ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಗೆ ಆದ್ಯತೆ: ಬಜೆಟ್‍ನಲ್ಲಿ ಹೆಚ್ಚಿನ ಅನುದಾನಕ್ಕೆ ಕ್ರಮ:ಸಚಿವ ಎನ್. ಮುನಿರತ್ನ

 

 

 

 

ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ
***
ಚಿತ್ರದುರ್ಗ,ಜನವರಿ29:
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಎನ್. ಮುನಿರತ್ನ ಹೇಳಿದರು.
ಚಿತ್ರದುರ್ಗ ನಗರದ ತಮಟಕಲ್ಲು ರಸ್ತೆಯಲ್ಲಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಇ-ಕಚೇರಿ, ವೆಬ್‍ಸೈಟ್ ಮತ್ತು ಕಚೇರಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
1994-95ರಲ್ಲಿ ಬಯಲುಸೀಮೆ ಅಭಿವೃದ್ಥಿ ಮಂಡಳಿಯನ್ನು ಸ್ಥಾಪನೆ ಮಾಡಲಾಯಿತು. ಈ ಮಂಡಳಿಗೆ ವಾರ್ಷಿಕವಾಗಿ ರೂ.30 ರಿಂದ ರೂ.35 ಕೋಟಿ ಅನುದಾನವನ್ನು ಬಳಕೆ ನೀಡುತ್ತಾ ಬರಲಾಗಿದ್ದು, ಕೃಷಿ ಸಂಬಂಸಿದ ಚಟುವಟಿಕೆಗಳು, ರಸ್ತೆ, ಕೆರೆ ಅಭಿವೃದ್ಧಿ ಸೇರಿದಂತೆ ವಿವಿಧ ರೀತಿಯ ಅಭಿವೃದ್ಥಿ ಕಾರ್ಯಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಾಡುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯ ಎಂದರು.
ಅಲೆಮಾರಿ ಸುಡುಗಾಡು ಸಿದ್ದರ ಜನಾಂಗದವರು ನಮಗೊಂದು ಖಾಯಂ ವಿಳಾಸ, ಖಾಯಂ ವಾಸಸ್ಥಳ, ಮಕ್ಕಳ ಮುಂದಿನ ಭವಿಷ್ಯಕ್ಕೆ ಒಂದು ಆಸರೆ ಕೊಡಿ ಎಂದು ಕೇಳುತ್ತಿದ್ದಾರೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿರುವ ಅಲೆಮಾರಿ ಸುಡುಗಾಡು ಸಿದ್ದರ ಜನಾಂಗದವರಿಗೆ ಕೂಡಲೇ ನಿವೇಶನ, ಆಶ್ರಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಹಾಗೂ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಿ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಬಹಳ ಕಡಿಮೆ ಇದೆ. ಸಚಿವರು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಮುಂದಿನ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಪಡೆದು, ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದರು.
ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್ ಮಾತನಾಡಿ, ಎಲ್ಲಾ ಜಿಲ್ಲೆಗಳಿಗಿಂತ ಚಿತ್ರದುರ್ಗ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. 70 ವಿಧಾನ ಸಭಾ ಕ್ಷೇತ್ರಗಳಿಗೂ ಸಹ ಹೆಚ್ಚಿನ ಗಮನ  ಕೊಡಬೇಕು. ಯಾಕೆಂದರೆ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಿಕೊಂಡು ಅನುದಾನವನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ  ನಮ್ಮ ಮಧ್ಯಕರ್ನಾಟಕದ ಜಿಲ್ಲೆಯಾದ ಚಿತ್ರದುರ್ಗ ಬಯಲು ಸೀಮೆ ಪ್ರದೇಶವಾಗಿದೆ. ಪಾಲಿಕೆಯ ಸದಸ್ಯರಾಗಿ, ಸಚಿವರಾಗಿ ನಿಮ್ಮ ಕಾರ್ಯವೈಖರಿಯನ್ನು ನೋಡಿಕೊಂಡು ಬಂದಿದ್ದೇವೆ. ನೀವು ಹೆಚ್ಚು ಅನುದಾನವನ್ನು ತೆಗೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದವರು ಹಾಗಾಗಿ ಹೆಚ್ಚು ಅನುದಾನವನ್ನು  ತಂದು ನಮ್ಮ 70 ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ವಿಶೇಷವಾಗಿ ತುಮಕೂರು ಮತ್ತು ಚಿತ್ರದುರ್ಗ ಪ್ರದೇಶಗಳನ್ನು ಬಯಲು ಸೀಮೆ ಪ್ರದೇಶ ಎಂದು ಕರೆಯುತ್ತೇವೆ. ಬಯಲುಸೀಮೆ ಪ್ರದೇಶಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ಈ ಭಾಗದಲ್ಲಿರುವಂತಹ ಜನರಿಗೆ ಮೂಲಭೂತ ಸೌಕರ್ಯಗಳು ಇಲ್ಲ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿದ್ದಾರೆ. ಈ ಮಂಡಳಿ ರಚಿಸಿರುವ ಉದ್ದೇಶವೇ ಈ ಭಾಗದ ಜನರ ಅಭಿವೃದ್ಧಿ. ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ ಸಾಕಷ್ಟು ಅನುದಾನ ನೀಡಲಾಗಿದೆ. ನಮ್ಮ ಬಯಲು ಸೀಮೆ ಅಭಿವೃದ್ಧಿಗೆ ಸಚಿವರು ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಮಾತನಾಡಿ, ಬಯಲುಸೀಮೆ ಮಂಡಳಿ 1995 ರಿಂದ ಜಾರಿಗೆ ಬರುವಂತೆ ರಚನೆಯಾಗಿದೆ. ರಾಜ್ಯದ 14 ಜಿಲ್ಲೆಗಳನ್ನೊಳಗೊಂಡ 58 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ. 14 ಲೋಕಸಭಾ ಸದಸ್ಯರು, 70 ವಿಧಾನಸಭಾ ಸದಸ್ಯರು, 24 ವಿಧಾನಪರಿಷತ್ತು ಸದಸ್ಯರು, 10 ಮಂಡಳಿಯ ನಾಮನಿರ್ದೇಶಿತ ಸದಸ್ಯರು, 14 ಜಿಲ್ಲಾ ಪಂಚಾಯತ್ ಅಧ್ಯಕ್ಷರು, 14 ಜಿಲ್ಲಾಧಿಕಾರಿಗಳು ಹಾಗೂ ಒಬ್ಬ ಕಾರ್ಯದರ್ಶಿ ಸೇರಿದಂತೆ ಒಟ್ಟು 147 ಮಂದಿ ಮಂಡಳಿಯ ಸದಸ್ಯರಿದ್ದಾರೆ ಎಂದರು.
ಬಯಲುಸೀಮೆ ಪ್ರದೇಶದ ಸರ್ವಾಗೀಣ ಅಭಿವೃದ್ಧಿಗಾಗಿ ಮಂಡಳಿ ರಚನೆಯಾಗಿದೆ. ಈ ಪ್ರದೇಶಗಳ ಕೃಷಿ ತತ್ಸಂಬಂಧಿತ ಚಟುವಟಿಕೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಲ್ಯಾಣ ಕರ್ನಾಟಕಕ್ಕಿಂತ ಬಯಲುಸೀಮೆ ಮಂಡಳಿಯಲ್ಲಿ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳಿವೆ. ಈ ಮಂಡಳಿಗೆ ಸರ್ಕಾರದಿಂದ ಕಡಿಮೆ ಅನುದಾನ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಕೆ.ಪೂರ್ಣಿಮಾ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾದ ಶ್ಯಾಮಲ ಶಿವಪ್ರಕಾಶ್, ಸುದೀರ್ ರಾಮಸಾ ಕಾಟಿಗರ್, ಕಾರ್ಯದರ್ಶಿ ಡಾ.ಶ್ರೀಧರ ಬಿ ಭಜಂತ್ರಿ ಸೇರಿದಂತೆ ಮತ್ತಿತರರು ಇದ್ದರು.

 

 

[t4b-ticker]

You May Also Like

More From Author

+ There are no comments

Add yours