ವಿವಿಸಾಗರ ಜಲಾಶಯದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದ ಸಿಎಂ
*****
ಚಿತ್ರದುರ್ಗ,ನವೆಂಬರ್19:
ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯದ ನೀರಿನ ಸಂಗ್ರಹ ಹಾಗೂ ಜಲಾಶಯದ ಸಾಮಥ್ರ್ಯದ ಕುರಿತು ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಂದ ಮಾಹಿತಿ ಪಡೆದರು.
ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಸತತವಾಗಿ ಸುರಿಯುತ್ತಿರುವ ಮಳೆಯ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ವೀಡಿಯೋ ಸಂವಾದದಲ್ಲಿ ಅವರು ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮಳೆಯ ಪ್ರಮಾಣ, ಜೀವಹಾನಿ, ಮನೆ ಹಾನಿ, ಜಾನುವಾರು ಹಾನಿ ಹಾಗೂ ಬೆಳೆಗಳ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದು ಈ ವೇಳೆ ವಿವಿಸಾಗರದ ಜಲಾಶಯ ಮಟ್ಟದ ಬಗ್ಗೆ ಮಾಹಿತಿ ಪಡೆದರು.
ವಿವಿಸಾಗರ ನವೆಂಬರ್ 19ಕ್ಕೆ 119.5 ಅಡಿಗೆ ತಲುಪಿದ್ದು, 21 1/2 ಟಿಎಂಸಿ ನೀರಿನ ಸಂಗ್ರಹವಿದ್ದು, ಗರಿಷ್ಟ 30 ಟಿಎಂಸಿ ಸಾಮಥ್ರ್ಯ ಹೊಂದಿದೆ. ಮುಖ್ಯಮಂತ್ರಿಯವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತೋಟಗಾರಿಕೆ, ಕಂದಾಯ ಇಲಾಖೆಅಧಿಕಾರಿಗಳು ಮಳೆಯಿಂದ ಆಗಿರುವ ಬೆಳೆ ನಷ್ಟವನ್ನು ಕ್ಷೇತ್ರ ಸಮೀಕ್ಷೆ ಮಾಡಿ ನಿಖರವಾಗಿ ಅಂಕಿಅಂಶಗಳನ್ನು ಕೂಡಲೇ ಅಪ್ಲೋಡ್ ಮಾಡಬೇಕು ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಅಭಿಯಂತರರು ಮಳೆಯಿಂದ ಹಾನಿಯಾದ ಮನೆಗಳ ಜಿಪಿಎಸ್ ಫೋಟೋ ಅಪ್ಲೋಡ್ ಮಾಡಬೇಕು. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ರಸ್ತೆ, ಸೇತುವೆಗಳು ಮಳೆಯಿಂದ ಹಾನಿಯಾಗಿ ಸಂಪರ್ಕ ಕಡಿತಗೊಂಡಲ್ಲಿ ತಕ್ಷಣವೇ ಸಂಪರ್ಕ ಕಾರ್ಯವನ್ನು ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ತಮ್ಮ ವಿವೇಚನೆ ಹಾಗೂ ಅಧಿಕಾರವನ್ನು ಬಳಸಿ ಮಳೆಯಿಂದ ಆಗುವ ತೊಂದರೆಗಳಿಗೆ ರಕ್ಷಣೆ ಮತ್ತು ಪರಿಹಾರವನ್ನು ತಕ್ಷಣ ಕೈಗೊಳ್ಳಬೇಕು ಎಂದು ಸೂಚನೆ ನೀಡಿ, ಮನೆಗಳು ಭಾಗಶಃ ಹಾನಿಯಾಗಿ, ನೀರು ನುಗ್ಗಿ ವಾಸಿಸಲು ತೊಂದರೆಯಾಗಿದಲ್ಲಿ ಅಂತಹ ಕುಟುಂಬದವರಿಗೆ ಕೂಡಲೇ ರೂ.10,000/- ಪರಿಹಾರ ನೀಡಲು ತಿಳಿಸಿದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾಹಿತಿ ನೀಡಿ, ನವೆಂಬರ್ 01 ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಆರು ಜೀವಹಾನಿ ಪ್ರಕರಣಗಳು ಸಂಭವಿಸಿವೆ. ನ.14ರಂದು ಹಿರಿಯೂರು ತಾಲ್ಲೂಕಿನಲ್ಲಿ ಮೂರು ಜೀವಹಾನಿ ಪ್ರಕರಣಗಳು ಹಾಗೂ ನ.19ರಂದು ನಾಯಕನಹಟ್ಟಿಯಲ್ಲಿ ಎರಡು ಜೀವಹಾನಿ ಹಾಗೂ ಹಿರಿಯೂರಿನಲ್ಲಿ ಒಂದು ಜೀವಹಾನಿ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಆರು ಜೀವಹಾನಿ ಪ್ರಕರಣಗಳು ಸಂಭವಿಸಿವೆ. ಈಗಾಗಲೇ ನ.14ರಂದು ಸಂಭವಿಸಿದ ಮೂರು ಜೀವಹಾನಿ ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ಇಂದು ಸಂಭವಿಸಿದ ಮೂರು ಜೀವಹಾನಿ ಪ್ರಕರಣಗಳಿಗೆ ಶುಕ್ರವಾರ ಸಂಜೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.
37 ಚಿಕ್ಕಜಾನುವಾರುಗಳು ಜೀವಹಾನಿಯಾಗಿದೆ. 220 ಭಾಗಶಃ ಮನೆಗಳು ಹಾನಿಯಾಗಿವೆ. ಕೃಷಿಗೆ ಸಂಬಂಧಿಸಿದಂತೆ 66,376 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗಳು ಹಾನಿಯಾಗಿವೆ. 33,800 ಹೆಕ್ಟೇರ್ ಶೇಂಗಾ, 10,413 ಹೆಕ್ಟೇರ್ ರಾಗಿ, 10,699 ಹೆಕ್ಟೇರ್ ಮೆಕ್ಕೆಜೋಳ ಹಾನಿಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಎಷ್ಟು ನಷ್ಟವಾಗಿದೆ ಎಂಬುವುದರ ಕುರಿತು ಸಮೀಕ್ಷೆ ನಡೆಸಲಾಗುತ್ತದೆ. ತೋಟಗಾರಿಕೆ ಬೆಳೆಗಳಿಗೆ ಯಾವುದೇ ನಷ್ಟವಾಗಿಲ್ಲ. 22 ಹೋಬಳಿ ಕೇಂದ್ರದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ನಾಯಕನಹಟ್ಟಿಯಲ್ಲಿ ಈಗಾಗಲೇ ಕಾಳಜಿ ಕೇಂದ್ರ ಆರಂಭವಾಗಿದೆ. ಸಹಾಯಕ್ಕಾಗಿ ಸಹಾಯವಾಣಿಯನ್ನೂ ಸಹ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ 166 ಕೆರೆಗಳು ಇದ್ದು, ಅದರಲ್ಲಿ 22 ಕೆರೆಗಳು ತುಂಬಿದ್ದು, ಇನ್ನೂ 36 ಕೆರೆಗಳು ಶೇ.50ರಷ್ಟು ಭರ್ತಿಯಾಗಿದೆ. ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ 47 ಕಿ.ಮೀನಷ್ಟು ರಸ್ತೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ಕೃಷಿ ಇಲಾಖೆ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
(ಫೋಟೋ ಕಳುಹಿಸಿದೆ)
=====
[t4b-ticker]
+ There are no comments
Add yours