ಶೌಚಾಲಯ ಅವ್ಯವಹಾರ ತನಿಖೆಗೆ ಆದೇಶ: ಸಚಿವ ಬಿ.ಸಿ.ಪಾಟೀಲ್

 

 

 

 

ಚಿತ್ರದುರ್ಗ, ಏ.08:
ಸ್ವಚ್ಛಭಾರತ್ ಮಿಷನ್ ಯೋಜನೆಯಡಿ ಒಂದೇ ಗ್ರಾಮ ಪಂಚಾಯಿತಿಯಲ್ಲಿ 360ಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿಯೂ ತನಿಖೆ ನಡೆಸಿ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ 2021-22ನೇ ಸಾಲಿನ ಮಾರ್ಚ್-2022ರ ಅಂತ್ಯದವರೆಗಿನ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಕೇವಲ ಒಂದೇ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 360ಕ್ಕೂ ಹೆಚ್ಚು ಶೌಚಾಲಯಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಿದೆ. ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ತನಿಖೆ ನಡೆಸಬೇಕು. ಒಂದು ವೇಳೆ ಶೌಚಾಲಯ ನಿರ್ಮಾಣದಲ್ಲಿ ಅವ್ಯವಹಾರ ನಡೆದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಎಲ್ಲಾ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ತಾಕೀತು ಮಾಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗ ತಾಲ್ಲೂಕು ತುರುವನೂರು ಹೋಬಳಿಯ ಬೆಳಗಟ್ಟ ಹಾಗೂ ಐನಹಳ್ಳಿ ಗ್ರಾಮ ಪಂಚಾಯಿತಿಯ ಶೌಚಾಲಯಗಳ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಸ್ವಚ್ಛ ಭಾರತ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದೆ.  ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಹೊರಗುತ್ತಿಗೆ ಸಿಬ್ಬಂದಿಯಿಂದ ಪ್ರಕರಣ ದಾಖಲಿಸಿ: ಹೊಸದುರ್ಗ ರಶ್ಮಿ ಕಂಪ್ಯೂಟರ್ ಅವರು ಹೊರಗುತ್ತಿಗೆ ಸಿಬ್ಬಂದಿಯವರಿಗೆ ಪಿ.ಎಫ್ ಮತ್ತು ಇ.ಎಸ್.ಐ ಹಣ ಪಾವತಿ ಮಾಡದೇ ದುರುಪಯೋಗವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ವೇತನ ಹಾಗೂ ಇ.ಎಸ್.ಐ ಹಾಗೂ ಪಿ.ಎಫ್ ಪಾವತಿಯಾಗದೇ ಇರುವ ಬಗ್ಗೆ ಸಂಬಂಧಪಟ್ಟ ಸಿಬ್ಬಂದಿಯವರಿಂದ ಪ್ರಕರಣದ ದಾಖಲಿಸಿ, ತನಿಖೆ ಮಾಡಿ ಎಂದು ಸಚಿವರು ತಿಳಿಸಿದರು.
ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮಾತನಾಡಿ, ಹೊಸದುರ್ಗ ರಶ್ಮಿ ಕಂಪ್ಯೂಟರ್ ಅವರಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ರೂ.10 ರಿಂದ 12 ಕೋಟಿ ಜಮಾ ಮಾಡಲಾಗಿದೆ. ಈ ಕುರಿತು ಮತ್ತೊಮ್ಮೆ ಲೆಕ್ಕಪರಿಶೋಧನೆ ಮಾಡಬೇಕು. ಅವ್ಯವಹಾರದ ಕುರಿತು ತನಿಖೆ ನಡೆಸಬೇಕು ಎಂದು ಹೇಳಿದರು.
ಜಿಲ್ಲಾ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಹೊಸದುರ್ಗ ರಶ್ಮಿ ಕಂಪ್ಯೂಟರ್ ಅವರು ಹೊರಗುತ್ತಿಗೆ ಸಿಬ್ಬಂದಿಯವರಿಗೆ ಪಿ.ಎಫ್ ಮತ್ತು ಇ.ಎಸ್.ಐ ಹಣ ಪಾವತಿ ಮಾಡದೇ ದುರುಪಯೋಗ ಪಡಿಸಿಕೊಂಡಿರುವ ಕಾರಣ ಪ್ರಕರಣ ದಾಖಲಿಸಲಾಗಿದೆ.   ಈ ಪ್ರಕರಣವು ಉಚ್ಛ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿದೆ ಸಭೆಗೆ ಮಾಹಿತಿ ನೀಡಿದರು.
ಎಂಎಸ್‍ಐಎಲ್‍ಗೆ ನಿರ್ಬಂಧ ಸಲ್ಲದು: ಸರ್ಕಾರದ ಆದೇಶದಂತೆ ಎಂಎಸ್‍ಐಲ್‍ಗೆ ಪ್ರಾರಖಭಕ್ಕೆ ಎಲ್ಲೆಲ್ಲಿ ಅನುಮತಿ ಪಡೆಯಲಾಗಿದೆಯೇ ಅಂತಹ ಕಡೆ ಎಂಎಸ್‍ಐಎಲ್ ಪ್ರಾರಂಭಕ್ಕೆ ಅನುಮತಿಸಬೇಕು ಎಂದು ಸಚಿವರು ತಿಳಿಸಿದರು.
ಕೆಲವು ಅಂಗಡಿಗಳಲ್ಲಿ ಗುಣಮಟ್ಟದವಿಲ್ಲದ ಮದ್ಯ ಸೇವಿಸುವುದರಿಂದ ಜನರ ಆರೋಗ್ಯ ಹಾಳಾಗುತ್ತದೆ. ಎಂಎಸ್‍ಐಎಲ್ ಮದ್ಯದ ಮಳಿಗೆಯಲ್ಲಿ ಗುಣಮಟ್ಟದ ಮದ್ಯ ದೊರೆಯಲಿದೆ. ಎಂಎಸ್‍ಐಎಲ್‍ಗೆ ಸ್ಥಾಪನೆಗೆ ಯಾವುದೇ ನಿರ್ಬಂಧ ಮಾಡುವಂತಿಲ್ಲ ಎಂದು ಸಚಿವರು ಅಬಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೋಟಾರ್ ಅಳವಡಿಕೆಗೆ ಸೂಚನೆ: ಅಂಬೇಡ್ಕರ್ ಹಗೂ ವಾಲ್ಮೀಕಿ ಅಭಿವೃದ್ಧಿ ನಿಮಗದಡಿ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕೊಳವೆಬಾವಿ ಕೊರೆದು ಆರು ವರ್ಷವಾದರೂ ಮೋಟಾರ್ ಅಳವಡಿಕೆ ಮುಂದಾಗಿಲ್ಲ ಎಂದು ಶಾಸಕ ಎಂ.ಚಂದ್ರಪ್ಪ ಬೇಸರ ವ್ಯಕ್ತಪಡಿಸಿದ ಅವರು, ಇನ್ನು 15 ದಿನದೊಳಗೆ ಮೋಟಾರ್ ಸರಬರಾಜು ಮಾಡುವಂತೆ ತಾಕೀತು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು, 2017-18 ರಿಂದ 1226 ಫಲಾನುಭವಿಗಳಿಗೆ ಮೋಟಾರ್ ಅವಳಡಿಕೆಗೆ ಬಾಕಿ ಇದೆ. ಗುರುವಾರ ಮೋಟಾರ್ ಅಳವಡಿಸುವಂತೆ ಕೇಂದ್ರ ಕಚೇರಿಯಿಂದ ಆದೇಶ ಬಂದಿದ್ದು, ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ವೇದಾವತಿಯಲ್ಲಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದು, 30 ಅಡಿಯವರೆಗೂ ಮರಳುಗಾರಿಕೆಯನ್ನು ಅಕ್ರಮವಾಗಿ ನಡೆಸಲಾಗುತ್ತಿದೆ. ಕಾನೂನು ಪ್ರಕಾರ ನಡೆಯುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ವೇದಾವತಿ ನದಿಯಲ್ಲಿ ನೀರು ಇದ್ದಾಗ ಮರಳುಗಾರಿಕೆ ಮಾಡುತ್ತಿದ್ದಾರೆ. ಚೆಕ್‍ಫೋಸ್ಟ್ ಸ್ಥಾಪನೆ ಮಾಡಿಲ್ಲ ಹಾಗೂ ಜಿಪಿಎಸ್ ಅಳವಡಿಕೆ ಮಾಡಿಲ್ಲ ಎಂದು ಶಾಸಕರು ಆಕ್ಷೇಪವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ.ಪಾಟೀಲ್ ಅವರು ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳುಗಾರಿಕೆ ವಿರುದ್ಧ ಕಾನೂನುಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಮರಳುನೀತಿಗೆ ಸಂಬಂಧಿಸಿದಂತೆ ಈಗಾಗಲೇ ಸಭೆ ನಡೆಸಲಾಗಿದೆ. ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಸಭೆ ನಡೆಸಲಾಗಿದೆ. ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳ ಮೇಲೆ ದಾಳಿ ನಡೆಸಲು ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಡಿಡಿಪಿಐಗೆ ತರಾಟೆ: ಎಸ್‍ಎಸ್‍ಎಲ್‍ಸಿ ಮುಖ್ಯ ಪರೀಕ್ಷೆಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗುತ್ತಿದ್ದಾರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಎಲ್ಲ ಬಿಇಓಗಳು ಮಕ್ಕಳ ನಿರಾಸಕ್ತಿ ಎಂದು ಕಾರಣ ಎಂದು ವರದಿ ನೀಡಿದ್ದಾರೆ. ಗೈರು ಹಾಜರಿಗೆ ಸೂಕ್ತ ಕಾರಣ ತಿಳಿದುಕೊಂಡಿಲ್ಲ, ಶಿಕ್ಷಣ ಇಲಾಖೆಯನ್ನು ಉಸ್ತುವಾರಿ ವಹಿಸುತ್ತಿರುವ ನೀವುಗಳ ಮಕ್ಕಳ ಗೈರಾಗಲು ಕಾರಣ ತಿಳಿಯಬೇಕು. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಕ್ಕಳ ಭವಿಷ್ಯದ ಮುಖ್ಯಘಟ್ಟ. ಮಕ್ಕಳ ಶಿಕ್ಷಣ ಮೊಟಕಾಗಬಾರದು. ಮಕ್ಕಳು ವಲಸೆ ಹೋಗಿದ್ದಾರೆಯೇ, ಬಾಲ್ಯವಿವಾಹವಾಗಿದೆಯೇ ಅಥವಾ ಇನ್ಯಾವುದೇ ಕಾರಣವಿದೆಯೇ ಎಂಬ ಇತ್ಯಾದಿ ಅಂಶಗಳನ್ನು ಪತ್ತೆಹಚ್ಚಿ, ಮಕ್ಕಳು ಮುಖ್ಯವಾಹಿನಿಗೆ ಬರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಕೆಲಸದಲ್ಲಿ ಬೇಜವಾಬ್ದಾರಿತನ ಸಲ್ಲದು ಎಂದು ಡಿಡಿಪಿಐ ಕೆ.ರವಿಶಂಕರ್‍ರೆಡ್ಡಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಭೂಸ್ವಾದೀನಕ್ಕೆ ಕಾಮಗಾರಿ ವಿಳಂಬಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಾರಣರಾಗಿದ್ದಾರೆ. ಎರಡು ತಿಂಗಳವರೆಗೆ ಕಡತಗಳನ್ನು ಪೆಂಡಿಂಗ್ ಇಡುತ್ತಾರೆ. ಭೂಸ್ವಾಧೀನದ ಹಿನ್ನಡೆಗೆ ಕಾರಣರಾಗಿದ್ದೀರಾ ಎಂದು ಸಚಿವರು ತೋಟಗಾರಿಕೆ ಇಲಾಖೆ ಅಧಿಕಾರಿಗಳ ವಿರುದ್ಧ ಅಸಾಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ನಂದಿನಿದೇವಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕುಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಫೋಟೋ ವಿವರ:ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

 

 

[t4b-ticker]

You May Also Like

More From Author

+ There are no comments

Add yours