ಹೊಳಲ್ಕೆರೆ ಪುರಸಭೆ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ.

 

 

 

 

*ಹೊಳಲ್ಕೆರೆ ಪುರಸಭೆ ಕಾರ್ಯಾಲಯದಲ್ಲಿ ದಿನಾಂಕ: 14.04.2022ರಂದು ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ 131ನೇ ಜಯಂತಿ ಹಾಗೂ ಡಾ|| ಬಾಬು ಜಗಜೀವನ್ ರಾಮ್ ರವರ 115ನೇ ಜಯಂತಿ ಆಚರಿಸಲಾಯಿತು.*

*ಪುರಸಭೆ ಅಧ್ಯಕ್ಷರಾದ ಶ್ರೀ ಆರ್ ಎ ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.*

ಮುಖ್ಯಾಧಿಕಾರಿ ಎ ವಾಸಿಂ, ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್, ಸದಸ್ಯರುಗಳಾದ ಶ್ರೀ ಬಿ ಎಸ್ ರುದ್ರಪ್ಪ, ಶ್ರೀ ಪಿ ಹೆಚ್ ಮುರುಗೇಶ್, ಶ್ರೀಮತಿ ಹೆಚ್ ಆರ್ ನಾಗರತ್ನ ವೇದಮೂರ್ತಿ, ಶ್ರೀ ಪಿ ಆರ್ ಮಲ್ಲಿಕಾರ್ಜುನ್, ಶ್ರೀ ಡಿ ಎಸ್ ವಿಜಯ, ಶ್ರೀ ಎಲ್ ವಿಜಯ ಸಿಂಹ ಖಾಟ್ರೋತ್, ಶ್ರೀಮತಿ ಸುಧಾ ಬಸವರಾಜ್, ನಾಮನಿರ್ದೇಶಿತ ಸದಸ್ಯರುಗಳಾದ ಶ್ರೀ ಕೆ ಆರ್ ರಾಜಪ್ಪ, ಶ್ರೀಮತಿ ಕವಿತಾ ರವಿ, ಪತ್ರಕರ್ತರಾದ ಶ್ರೀ ವೇದಮೂರ್ತಿ ಹಾಗೂ ಹೊಳಲ್ಕೆರೆ ಪುರಸಭೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸದಸ್ಯರಾದ ಶ್ರೀ ಪಿ ಆರ್ ಮಲ್ಲಿಕಾರ್ಜುನ್ ಮಾತನಾಡಿ ಡಾ|| ಬಿ ಆರ್ ಅಂಬೇಡ್ಕರ್ ರವರು ತಮ್ಮ ಬದುಕಿನಲ್ಲಿ ಸಮಾಜದಲ್ಲಿ ಅನುಭವಿಸಿದ ನೋವಿನ ಘಟನೆಗಳನ್ನು ನೆನೆಯುತ್ತಾ, ಸಂವಿಧಾನವನ್ನು ನಮಗೆಲ್ಲಾ ಅತ್ಯಮೂಲ್ಯ ಬಳುವಳಿಯಾಗಿ ಅಂಬೇಡ್ಕರ್ ರವರು ನೀಡಿದ್ದಾರೆ ಎಂದರು.

ಮತ್ತೋರ್ವ ಸದಸ್ಯರಾದ ಶ್ರೀ ಎಲ್ ವಿಜಯಸಿಂಹ ಖಾಟ್ರೋತ್ ರವರು ಮಾತನಾಡಿ ನಾವು ಪ್ರತಿ ಬಾರಿ ಡಾ|| ಬಿ ಆರ್ ಅಂಬೇಡ್ಕರ್, ಡಾ|| ಬಾಬು ಜಗಜೀವನ್ ರಾಮ್, ಬಸವೇಶ್ವರರು, ಮಹಾತ್ಮ ಗಾಂಧೀಜಿ ಒಳಗೊಂಡಂತೆ ಅನೇಕ ಮಹನೀಯರ ಜಯಂತಿಗಳನ್ನು ಆಚರಿಸುತ್ತಾ ಅವರನ್ನು ಆಯಾ ಜಯಂತಿಯ ದಿನದಂದು ಅವರ ಸಾಧನೆ ಮತ್ತು ವಿಶೇಷ ಗುಣಗಳು, ಬದುಕಿನ ಮೌಲ್ಯಗಳ ಬಗ್ಗೆ ಮಾತನಾಡಿ ಅವರನ್ನು ಸ್ಮರಿಸಿಕೊಳ್ಳುತ್ತೇವೆ. ಆದರೆ ಅದು ಆ ದಿನಕ್ಕೆ ಮತ್ತು ಆ ಕ್ಷಣಕ್ಕೆ ಮಾತ್ರವೇ ಸೀಮಿತವಾಗಿದ್ದು ಅವುಗಳನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಮ್ಮ ನಡವಳಿಕೆಗಳಲ್ಲಿ ಬದಲಾವಣೆ ತಂದುಕೊಂಡು ಸರಿ ಹಾದಿಯಲ್ಲಿ ನಡೆಯುವ ಪ್ರಯತ್ನ ಮಾಡುವುದೇ ಇಲ್ಲ. ಇಂತಹ ಮಹನೀಯರುಗಳನ್ನು ನೆನೆಯುವುದರ ಜೊತೆಗೆ ಅವರ ಆದರ್ಶಗಳು, ಸಂದೇಶಗಳನ್ನು ಅರಿತು ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಪ್ರಯತ್ನಿಸಬೇಕು, ಮುಂದಿನ ಪೀಳಿಗೆಗೂ ಸಹ ಅಂಬೇಡ್ಕರ್ ರಂತಹ ಮಹಾನ್ ಚೇತನಗಳ ಆದರ್ಶ ಅಳವಡಿಸಿಕೊಂಡು ಬದುಕಲು ಪ್ರೇರೇಪಿಸಬೇಕು ಎಂದರು.

ಹೊಳಲ್ಕೆರೆ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷರೂ, ಹಾಲಿ ಪುರಸಭಾ ಸದಸ್ಯರೂ ಆದ ಶ್ರೀ ಬಿ ಎಸ್ ರುದ್ರಪ್ಪನವರು ಮಾತನಾಡಿ ಡಾ|| ಬಿ ಆರ್ ಅಂಬೇಡ್ಕರ್ ರವರು ಬಾಲ್ಯದಲ್ಲಿ ಅನುಭವಿಸಿದ ಅಸ್ಪೃಶ್ಯತೆ, ಅಸಮಾನತೆಯ ನೋವು, ವಿದ್ಯಾಭ್ಯಾಸ ನಡೆಸಲು ಅವರು ಪಟ್ಟ ಕಷ್ಟ ಇವೆಲ್ಲವನ್ನು ಸ್ಮರಿಸುತ್ತಾ ಸರ್ವರಿಗೂ ಸಮಾನತೆಯ ಹಕ್ಕು ನೀಡುವ ಸಂವಿಧಾನವನ್ನು ಅಂಬೇಡ್ಕರ್ ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಡಾ|| ಬಾಬು ಜಗಜೀವನ್ ರಾಮ್ ರವರನ್ನು ಸಮಾನತೆಯ ಹರಿಕಾರ ಎಂದು ಶ್ಲಾಘಿಸಿದರು.

 

 

ಸದಸ್ಯರಾದ ಶ್ರೀ ಪಿ ಹೆಚ್ ಮುರುಗೇಶ್ ರವರು ಮಾತನಾಡಿ ಡಾ|| ಬಿ ಆರ್ ಅಂಬೇಡ್ಕರ್ ರವರ ಬದುಕಿನ ಆದರ್ಶಗಳನ್ನು ಈಗಿನ ಯುವ ಪೀಳಿಗೆ ಅರಿತು ಜೀವನ ಸಾಗಿಸಬೇಕಾಗಿದೆ. ಅವರು ಯಾವುದೇ ಹಣಬಲ, ಜನಬಲ ಇಲ್ಲದೆ ಈ ದೇಶದ ಹೆಮ್ಮೆಯ ಮಗನಾಗಿ ಉದಯಿಸಿದರು. ಸಮಾಜದಲ್ಲಿ ಎಲ್ಲರೂ ಸರಿ ಸಮಾನರಾಗಿ ಬಾಳಲು ಸಂವಿಧಾನದಲ್ಲಿ ಅವಕಾಶ ಮಾಡಿಕೊಟ್ಟರು. ನಾವೆಲ್ಲರೂ ಈ ಮಹಾನ್ ಚೇತನಕ್ಕೆ ಚಿರಋಣಿಗಳಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಅವರು ಡಾ|| ಬಾಬು ಜಗಜೀವನ್ ರಾಮ್ ರವರ ಅಸಮಾನತೆಯ ನಿರ್ಮೂಲನೆಯ ಹೋರಾಟವನ್ನು ಶ್ಲಾಘಿಸಿದರು.

ಉಪಾಧ್ಯಕ್ಷರಾದ ಶ್ರೀ ಕೆ ಸಿ ರಮೇಶ್ ರವರು ಡಾ|| ಬಿ ಆರ್ ಅಂಬೇಡ್ಕರ್ ಹಾಗೂ ಡಾ|| ಬಾಬು ಜಗಜೀವನ್ ರಾಮ್ ರವರ ಬಗ್ಗೆ ಮಾತನಾಡುತ್ತಾ ಡಾ|| ಬಿ ಆರ್ ಅಂಬೇಡ್ಕರ್ ಬಗ್ಗೆ ಒಂದು ದಿನ ಮಾತನಾಡಿ ಸ್ಮರಿಸಿದರೆ ಸಾಲದು, ನಾವೆಲ್ಲರೂ ಅವರ ಬದುಕಿನ ಬಗ್ಗೆ ಅರ್ಥ ಮಾಡಿಕೊಂಡು, ನಮ್ಮಲ್ಲಿ ನಾವು ಉತ್ತಮ ಬದಲಾವಣೆ ತಂದುಕೊಳ್ಳಬೇಕಾಗಿದೆ. ಕಿರುತೆರೆಯಲ್ಲಿ ಮಹಾನಾಯಕ ಡಾ|| ಬಿ ಆರ್ ಅಂಬೇಡ್ಕರ್ ಬಗ್ಗೆ ಪ್ರಸಾರವಾಗುತ್ತಿರುವ ಧಾರಾವಾಹಿಯನ್ನು ಸಂಜೆ ವೇಳೆ ಪುರಸಭೆಯ ಹೊರ ಆವರಣದಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸುವ ವ್ಯವಸ್ಥೆಯನ್ನು ಕಲ್ಪಿಸುವಂತೆ ಮುಖ್ಯಾಧಿಕಾರಿ ಎ ವಾಸಿಂ ರವರಲ್ಲಿ ಕೋರುತ್ತಾ, ಸಾರ್ವಜನಿಕರು, ಜನಪ್ರತಿನಿಧಿಗಳಾದ ನಾವೆಲ್ಲರೂ, ಕಛೇರಿ ಸಿಬ್ಬಂದಿಗಳು ಹಾಗೂ ಅತೀ ಮುಖ್ಯವಾಗಿ ನಮ್ಮ ಪೌರಕಾರ್ಮಿಕರು ಈ ಧಾರಾವಾಹಿಯ ಮೂಲಕ ಅಂಬೇಡ್ಕರ್ ರವರ ಬದುಕಿನ ಬಗ್ಗೆ ತಿಳಿದುಕೊಂಡು ತಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳುವಂತಾಗಲಿ ಎಂದರು.

ತದನಂತರದಲ್ಲಿ ಮಹಿಳಾ ಸದಸ್ಯರುಗಳಾದ ಶ್ರೀಮತಿ ಸುಧಾ ಬಸವರಾಜ್, ಶ್ರೀಮತಿ ಹೆಚ್ ಆರ್ ನಾಗರತ್ನ ವೇದಮೂರ್ತಿ ಶ್ರೀಮತಿ ಕವಿತಾ ರವಿ ಇವರುಗಳು ಮಾತನಾಡಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ|| ಬಿ ಆರ್ ಅಂಬೇಡ್ಕರ್ ರವರ ಹಾಗೂ ಡಾ|| ಬಾಬು ಜಗಜೀವನ್ ರಾಮ್ ರವರ ಜಯಂತಿಯ ಶುಭಾಶಯಗಳನ್ನು ಕೋರಿದರು.

ಹೊಳಲ್ಕೆರೆ ಪುರಸಭೆಯ ಅಧ್ಯಕ್ಷರಾದ ಶ್ರೀ ಆರ್ ಎ ಅಶೋಕ್ ರವರು ಮಾತನಾಡಿ, ಡಾ|| ಬಿ ಆರ್ ಅಂಬೇಡ್ಕರ್ ರವರ ಜಯಂತಿ ಕೇವಲ ಕಛೇರಿಗಳಲ್ಲಿ ಆಚರಣೆಗೆ ಸೀಮಿತವಾಗಿದೆ. ಆದರೆ ಭಾರತದ ಮನೆ ಮನೆಯಲ್ಲೂ ಈ ಮಹಾನ್ ನಾಯಕರ ಭಾವ ಚಿತ್ರವನ್ನು ಇರಿಸಿ ದಿನ ನಿತ್ಯ ಪೂಜೈಗೈದರೂ ಸಹ ಇವರ ಋಣವನ್ನು ನಾವೆಲ್ಲಾ ಭಾರತೀಯರು ತೀರಿಸಲು ಸಾಧ್ಯವೇ ಇಲ್ಲ. ಇಂದು ಯಾವುದೇ ಜಾತಿ, ಮತ, ದರ್ಮ, ಪಂಥ, ಸ್ತ್ರೀ, ಪುರುಷ ರಲ್ಲಿನ ಅಸಮಾನತೆಯ ವಿಷ ನಿರ್ಮೂಲನೆ ಮಾಡಿ ಹಿಂದುಳಿದ ಜನಾಂಗದವರಿಗೂ ಮೀಸಲಾತಿ ದೊರೆತು ಅವರುಗಳೂ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಪಡೆಯಲು ಸಾಧ್ಯವಾಗಿದೆ. ಹಿಂದುಳಿದ ಜನಾಂಗಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಬಲೀಕರಣ ಇಂದು ಡಾ|| ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಮೂಲಕ ಸಾಧ್ಯವಾಗಿದೆ, ಇದರ ಫಲವಾಗಿ ಇಂದು ನಾವು ರಾಜಕೀಯ ಮೀಸಲಾತಿ, ಶೈಕ್ಷಣಿಕ ಮೀಸಲಾತಿ, ಉದ್ಯೋಗ ಮೀಸಲಾತಿಗಳನ್ನು ಪಡೆದು ಸರಿ ಸಮಾನವಾಗಿ ಬದುಕುವ ಹಕ್ಕನ್ನು ಪಡೆದುಕೊಂಡಿದ್ದೇವೆ. ಇದಕ್ಕೆಲ್ಲಾ ಕಾರಣ ಭಾರತ ರತ್ನ ಪ್ರಶಸ್ತಿ ಪಡೆಯುವುದಕ್ಕೆ ಮೊದಲೆ ವಿದೇಶಿಯರಿಂದ ವಿಶ್ವರತ್ನ ಎಂದು ಕರೆಯಿಸಿಕೊಂಡ ಡಾ|| ಬಿ ಆರ್ ಅಂಬೇಡ್ಕರ್ ಎಂಬ ಸಮಾನತೆಯ ಮಹಾನ್ ಹರಿಕಾರ ರಚಿಸಿದ ಸಂವಿಧಾನ. ಅದರ ಶ್ರೀರಕ್ಷೆಯಲ್ಲಿ ಇಂದು ನಾವೆಲ್ಲರೂ ಧೈರ್ಯವಾಗಿ ಬದುಕುತ್ತಿದ್ದೇವೆ ಎಂದು ಶ್ಲಾಘಿಸಿದರು.

ಇದಕ್ಕೂ ಮೊದಲು ಮುಖ್ಯಾಧಿಕಾರಿ ಶ್ರೀ ಎ ವಾಸಿಂ ರವರು, ಮಾತನಾಡಿ ಭಗವದ್ಗೀತೆ, ಖುರಾನ್, ಬೈಬಲ್ ನಂತೆ ವಿವಿಧ ಧರ್ಮಗಳಿಗೆ ಒಂದು ಪವಿತ್ರ ಗ್ರಂಥಗಳು ಇರುವಂತೆ ನಮ್ಮ ದೇಶದ ಪ್ರತ್ಯೋರ್ವ ಜನಸಾಮಾನ್ಯನಿಗೆ ಅತ್ಯವಶ್ಯಕವಾಗಿ ಬೇಕಾಗಿರುವ, ಎಲ್ಲರೂ ಇದರ ನೆರಳಲ್ಲಿ ಬದುಕಬೇಕಾದ ಮಹಾನ್ ಗ್ರಂಥವೆಂದರೆ ಅದು ನಮ್ಮ ಸಂವಿಧಾನ. ಡಾ|| ಬಿ ಆರ್ ಅಂಬೇಡ್ಕರ್ ರಚಿತ ಈ ಸಂವಿಧಾನ ಎಲ್ಲರಿಗೂ ಸರಿ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ ಎಂದರು.

*ಈ ಶುಭ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎ ವಾಸಿಂ ರವರು ಹಾಡಿದ ಉತ್ತಮ ಸಂದೇಶ ಸಾರುವ ಸುಮಧುರ ಗೀತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.*

[t4b-ticker]

You May Also Like

More From Author

+ There are no comments

Add yours