ್ಹವಾಗಿದ್ದು, ಇವರುಗಳನ್ನು ಗೌರವಿಸಿ, ಸನ್ಮಾನ ಮಾಡಬೇಕಿದೆ ಎಂದು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗವಾಗಿದ್ದು, ಸಾಂಕ್ರಾಮಿಕ ರೋಗದಿಂದ ನಾವು ರಕ್ಷಣೆ ಪಡೆಯಬೇಕಾದರೆ ಲಸಿಕೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಮನವಿ ಮಾಡಿದರು.
ಗೌರವಧನ ಹೆಚ್ಚಳಕ್ಕೆ ಕ್ರಮ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಳಿ ಚರ್ಚಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಕೇಂದ್ರ ಮತ್ತು ರಾಜ್ಯಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾದದ್ದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡುವಂತೆ ಸದನದಲ್ಲಿ  ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮಣ್, ಮುಖಂಡರಾದ ಮಂಜುನಾಥ್, ರಾಮರೆಡ್ಡಿ, ಮಹಂತೇಶ್, ಸದಸ್ಯರಾದ ಮಂಜುನಾಥ್, ಪಾಪೇಶ್, ಟಿಹೆಚ್‍ಓ ಸುಧಾ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ತಹಶೀಲ್ದಾರ್ ಸುರೇಶ್, ತಾಲ್ಲೂಕು ಪಂಚಾಉಯಿತಿ ಇಒ ಜಾನಕಿರಾಮ್ ಸೇರಿದಂತೆ ಮತ್ತಿತರರು ಇದ್ದರು.

[t4b-ticker]

You May Also Like

More From Author

+ There are no comments

Add yours