ದೇಶದ ನಿರುದ್ಯೋಗ ಪ್ರಮಾಣ ಶೇ. 6.5ಕ್ಕೆ ಏರಿಕೆಯಾಗಿದೆ: ಆದರ್ಶ ಯಲ್ಲಪ್ಪ

 

 

 

 

ಚಿತ್ರದುರ್ಗ: ದೇಶದಲ್ಲಿ ನಿರುದ್ಯೋಗ 6.5% ಏರಿದೆ. ನೋಟ್ ಬ್ಯಾನ್ ಆದ ನಂತರ ಇದರ ಪ್ರಮಾಣದ ಹೆಚ್ಚಾಗಿದೆ ಎಂದು ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾದ ಕಾರ್ಯಾಧ್ಯಕ್ಷ ಆದರ್ಶ ಯಲ್ಲಪ್ಪ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ರೈತ, ಕಾರ್ಮಿಕರು ಮತ್ತು ಸರ್ಕಾರಿ ನೌಕರರ ಸವಾಲುಗಳು ವಿಷಯದ ಕುರಿತು ಮಾತನಾಡಿದ ಅವರು, ನೆರೆಹೊರೆಯ ರಾಷ್ಟ್ರಗಳಿಗಿಂತ ನಿರುದ್ಯೋಗ ಏರಿಕೆಯ ಪ್ರಮಾಣ ಭಾರತದಲ್ಲಿ ಹೆಚ್ಚಿದೆ. 2012ರಲ್ಲಿ 2.5% ಇದ್ದ ನಿರುದ್ಯೋಗ ಪ್ರಮಾಣ ಏರಿಕೆಯಾಗಿದೆ. ಪದವೀಧರರು ಪಕೋಡ ಮಾರಿ ಎಂದು ಪ್ರಧಾನಿ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಸಂಘಟಿತ ವಲಯ ಸಂಪೂರ್ಣವಾಗಿ ಕುಸಿಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಒಬಿಸಿ, ಎಸ್.ಸಿ., ಎಸ್.ಟಿ ಸಮುದಾಯದವರಿಗೆ ಉದ್ಯೋಗಗಳು ಸಿಗುವುದಿಲ್ಲ. ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಸ್.ಟಿ.ಪಿ ಅನುದಾನವನ್ನು ಎಸ್ಸಿ, ಎಸ್.ಟಿ ಸಮುದಾಯದ ಉದ್ದಿಮೆದಾರರಿಗೆ ಅನುಕೂಲವಾಯಿತು. ಭೂಮಿ ಖರೀದಿಗೆ ಶೇ. 50ರಷ್ಟು ಹಣ, ಶೇ. 4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಯಿತು ಎಂದರು.
ಸರ್ಕಾರದ ನೀತಿಗಳಿಂದ ಪರಿಶಿಷ್ಟರಿಗೆ ಸಮಸ್ಯೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸಂಘಟಿತರಾಗಿ, ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ ಎಂದರು.

ಹಿಂದು ಎಂದರೆ ಮೋಕ್ಷಕ್ಕೆ ಹೋಗುವ ದಾರಿ, ಹಿಂದುತ್ವ ಎಂದರೆ ಸಂಸತ್ತಿಗೆ ಹೋಗುವದಾರಿ: ಎಸ್.ಬಾಲನ್
ಚಿತ್ರದುರ್ಗ: ಮನುಷ್ಯನ ಬೆವರು ಒಣಗುವ ಒಳಗೆ ಕೂಲಿ ಕೊಡಿ ಎಂದು ಮುಸ್ಲಿಂ ಧರ್ಮ ಹೇಳುತ್ತದೆ, ಹಿಂದೂ ಧರ್ಮ ಅಸಮಾನತೆಯನ್ನು ಹೇಳುತ್ತದೆ, ಕೆಲಸ ಮಾಡಿ ಕೂಲಿ ಕೇಳಬೇಡಿ ಎನ್ನುತ್ತದೆ ಎಂದು ಹಿರಿಯ ನ್ಯಾಯವಾದಿ ಎಸ್.ಬಾಲನ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ರೈತ, ಕಾರ್ಮಿಕರು ಮತ್ತು ಸರ್ಕಾರಿ ನೌಕರರ ಸವಾಲುಗಳು ವಿಷಯದ ಕುರಿತು ಮಾತನಾಡಿದ ಅವರು, ಕಾರ್ಮಿಕ ಕಾಯ್ದೆಗಳ ಪ್ರಕಾರ ಕೆಲಸ ಮಾಡಿ ನಿವೃತ್ತಿಯಾಗಬೇಕು, ಸೇವಾ ಭದ್ರತೆ, ವೇತನ ಭದ್ರತೆ, ಸಾಮಾಜಿಕ ಭದ್ರತೆಗಳನ್ನು ಒದಗಿಸಿ, ನಿವೃತ್ತಿಯ ನಂತರ ನಿವೃತ್ತಿ ವೇತನ ಕೊಡುತ್ತದೆ ಎಂದರು.
ಕಾರ್ಮಿಕ ಕಾಯ್ದೆಗಳನ್ನು ಯಾರೂ ಬಿಟ್ಟಿಯಾಗಿ ಕೊಟ್ಟಿಲ್ಲ. ಕೆಲಸ ಕಳೆದುಕೊಂಡು, ಸೆರೆಮನೆಗೆ ಹೋಗಿ ಪಡೆದವು. ಇವುಗಳ ಪರವಾಗಿ ಕಮ್ಯುನಿಸ್ಟರು, ಪೆರಿಯಾರ್ ಅವರು, ಅಂಬೇಡ್ಕರ್ ಅವರು ಹೋರಾಡಿದರು. ಕೇಸರಿ ಬಣ್ಣದವರಿಗೂ ಇವಕ್ಕೂ ಸಂಬಂಧವಿಲ್ಲ ಎಂದರು.
ಹಿಂದು ಎಂದರೆ ಮೋಕ್ಷಕ್ಕೆ ಹೋಗುವ ದಾರಿ, ಹಿಂದುತ್ವ ಎಂದರೆ ಸಂಸತ್ತಿಗೆ ಹೋಗುವದಾರಿ. ಆರ್ .ಎಸ್.ಎಸ್ ನವರು ಕಾರ್ಮಿಕರ ಪರವಾಗಿ ಎಂದೂ ಹೋರಾಡಿಲ್ಲ. ಸ್ವಾತಂತ್ರ್ಯ ಬಂದ ನಂತರ ಕನಿಷ್ಠ ವೇತನ ಸೇರಿದಂತೆ ಇತರ ಸವಲತ್ತುಗಳನ್ನು ಕೊಡಲಾಗಿದೆ. ನೆಹರು ಅವರ ಕಾಲದಲ್ಲಿ, ಇಂದಿರಾ ಗಾಂಧಿ ಕಾಲದಲ್ಲಿ ಉದ್ಯೋಗ ಸೃಷ್ಟಿಯಾಯಿತು. ಗುತ್ತಿಗೆ ನೌಕರರು ಇರಬಾರದು ಎಂಬ ಕಾಯ್ದೆಯನ್ನು ಇಂದಿರಾ ಗಾಂಧಿ ಜಾರಿಗೆ ತಂದರು ಎಂದರು.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಮಿಕರ ಪರವಾದ ಕಾನೂನುಗಳ ವಿರುದ್ಧ ಸಂಘಪರಿವಾರ ಇತ್ತು. ಇಡೀ ದೇಶದ ಕಾರ್ಮಿಕರ ವಿರುದ್ಧವಿದ್ದದ್ದು ಮೊರಾರ್ಜಿ ದೇಸಾಯಿ. 1992ರಲ್ಲಿ ಕಾರ್ಮಿಕರ ಹಕ್ಕುಗಳು ಬದಲಾದವು. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಲಾಯಿತು, ಜೊತೆಗೆ ಕಾರ್ಮಿಕ ಪರವಾದ ಕಾನೂನುಗಳನ್ನು ಧ್ವಂಸ ಮಾಡಿದರು. ಅಟಲ್ ಬಿಹಾರಿ ವಾಜಪೇಯಿ ಎಲ್ಲ ಕಾರ್ಮಿಕರಿಗೆ ಮಣ್ಣು ಹಾಕಿದರು. ಗುತ್ತಿಗೆ ಪದ್ಧತಿಯಲ್ಲಿ ಕಾರ್ಮಿಕರನ್ನು ತೆಗೆದುಕೊಳ್ಳುವ ಕೆಲಸಕ್ಕೆ ವಾಜಪೇಯಿ ಸರ್ಕಾರ ಮಾಡಿತು ಎಂದರು.
ರಾಜ್ಯದಲ್ಲಿ ಬಿಜೆಪಿ ಹಣ ಕರ್ಚು ಮಾಡಿ ಅಧಿಕಾರಕ್ಕೆ ಬಂದಿದೆ. ಬಂದ ನಂತರ ಕಾರ್ಮಿಕ ಕಾಯ್ದೆಗಳನ್ನು ಧ್ವಂಸ ಮಾಡಿದೆ. ಏರ್ ಪೋರ್ಟ್ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸ್ವಚ್ಛತೆಯ ಕೆಲಸ ಮಾಡುವವರು ದಲಿತರು ಮತ್ತು ಪಂಚಮರು. ಇವರೆಲ್ಲ ಹಿಂದೂಗಳು. ಹಿಂದೂ ನಾವೆಲ್ಲ ಒಂದು ಎಂದು ಹೇಳುವ ಸಂಘ ಪರಿವಾರ ಪೌರ ಕಾರ್ಮಿಕರಿಗೆ ಕನಿಷ್ಠ ವೇತನ ಕೊಡಬೇಕು, ಕಾಯಂ ಮಾಡಬೇಕು ಎಂದು ಪ್ರತಿಭಟನೆ ನಡೆಸಿಲ್ಲ ಎಂದರು.
ದೇವಸ್ಥಾನಗಳನ್ನು ನಮಗೆ ಕೊಡಿ, ಟಾಯ್ಲೆಟ್ ಗಳನ್ನು ವಿನಿಮಯ ಮಾಡಿಕೊಳ್ಳಲು ಹಿಂದೂ ನಾವೆಲ್ಲ ಒಂದು ಎನ್ನುವವರು ಒಪ್ಪುವರೆ, ಬೊಮ್ಮಾಯಿ, ಯಡಿಯೂರಪ್ಪ ಒಪ್ಪುವರೆ. 5-7 ಸಾವಿರ ವೇತನದಲ್ಲಿ ಊಟ ಮಾಡಲು ಸಾಧ್ಯವೇ? ಎಂದರು.
ಪಂಚಮರಿಗೆ, ಶೂದ್ರರಿಗೆ ಮಟನ್ ಬೇಕು. ಮುನ್ನೂರು ರೂಪಾಯಿಗೆ ಒಂದು ಕೆಜಿ ಮಟನ್ ಕೊಡಿ. ಕೊಡುವ ಸಂಬಳದಲ್ಲಿ ನೀರು ಕುಡಿಯಲು, ಊಟ ಮಾಡಲು ಸಾಧ್ಯವಿಲ್ಲ. ಹಿಂದೂ ಎನ್ನುವವರು ಏನು ಮಾಡಿದ್ದಾರೆ? ಟಾಯ್ಲೆಟ್ ಸ್ವಚ್ಛಗೊಳಿಸುವವರಿಗೆ ಬೋನಸ್ ಕೊಟ್ಟಿದ್ದಾರಾ ಎಂದರು.
ಶೂದ್ರರು ಎಲ್ಲ ಕೆಲಸ ಮಾಡುತ್ತಾರೆ, ಬರಿಹೊಟ್ಟೆಯಲ್ಲಿ ಕೆಲಸ ಮಾಡುತ್ತಾರೆ. ಸತ್ತವರಿಗೆ ಪರಿಹಾರ ಕೊಟ್ಟಿದ್ದಾರಾ? ಹೆಸರಿನಲ್ಲೇ ಶ್ರೇಣೀಕರಣ ಇದೆ. 6 ಲಕ್ಷ ಹಳ್ಳಿಗಳಲ್ಲಿ 6 ಲಕ್ಷ ಕೇರಿಗಳಿವೆ. ಇವುಗಳನ್ನು ಸೃಷ್ಟಿ ಮಾಡಿದ್ದು, ಮುಸ್ಲಿಮರ, ಕ್ರಿಶ್ಚಿಯನ್ನರ, ಜೈನರ, ಬೌದ್ಧರಾ? ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಮೋರಿಗಳನ್ನು ಸೃಷ್ಟಿಸಿದವರು ಯಾರು? ಇವುಗಳ ವಿರುದ್ಧ ನೀವು ಹೋರಾಡಿದ್ದೀರಾ ಎಂದರು.
ಸ್ವಾತಂತ್ರ್ಯ ಬಂದ ಮೇಲೆ ಹೇಗೋ ಜನ ಬದುಕಿದ್ದರು. ಈಗ ಏನೂ ಇಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಮನೆಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ದಲಿತರು ಬದುಕುತ್ತಿದ್ದಾರೆ. ಇವರು ಮುಸ್ಲಿಮರ, ಕ್ರಿಶ್ಚಿಯನ್ನರಾ? ಕಾರ್ಮಿಕರನ್ನು ಬೀದಿಗೆ ತಂದದ್ದು ಮೋದಿ ಸರ್ಕಾರ. ಇದನ್ನು ಯಾವ ಮಾಧ್ಯಮಗಳೂ ಹೇಳುವುದಿಲ್ಲ ಎಂದರು.
ದಲಿತರು, ಶೂದ್ರರು ಯಾವುದೇ ಹಕ್ಕು, ಸೌಲಭ್ಯ ಇಲ್ಲದಂತೆ ಖಾಸಗೀಕರಣ ಮಾಡಿ ಧ್ವಂಸ ಮಾಡಲಾಗಿದೆ. ಶೂದ್ರರು, ದಲಿತರು ಕಟ್ಟಿದ ರೈಲ್ವೇಯನ್ನು ಖಾಸಗೀಕರಿಸಿ ಮೀಸಲಾತಿ ಇಲ್ಲದಂತೆ ಮಾಡಲಾಗಿದೆ. ಕಾನೂನುಗಳನ್ನು ತಿದ್ದುಪಡಿ, ರದ್ದುಗೊಳಿಸಿ ಶೂದ್ರರು, ದಲಿತರನ್ನು ಬೀದಿಗೆ ತಳ್ಳುವುದಕ್ಕೆ ಹಿಂದುತ್ವ ಎನ್ನಲಾಗುತ್ತದೆ. ಹಿಂದುತ್ವ ಎಂದರೆ ಅತ್ಯಾಚಾರ, ಭ್ರಷ್ಟಾಚಾರ ಎಂದರು.
ಯುಎಪಿಎ ಕಾಯ್ದೆ ಕಾರ್ಮಿಕರು, ದಲಿತರು, ಶೂದ್ರರು, ಹೋರಾಟಗಾರರ ಮೇಲೆ ದಾಖಲಿಸಲಾಗುತ್ತದೆ. ಯಾರನ್ನಾದರೂ ಈ ಕಾಯ್ದೆಯಡಿ ಬಂಧಿಸಬಹುದು. ಇಂತಹ ಕಾಯ್ದೆಗಳನ್ನು ರೂಪಿಸಲಾಗುತ್ತಿದೆ. 18ನೇ ಶತಮಾನದಲ್ಲಿ ಫ್ರೆಂಚ್ ಕ್ರಾಂತಿಯಾಯಿತು. ನಂತರ ಮಾರ್ಕ್ಸ್ ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದವರು ಕಾರ್ಮಿಕರು ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಲೆನಿನ್ ನೇತೃತ್ವದಲ್ಲಿ ಕ್ರಾಂತಿಯಾಯಿತು. ಕಾರ್ಮಿಕರು ಅಧಿಕಾರಕ್ಕೆ ಬರುತ್ತಾರೆ. ಇದರ ಕಾರಣದಿಂದ ಪ್ರಪಂಚದಲ್ಲಿ ಉದಾರವಾದ ಆರಂಭವಾಗುತ್ತದೆ ಎಂದರು.
ದೇಶವನ್ನು ಬ್ರಾಹ್ಮಣರು, ಬನಿಯಾಗಳಲ್ಲ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಆರ್.ಎಸ್.ಎಸ್.ನವರು ಬ್ರಿಟಿಷರ ಗುಲಾಮರಾಗಿದ್ದರು. ಕೇಸರಿಕರಣ ನಿರ್ಮೂಲನೆಯಾಗಬೇಕು ಎಂದರು.

 

 

 

ಬಹುತೇಕ ಜನಪ್ರತಿನಿಧಿಗಳು ನಾಲಿಗೆಯನ್ನೇ ಕಳೆದುಕೊಂಡಿದ್ದಾರೆ : ಡಿ.ಚಂದ್ರಶೇಖರ್
ಚಿತ್ರದುರ್ಗ: ಜನಸಮುದಾಯ, ತಳಸಮುದಾಯದ ಸರ್ಕಾರಿ ನೌಕರರು ಜನಸಮುದಾಯದ ಪರವಾಗಿ ನಿಲ್ಲದಿದ್ದರೆ ಅವರ ಮಕ್ಕಳು ಅವರ ಕಣ್ಣಮುಂದೆಯೆ ಬಿಕಾರಿಗಳಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಸ್.ಸಿ, ಎಸ್.ಟಿ. ನೌಕರರ ಸಂಘದ ರಾಜ್ಯ ಅಧ್ಯಕ್ಷ ಡಿ.ಚಂದ್ರಶೇಖರ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ರೈತ, ಕಾರ್ಮಿಕರು ಮತ್ತು ಸರ್ಕಾರಿ ನೌಕರರ ಸವಾಲುಗಳು ವಿಷಯದ ಕುರಿತು ಮಾತನಾಡಿದ ಅವರು, ಯಾವುದೇ ಮಾಧ್ಯಮಗಳು ನಮ್ಮ ಕೈಯಲ್ಲಿ ಇಲ್ಲ. ಒಂದು ಲಕ್ಷ ಜನ ಪರಿಶಿಷ್ಟ ಜಾತಿ, ಪಂಗಡದವರಿದ್ದಾರೆ. ಒಂದು ದಿನದ ವೇತನ 25 ಕೋಟಿಯಾಗುತ್ತದೆ. ದಲಿತ ಒಕ್ಕೂಟಗಳು, ಮಾನವ ಬಂಧುತ್ವ ವೇದಿಕೆ ಸೇರಿ ಒಂದು ಮಾಧ್ಯಮ ತೆರೆಯಬೇಕು. ಇದಕ್ಕೆ 25 ಕೋಟಿಯನ್ನು ಕೊಡುತ್ತೇವೆ ಎಂದರು.
ಸರ್ಕಾರಿ ನೌಕರರಿಗೆ ಸಮಸ್ಯೆಯಾದರೆ ನ್ಯಾಯ ಸಿಗಲ್ಲ. ಬಹುತೇಕ ನ್ಯಾಯಮೂರ್ತಿಗಳು ಮೀಸಲಾತಿ ವಿರೋಧಿಗಳಾಗಿದ್ದಾರೆ. ಒಂದು ಸೆಕೆಂಡ್ ಕೇಸ್ ನಡೆಸಲು 20 ಲಕ್ಷಗಟ್ಟಲೇ ಕರ್ಚಾಗುತ್ತಿದೆ. ಪರಿಶಿಷ್ಟ ನೌಕರರ ಸಾವಿಗೆ ಸರ್ಕಾರಗಳು ಕಾರಣವಾಗಿವೆ. ಇಂದಿಗೂ ಇದರ ವಿರುದ್ಧ ಹೋರಾಟ ನಡೆಯುತ್ತಿದೆ ಎಂದರು.
ಬಹುತೇಕ ಜನಪ್ರತಿನಿಧಿಗಳು ನಾಲಿಗೆಯನ್ನೇ ಕಳೆದುಕೊಂಡಿದ್ದಾರೆ. ಎಲ್ಲ ಮಾಹಿತಿಯನ್ನು ಕೊಟ್ಟರು ಮಾತನಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರು ರಾಜ್ಯದಲ್ಲಿ ಪರಿಶಿಷ್ಟ ನೌಕರರ ಸಂಖ್ಯೆ ಕೇವಲ 1 ಲಕ್ಷ. ಕೇವಲ 1.5 ನಷ್ಟು ಜನ ಮಾತ್ರ ನೌಕರಿಯಲ್ಲಿದ್ದಾರೆ ಎಂದರು.

 

ಮನೆಯನ್ನು ಕಟ್ಟುವುದು ಮಾನವ ಬಂಧುತ್ವದ ಮೊದಲ ಆದ್ಯತೆ: ರವೀಂದ್ರ ನಾಯ್ಕರ್
ಚಿತ್ರದುರ್ಗ: ನಮ್ಮ ನಮ್ಮ ಮನೆಗಳನ್ನು ಕಟ್ಟುವುದು ಮಾನವ ಬಂಧುತ್ವದ ಮೊದಲ ಆದ್ಯತೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಬಂಧುತ್ವ ಸಂಘಟನೆ ವಿಷಯದ ಕುರಿತು ಮಾತನಾಡಿದ ಅವರು, ಮಾನವ ಬಂಧುತ್ವ ವೇದಿಕೆಯನ್ನು ಸಂಘಟಿಸುವ ಆರಂಭ ಕಾಲದಲ್ಲಿ. ಒಂದು ಊರಿನಿಂದ ಸಮಾಜದ ಪರವಾಗಿ ಕೆಲಸ ಮಾಡುವ ಒಬ್ಬ ಹುಡುಗನನ್ನು ಕೊಡಿ. ಅವರ ಮಾತನ್ನು 10 ಜನ ಕೇಳುವಂತಿರಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು ಎಂದರು.
ಮಾನವ ಬಂಧುತ್ವ ವೇದಿಕೆ ಮೂಢನಂಬಿಕೆ ವಿರುದ್ಧ ಹೋರಾಡುತ್ತದೆ. ಆದರೆ ಅದಷ್ಟೇ ನಮ್ಮ ಆದ್ಯತೆಯಲ್ಲ. ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಬಾ ಫುಲೆ, ಸಾವಿತ್ರಿ ಬಾ ಫುಲೆಯಂತವರ ಜನ್ಮದಿನಾಚರಣೆಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದೆ ಎಂದರು.
ಮಾನವ ಬಂಧುತ್ವ ವೇದಿಕೆ ಸುಮಾರು 400 ಜನ ಉದ್ಯಮಿಗಳಾಗಿದ್ದಾರೆ. ಇವರಿಗೆ ತರಬೇತಿಯನ್ನು ಮಾನವ ಬಂಧುತ್ವ ವೇದಿಕೆಯಿಂದ ನೀಡಲಾಗಿತ್ತು. ಇದರ ಜೊತೆಗೆ ಸೈನಿಕ, ಪೊಲೀಸ್ ಆಕಾಂಕ್ಷಿಗಳಿಗೆ , ಉದ್ಯೋಗ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

[t4b-ticker]

You May Also Like

More From Author

+ There are no comments

Add yours