ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದಾಗ ಜೀವನದಲ್ಲಿ ಗೆಲುವು ಸಾಧ್ಯ: ಡಿಸಿ ಕವಿತಾ ಎಸ್.ಮನ್ನಿಕೇರಿ.

 

 

 

 

ಚಿತ್ರದುರ್ಗ,ಆಗಸ್ಟ್17:
ಉದ್ಯೋಗಾಕಾಂಕ್ಷಿಗಳು ಉದ್ಯೋಗ ಪಡೆದಾಗ ಶ್ರದ್ಧೆ ಮತ್ತು ನಿಷ್ಠೆಯಿಂದ ಕೆಲಸ ಮಾಡಬೇಕು. ಯಾವ ಕೆಲಸವೇ ಆಗಲಿ ಚಾಚು ತಪ್ಪದೇ ಆಸಕ್ತಿಯಿಂದ ಮಾಡಿದಾಗ ಜೀವನದಲ್ಲಿ ಗೆಲುವು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಸ್ಟೇಡಿಯಂ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಯಲ್ಲಿ ಮಂಗಳವಾರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಹಾಗೂ ಸರ್ಕಾರಿ ಕೈಗಾರಿಕೆ ಸಂಸ್ಥೆ (ಮಹಿಳಾ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ  ಮಿನಿ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲಸದಲ್ಲಿ ಯಾರಿಗೂ ಕೀಳರಿಮೆ ಭಾವನೆ ಇರಬಾರದು. ಈ ಭಾವನೆಯನ್ನು ಬಿಟ್ಟು ಕೆಲಸ ಮಾಡಬೇಕು. ಉದ್ಯೋಗಾಕಾಂಕ್ಷಿಗಳು ದುಡಿಯಬೇಕು ಎಂಬ ಛಲ ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೋವಿಡ್-19 ಮೊದಲ ಮತ್ತು ಎರಡನೇ ಅಲೆ ಹಾಗೂ ಸಂಭಾವ್ಯ ಮೂರನೇ ಅಲೆಯ ಹಿನ್ನೆಲೆಯಲ್ಲಿ ಉದ್ಯೋಗದ ಅವಶ್ಯಕತೆ ತುಂಬಾ ಇದೆ. ಈ ಸಂದರ್ಭದಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ತುಂಬಾ ಅದ್ಭುತವಾದ ಕಾರ್ಯವಾಗಿದೆ ಎಂದ ಅವರು ಕಂಪನಿಗಳು ಇಂತಹ ಸಂದರ್ಭದಲ್ಲಿ ಯಾರಿಗೆ ಉದ್ಯೋಗ ಅವಶ್ಯಕತೆ ಇದೆಯೋ ಅಂತವರಿಗೆ ಉದ್ಯೋಗ ನೀಡಿದರೆ ಒಂದು ದೊಡ್ಡ ಸೇವೆ ಮಾಡಿದಂತಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ ಮಾತನಾಡಿ, ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೌಶಲ್ಯಾಭಿವೃದ್ಧಿ ರೂಢಿಸಿಕೊಂಡು, ಜ್ಞಾನ ಬೆಳೆಸಿಕೊಂಡು ಉತ್ತಮ ಆಸಕ್ತಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಸಮಾನ ಉದ್ಯೋಗಾವಕಾಶಗಳು ಇರುವುದನ್ನು ಕಾಣಬಹುದು. ಆದರಿಂದ ಕಂಪನಿಯವರು ನೀಡುವ ಉದ್ಯೋಗ ಅವಕಾಶವನ್ನು ಉತ್ತಮವಾಗಿ ಸದ್ಭಬಳಕೆ ಮಾಡಿಕೊಂಡು. ನಿಮ್ಮ ಆಸಕ್ತಿಗಾನುಗುಣವಾಗಿ ಉದ್ಯೋಗ ಪಡೆದು ಹೆಚ್ಚಿನ ಕೌಶಲ್ಯಾಭಿವೃದ್ಧಿಯನ್ನು ಬೆಳಿಸಿಕೊಳ್ಳಬೇಕು. ಜೊತೆಗೆ ಮೇಳದಲ್ಲಿ ನೀಡುವ ಎಲ್ಲಾ ರೀತಿಯ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಉದ್ಯೋಗ ಕ್ಷೇತ್ರದಲ್ಲಿ ಯಶಸ್ವಿಯಾಗಿ ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಿ ಎಂದರು.
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಕಿಶೋರ್ ಕುಮಾರ್ ಮಾತನಾಡಿ, ಜಾಬ್ ಸ್ವೀಕರ್ ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಯಲ್ಲಿ ತರುವುದು ಈ ಮೇಳದ ಉದ್ದೇಶವಾಗಿದೆ. ಉದ್ಯೋಗ ಆಕಾಂಕ್ಷಿಗಳು ಹಿಂಜರಿಕೆ ಮನೋಭಾವವನ್ನು ತೊರೆದು ಎಲ್ಲಿ ಬೇಕಾದರೂ ಕೆಲಸ ನೀಡಿದರೂ ಸಹ ತಾನು ಮಾಡುಲು ಸಿದ್ದ ಎಂಬ ಛಲ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಬಿ.ಸುರೇಶ್ ಮಾತನಾಡಿ, ಉದ್ಯೋಗ ಪ್ರತಿಯೊಬ್ಬರ ಜೀವನದ ಎರಡನೇ ಮೆಟ್ಟಲು. ಉದ್ಯೋಗವು ಆರ್ಥಿಕ ಸ್ಥಿತಿ ಉತ್ತಮ ಮಾಡುವುದಕ್ಕೆ ಹಾಗೂ ಕುಟುಂಬ ನಿರ್ವಹಣೆಗೆ ಅತ್ಯವಶ್ಯಕವಾದ ಸಾಧನವಾಗಿದೆ. ಉದ್ಯೋಗಾಕಾಂಕ್ಷಿಗಳು ಮೊದಲು ಯಾವ ಕೆಲಸವಾಗಲಿ ಅದನ್ನು ನಾನು ನಿಭಾಯಿಸುತ್ತೇನೆ ಎಂಬ ಮನೋಭಾವ ಹೊಂದಿರಬೇಕು ಆಗ ಅವಕಾಶಗಳು ಒಲಿದು ಬರುತ್ತವೆ ಎಂದು ಹೇಳಿದರು.
ಅಭ್ಯರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿ ಉದ್ಯೋಗ ಪಡೆಯುವಲ್ಲಿ ಸಫಲರಾದಾಗ ಮಾತ್ರ ಉದ್ಯೋಗ ಮೇಳಗಳು ಸಾರ್ಥಕವಾಗುತ್ತವೆ ಎಂದರು.
ಮಿನಿ ಉದ್ಯೋಗ ಮೇಳದಲ್ಲಿ 18ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ್, ಹಿರಿಯ ತರಬೇತಿ ಅಧಿಕಾರಿ ವಿ.ಆರ್. ಕುಬೇರಪ್ಪ, ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ಮಹಮದ್ ಖಜಾಹುಸೇನ್, ಖಾಸಗಿ ಕಂಪನಿಯ ಹೆಚ್‍ಆರ್‍ಗಳು ಸೇರಿದಂತೆ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಉದ್ಯೋಗ ವಿನಿಮಯ ಕೇಂದ್ರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

 

[t4b-ticker]

You May Also Like

More From Author

+ There are no comments

Add yours