ಜನಸಾಮಾನ್ಯರಿಗೆ ಉತ್ತಮ ಆಡಳಿತ ತಲುಪಿಸಿ: ಸಚಿವ ಬಿ.ಸಿ.ಪಾಟೀಲ್

 

 

 

 

ಚಿತ್ರದುರ್ಗ,ಫೆಬ್ರವರಿ11:
ಸ್ವಚ್ಛ, ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕೂಡಿರುವ ಉತ್ತಮವಾದ ಆಡಳಿತವನ್ನು ಜನಸಮಾನ್ಯರಿಗೆ ಮುಟ್ಟಿಸುವ ಕೆಲಸವಾಗಬೇಕು ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2021-22ನೇ ಸಾಲಿನ ಜನವರಿ-2022ರ ಅಂತ್ಯದವರೆಗಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕಾಂಗ, ಕಾರ್ಯಾಂಗ ಒಂದು ಗಾಡಿಯ ಎರಡು ಚಕ್ರಗಳಿದ್ದಂತೆ. ಶಾಸಕಾಂಗ ಮತ್ತು ಕಾರ್ಯಾಂಗ ಎರಡು ಚಕ್ರಗಳು ಸರಿಯಾಗಿ ಉರುಳಿದರೆ ಮಾತ್ರ ಉತ್ತಮವಾದ ಕೆಲಸ, ಆಡಳಿತ ಸಿಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸರ್ಕಾರದ ಜೊತೆ ಕೈಜೋಡಿಸಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅಧಿಕಾರಿಗಳು ನಿಮ್ಮ ಮನಸ್ಸಿಗೆ ಹಾಗೂ ನಿಮ್ಮ ಆತ್ಮಕ್ಕೆ ತೃಪ್ತಿಯಾಗುವಂತೆ ಕೆಲಸ ಮಾಡಬೇಕು. ಜನಪ್ರತಿನಿಧಿಗಳನ್ನು ಮೆಚ್ಚಿಸುವ ಉದ್ದೇಶದಿಂದ ಕೆಲಸ ಮಾಡಬೇಡಿ. ಜನಸಾಮಾನ್ಯರಿಗೆ ಕೈಗೆಟಕುವಂತೆ ಜನಸ್ನೇಹಿ ಅಧಿಕಾರಿಗಳಾಗಿ ಜನರ ಪ್ರೀತಿ ಗಳಿಸಿಕೊಂಡು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನರಿಗೆ ಸೇವೆ ಒದಗಿಸಬೇಕು ಎಂದು ತಾಕೀತು ಮಾಡಿದರು.
ರಜಾ ದಿನಗಳಲ್ಲಿ ಕೆಲವು ಅಧಿಕಾರಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ ಎಂಬ ದೂರುಗಳು ಸಹ ಕೇಳಿಬರುತ್ತಿವೆ. ಹಾಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು 24×7 ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ಮಾತನಾಡಿ, ಹಿಂಗಾರು ಹಂಗಾಮು ಪ್ರಾರಂಭವಾಗಿ ಈಗಾಗಲೇ 70 ದಿನಗಳ ಬೆಳೆಗಳು ಇವೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಬಿತ್ತನೆಬೀಜ ಮತ್ತು ರಸಗೊಬ್ಬರ ವಿತರಣೆಯನ್ನು ಗುರಿ ಮೀರಿ ವಿತರಣೆ ಮಾಡಲಾಗಿದೆ. ಪ್ರಸ್ತುತ 10 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಇದ್ದು, ರಸಗೊಬ್ಬರದ ಯಾವುದೇ ಕೊರತೆ ಇಲ್ಲ. ಜಿಲ್ಲೆಯಲ್ಲಿ ತುಂತುರು ಹನಿನೀರಾವರಿಗೆ ಹೆಚ್ಚಿನ ಬೇಡಿಕೆ ಇದೆ. ಜಿಲ್ಲೆಯಲ್ಲಿ ಎಂಟು ಸಾವಿರ ತಾಡಪಾಲುಗಳನ್ನು ಹಂಚಿಕೆ ಮಾಡಲಾಗಿದೆ
ಎಂದು ಸಭೆಗೆ ಮಾಹಿತಿ ನೀಡಿದರು.
ಫಸಲ್ ಭೀಮಾ ಯೋಜನೆಯಡಿಯಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 68216 ಹಾಗೂ ಹಿಂಗಾರು ಹಂಗಾಮಿನಲ್ಲಿ 18912 ಹಾಗೂ ಬೇಸಿಗೆ ಹಂಗಾಮಿನಲ್ಲಿ ಒಬ್ಬ ರೈತರು ಬೆಳೆ ವಿಮೆಗೆ ನೋಂದಣಿಯಾಗಿದ್ದಾರೆ. ಈ ಬಾರಿ ಬೆಳೆಹಾನಿಗೆ ಸಂಬಂಧಿಸಿದಂತೆ ಬೆಳೆವಿಮೆ ಪರಿಹಾರವನ್ನು ಮಾರ್ಚ್ ಅಥವಾ ಏಪ್ರಿಲ್‍ಯ ಅಂತ್ಯದಲ್ಲಿ ಪಾವತಿಸಲಾಗುತ್ತಿದೆ ಎಂದು ವಿಮಾ ಕಂಪನಿಯವರು ತಿಳಿಸಿದ್ದಾರೆ ಎಂದರು.
ಫಸಲ್ ಭೀಮಾ ಯೋಜನೆಯಡಿಯಲ್ಲಿ 2016-17ನೇ ಸಾಲಿನಿಂದ ಇಲ್ಲಿಯವರೆಗೂ ಒಟ್ಟು 330.24ಕೋಟಿ ಬೆಳೆ ವಿಮೆ ಪರಿಹಾರವನ್ನು ರೈತರ ಖಾತೆಗೆ ಜಮೆ ಪಾವತಿಸಲಾಗಿದೆ. ರೈತರಿಂದ 153 ಕೋಟಿ ಪ್ರೀಮಿಯಂ ಕಟ್ಟಿದ್ದಾರೆ ಎಂದು ಜಂಟಿಕೃಷಿ ನಿರ್ದೇಶಕರು ತಿಳಿಸಿದರು.
ಕೃಷಿ ಇಲಾಖೆಯ ಎಲ್ಲ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿಯೂ ವಿಮಾ ಕಂಪನಿಯುವರು ನಾಮಫಲಕ ಹಾಕಿ, ವಿಮಾ ಕಂಪನಿವತಿಯಿಂದ ಒಬ್ಬ ಸಿಬ್ಬಂದಿಯನ್ನು ಕಡ್ಡಾಯವಾಗಿ ನಿಯೋಜಿಸಬೇಕು. ರೈತರು ಭೇಟಿ ನೀಡಿದ ಸಮಯದಲ್ಲಿ ವಿಮಾ ಕಂಪನಿಯರು ರೈತರಿಗೆ ಸಿಗಬೇಕು ಎಂದು ಸಚಿವರು ತಿಳಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯ 40 ಗ್ರಾಮ ಪಂಚಾಯಿತಿಗಳಲ್ಲಿ 6 ಪಂಚಾಯಿತಿಗೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 16 ಪಂಚಾಯಿತಿಗಳಲ್ಲಿ 3 ಪಂಚಾಯಿತಿಗಳಿಗೆ ಮಾತ್ರ ಬೆಳೆವಿಮೆ ಪಾವತಿಸಲಾಗಿದೆ. ಈ ಭಾಗದ ವ್ಯಾಪ್ತಿಯಲ್ಲಿ ಬಹಳಷ್ಟು ಮಂದಿ ರೈತರು ಶೇಂಗಾ ಬೆಳೆಗೆ ಬೆಳೆವಿಮೆ ಪಾವತಿಸಿದ್ದಾರೆ. ವೈಜ್ಞಾನಿಕವಾಗಿ ಬೆಳೆ ಇಳುವರಿಗೆ ತಕ್ಕಂತೆ ಬೆಳೆ ವಿಮೆ ಪಾವತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಬೆಳೆ ವಿಮೆ ಪಾವತಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲಾಗಿದ್ದು, ಸಚಿವರು ಪರಿಶೀಲನೆ ನಡೆಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಇದು ಕೇಂದ್ರ ಸರ್ಕಾರದ ಪಾಲಿಸಿಯಾಗಿದ್ದು, ಈ ಕುರಿತು ಪರಿಶೀಲನೆ ಮಾಡಲಾಗುವುದು ಎಂದರು.

 

 

ಶಾಲಾ ಮಕ್ಕಳ ಶೌಚಾಲಯ ನಿರ್ಮಾಣಕ್ಕೆ ವರ್ಷ ಬೇಕಾ?: ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳ ಶೌಚಾಲಯ ನಿರ್ಮಾಣ ಮಾಡಲು ಒಂದು ವರ್ಷ ಬೇಕಾ ನಿಮಗೆ. ಮಾಹಿತಿ ಇಲ್ಲದೇ ಸಭೆಗೆ ಏಕೆ ಬರುತ್ತೀರಾ, ಏನು ಕೆಲಸ ಮಾಡುತ್ತಿರಾ ನೀವು. ಬೆರಳ ತುದಿಯಲ್ಲಿ ಅಂಕಿಅಂಶಗಳು ಇರಬೇಕು ಎಂದು ಡಿಡಿಪಿಐಗೆ ತೀವ್ರ ತರಾಟೆ ತೆಗೆದುಕೊಂಡರು.
ಜಿಲ್ಲೆಯ ಯಾವ ಯಾವ ತಾಲ್ಲೂಕಿನಲ್ಲಿ ಎಷ್ಟು ಶೌಚಾಲಯಗಳು ನಿರ್ಮಾಣವಾಗಿವೆ ಈ ಕುರಿತು ವಾರದೊಳಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸಚಿವರು ತಿಳಿಸಿದರು.
ಸರ್ಕಾರಿ ಶಾಲಾ ಮಕ್ಕಳು ಹೀನಾಯ ಪರಿಸ್ಥಿತಿಯಲ್ಲಿದ್ದು, ಮಕ್ಕಳ ಸುರಕ್ಷತೆ ದೃಷ್ಠಿಯಿಂದ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿ, ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ವಸತಿ ಶಾಲೆ ಪ್ರವೇಶಕ್ಕೆ ಆಯಾ ತಾಲ್ಲೂಕಿನಲ್ಲಿಯೇ ಅವಕಾಶ ಕಲ್ಪಿಸಿ: ರೂ.10 ರಿಂದ 20 ಕೋಟಿ ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ ವಸತಿ ನಿಲಯಗಳನ್ನು ನಿರ್ಮಿಸಲಾಗಿದ್ದು, ಇಂತಹ ವಸತಿ ಶಾಲೆಗಳಿಗೆ ಆಯಾ ತಾಲ್ಲೂಕಿನ ಮಕ್ಕಳಿಗೆ ಪ್ರವೇಶಾತಿಯನ್ನು ನೀಡದೇ ಬೇರೆ ಜಿಲ್ಲೆಯ ಬೇರೆ ತಾಲ್ಲೂಕಿನ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಿದರೇ ಹೇಗೆ ಎಂದು ಕೆಎಸ್‍ಆರ್‍ಟಿಸಿ ನಿಗಮದ ಅಧ್ಯಕ್ಷಕರು ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಮತಾ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅರ್ಜಿ ಆಹ್ವಾನಿಸಿ, ಪ್ರವೇಶ ಪರೀಕ್ಷೆ ನಡೆಸಿ ವಸತಿ ಶಾಲೆಗಳಿಗೆ ಪ್ರವೇಶಾತಿಯನ್ನು ರಾಜ್ಯಮಟ್ಟದಲ್ಲಿ ಕೌನ್ಸಿಲಿಂಗ್ ಮಾಡಿ ಪ್ರವೇಶಾತಿ ನೀಡಲಾಗುತ್ತಿದೆ ಎಂದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಆಯಾ ಜಿಲ್ಲೆಯ ಮಕ್ಕಳನ್ನು ಆಯಾ ಜಿಲ್ಲೆಯ ವಸತಿ ಶಾಲೆಗಳಲ್ಲಿಯೇ ಪ್ರವೇಶಾತಿ ನೀಡಬೇಕು ಎಂದು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ತಡೆಗೆ ಸೂಚನೆ: ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಮತ್ತು ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ತಕ್ಷಣವೇ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಹೊಸದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಡೀಮ್ಡ್ ಅರಣ್ಯವಿದ್ದರೂ ಕೂಡ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ನಡೆಯಲು ಜಿಲ್ಲೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದೇ ಅರಣ್ಯ ಇಲಾಖೆ ಅಧಿಕಾರಿಗಳು ಡಿಮ್ಡ್ ಅರಣ್ಯ ಪ್ರದೇಶವೆಂದು ಕಲ್ಲುಗಣಿಗಾರಿಕೆ ನಿಲ್ಲಿಸಿದ್ದಾರೆ. ಆದರೆ ಬೇರೆ ನಾಲ್ಕು ಕ್ರಷರ್‍ಗೆ ಎನ್‍ಒಸಿ ನೀಡಿದ್ದಾರೆ.  ನಾವು ವಿಧಾನಸಭೆ ಕಲಾಪದಲ್ಲಿಯೂ ಪ್ರಶ್ನಿಸಿದರೂ ಅಧಿಕಾರಿಗಳು ತಪ್ಪು ಮಾಹಿತಿ ಕೊಡುತ್ತಾರೆ. ಹಾಗಾಗಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡಬೇಕು ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು. ಇದಕ್ಕೆ ದನಿಗೂಡಿಸಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಅಕ್ರಮ ಹಾಗೂ ಲೈಸೆನ್ಸ್ ಪಡೆದಿರುವ ಮರಳು ಮತ್ತು ಕಲ್ಲು ಗಣಿಗಾರಿಕೆ ಸೇರಿದಂತೆ ಎಲ್ಲ ಗಣಿಗಾರಿಕೆಗಳ ಪಟ್ಟಿಯನ್ನು ವಾರದೊಳಗೆ ನೀಡಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಡಿ.ಶೇಖರ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

[t4b-ticker]

You May Also Like

More From Author

+ There are no comments

Add yours