ವಿಧಾನ ಪರಿಷತ್ ಚುನಾವಣೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ ಡಿ.10ರಂದು ಬೆಳಿಗ್ಗೆ 08 ರಿಂದ ಸಂಜೆ 4 ರವರೆಗೆ ಮತದಾನ

 

 

 

 

ಚಿತ್ರದುರ್ಗ, ಡಿಸೆಂಬರ್09:
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಮತದಾನವು ಡಿಸೆಂಬರ್ 10ರಂದು ಬೆಳಿಗ್ಗೆ 08 ರಿಂದ ಸಂಜೆ 4 ರವರೆಗೆ ನಡೆಯಲಿದ್ದು, ಮತದಾನದ ಸಿಬ್ಬಂದಿಗಳು ಗುರುವಾರ ಮತಗಟ್ಟೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ಪ್ರಾಶಸ್ತ್ಯ ಮತದಾನ ಪದ್ಧತಿ ಇದಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರು, ಸ್ಥಳೀಯ ಸಂಸ್ಥೆಗಳಾದ ಪಟ್ಟಣಪಂಚಾಯಿತಿ, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆ ಸದಸ್ಯರು ಹಾಗೂ ಶಾಸಕರು, ಸಂಸದರು ಮತದಾರರಾಗಿರುತ್ತಾರೆ.
ಮತದಾರರು ಮತದಾನದ ವೇಳೆ ಎಫಿಕ್ ಕಾರ್ಡ್ ಅಥವಾ ತಮ್ಮ ಭಾವಚಿತ್ರವಿರುವ ಇತರೆ ಗುರುತಿನ ಚೀಟಿ ಅಥವಾ ಸ್ಥಳೀಯ ಸಂಸ್ಥೆಯವರು ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿ ಹಾಜರುಪಡಿಸುವುದು. ಮತದಾನ ಕೇಂದ್ರಗಳ ಒಳಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವಂತಿಲ್ಲ
ಕರ್ನಾಟಕ ವಿಧಾನ ಪರಿಷತ್ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ನವೀನ್ ಕೆ.ಎಸ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸೋಮಶೇಖರ್ ಬಿ ಹಾಗೂ ಪಕ್ಷೇತರ ಅಭ್ಯರ್ಥಿ ಹನುಮಂತಪ್ಪ ಸೇರಿದಂತೆ ಒಟ್ಟು ಮೂವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
284 ಮತಗಟ್ಟೆಗಳು: ಸುಗಮ ಮತದಾನಕ್ಕಾಗಿ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವ್ಯಾಪ್ತಿಗೆ ದಾವಣಗೆರೆ ಜಿಲ್ಲೆಯ ಹರಿಹರ, ದಾವಣಗೆರೆ ಹಾಗೂ ಜಗಳೂರು ತಾಲ್ಲೂಕು ಸೇರಿವೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕು ಸೇರಿದಂತೆ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ವ್ಯಾಪ್ತಿಗೆ ಒಟ್ಟು 9 ತಾಲ್ಲೂಕುಗಳು ಸೇರಿವೆ.
ಹರಿಹರ ತಾಲ್ಲೂಕಿನಲ್ಲಿ 24 ಮತಗಟ್ಟೆ, ದಾವಣಗೆರೆ 42, ಜಗಳೂರು 23 ಮತಗಟ್ಟೆ ಸೇರಿದಂತೆ ಒಟ್ಟು 89 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಮೊಳಕಾಲ್ಮುರು ತಾಲ್ಲೂಕಿನಲ್ಲಿ 17 ಮತಗಟ್ಟೆ, ಚಳ್ಳಕೆರೆ 41, ಚಿತ್ರದುರ್ಗ 39, ಹೊಳಲ್ಕೆರೆ 30, ಹಿರಿಯೂರು  34 ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿ 34 ಮತಗಟ್ಟೆ ಸೇರಿದಂತೆ 195 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕು ಹಾಗೂ ಚಿತ್ರದುರ್ಗ ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು 284 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
2384 ಪುರುಷ ಮತದಾರರು, 2689 ಮಹಿಳಾ ಮತದಾರರು ಸೇರಿದಂತೆ ಒಟ್ಟು 5073 ಮತದಾರರು ಇದ್ದಾರೆ.
452 ಮತದಾನ ಸಿಬ್ಬಂದಿ: ಪ್ರತಿಯೊಂದು ಮತಗಟ್ಟೆಗೆ ಒಬ್ಬರು ಪಿಆರ್‍ಓ ಹಾಗೂ ಒಬ್ಬರು ಎಪಿಆರ್‍ಓ ಅವರನ್ನು ನೇಮಕ ಮಾಡಲಾಗಿದ್ದು, 226 ಪಿಆರ್‍ಓ ಹಾಗೂ 226 ಎಪಿಆರ್‍ಓ ಸೇರಿದಂತೆ ಒಟ್ಟು 452 ಮತದಾನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳು: ಆಯಾ ತಾಲ್ಲೂಕುಗಳಲ್ಲಿ ತಾಲ್ಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆಯಲಿದೆ. ಚಿತ್ರದುರ್ಗ ತಾಲ್ಲೂಕು ಮಾತ್ರ ಸರ್ಕಾರಿ ವಿಜ್ಞಾನ ಕಾಲೇಜು (ಹೊಸ ಕಟ್ಟಡ)ದಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಹಾಗೂ ಮತ ಎಣಿಕೆ ಕಾರ್ಯ ನಡೆಯಲಿದೆ.
ಭದ್ರತಾ ವ್ಯವಸ್ಥೆ: 38 ಸೂಕ್ಷ್ಮ ಮತಟ್ಟೆಗಳು, 61 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 96 ಸಾಮಾನ್ಯ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ತಡೆಯಲು 99 ವೀಡಿಯೋ ಗ್ರಾಫರ್, 195 ವೀಕ್ಷಕರನ್ನು ಹಾಗೂ 499 ಪೊಲೀಸ್ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ನೇಮಿಸಲಾಗಿದೆ. ಮತಗಟ್ಟೆಗಳಿಗೆ 32 ಸೆಕ್ಟರ್ ಅಧಿಕಾರಿಗಳು, 37 ಬಸ್, 51ಜೀಪ್ ಹಾಗೂ 8 ಮಿನಿ ಬಸ್ ವಾಹನದ ವ್ಯವಸ್ಥೆ ಮಾಡಲಾಗಿದೆ.
======

 

 

[t4b-ticker]

You May Also Like

More From Author

+ There are no comments

Add yours