ಕೋಟ್ಪಾ ಕಾಯ್ದೆ: ತಾಲ್ಲೂಕು ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ: ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ

 

 

 

 

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕೋಟ್ಪಾ ಕಾಯ್ದೆ: ತಾಲ್ಲೂಕು ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
***
ಚಿತ್ರದುರ್ಗ,ಜನವರಿ28:
ತಂಬಾಕು ನಿಯಂತ್ರಣಕ್ಕಾಗಿ ಇರುವ ಕೋಟ್ಪಾ-2003ರ ಕಾಯ್ದೆಯನ್ನು ತಾಲ್ಲೂಕು ಹಂತಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮನ್ವಯ ಸಮಿತಿಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋಟ್ಪಾ ಕಾಯ್ದೆಯ ಕಟ್ಟುನಿಟ್ಟಿನ ಜಾರಿಗಾಗಿ ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಸಮಿತಿ ಸಭೆಗಳನ್ನು ನಡೆಸಬೇಕು. ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳು ತಂಬಾಕು ಅಂಗಡಿಗಳಿಗೆ ದಿಢೀರನೇ ಪದೇ ಪದೇ ದಾಳಿ ನಡೆಸಿ ಕಾನೂನು ಕ್ರಮಕೈಗೊಳ್ಳಬೇಕು. ಸೆಕ್ಷನ್-4, 5, 6ಎ, 6ಬಿ ಹಾಗೂ 7 ಅನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಪ್ರಕರಣಗಳ ಗುರಿ ನಿಗಧಿಪಡಿಸಿ: ಜಿಲ್ಲೆಯಲ್ಲಿ ಕೋಟ್ಪಾ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾ ಯೋಜನೆ ತಯಾರಿಸಿ ತಾಲ್ಲೂಕುವಾರು ಪ್ರಕರಣಗಳ ಗುರಿ ನಿಗಧಿಪಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಾಲ್ಲೂಕು ಹಂತದ ಟಾಸ್ಕ್ ಫೋರ್ಸ್ ಸಮಿತಿಗೆ ಪ್ರಕರಣಗಳ ಗುರಿ ನಿಗಧಿಪಡಿಸುವುದರಿಂದ ಕಾಯ್ದೆಯು ಪರಿಣಾಮಕಾರಿ ಅನುಷ್ಠಾನವಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಪುರಸಭೆ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಹ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ವಿರುದ್ಧ ಹಾಗೂ ತಂಬಾಕು ಉತ್ಪನ್ನಗಳನ್ನು ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಮಾತನಾಡಿ, ಜಿಲ್ಲೆಯ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳನ್ನಾಗಿ ಮಾಡಲು ಅಗತ್ಯ ಕ್ರಮವಹಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದ ಹಲವು ಶಾಲೆಗಳಲ್ಲಿ ಶಾಲೆ ಕಾಂಪೌಂಡ್‍ಗೆ ಹೊಂದಿಕೊಂಡಿರುವಂತೆ ಅಂಗಡಿಗಳನ್ನು ಹಾಕಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳ ವಿರುದ್ಧ ಕಾನೂನುಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಪಂಚಾಯಿತಿ ಉಪಕಾರ್ಯದರ್ಶಿ ಗ್ರಾಮ ಪಂಚಾಯಿತಿ ವತಿಯಿಂದ ಅಂಗಡಿಗೆ ಲೈಸೆನ್ಸ್  ಕೊಡಲಾಗಿರುತ್ತದೆ. ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ. ತಂಬಾಕು ಉತ್ಪನ್ನಗಳ ಮಾರಾಟ ಅಂಗಡಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸಮಿತಿಯಿಂದ ದಾಳಿ ಮಾಡಿ ದಂಢ ವಿಧಿಸಲಾಗುವುದು ಎಂದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಮಾತನಾಡಿ, ಶಾಲೆಗಳ ಸುತ್ತಮುತ್ತ ತಂಬಾಕು ಕಾಯ್ದೆ ಉಲ್ಲಂಘನೆ ಮಾಡುವವರ ಪಟ್ಟಿಯನ್ನು ನೀಡಿದರೆ ಜಿಲ್ಲಾ ಹಂತ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳಿಂದ ದಾಳಿ ನಡೆಸಿ ದಂಢ ವಿಧಿಸಲಾಗುವುದು. ಕಳೆದ ಬಾರಿಯ ಸಭೆಯಲ್ಲಿ ಜಿಲ್ಲೆಯ 55 ಶಾಲೆಗಳ ಪಟ್ಟಿಯನ್ನು ನೀಡಲಾಗಿತ್ತು. ಶಿಕ್ಷಣ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ತಂಡದೊಂದಿಗೆ ಈ ಶಾಲೆಗಳಿಗೆ ಭೇಟಿ ನೀಡಿ  ತಂಬಾಕು ಮಾರಾಟಗಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದರು.
ಜಿಲ್ಲಾ ಸರ್ವೇಕ್ಷಣಾ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎನ್.ಕಾಶೀ ಮಾತನಾಡಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ದಾಳಿಗಳನ್ನು ಕೈಗೊಂಡು 2021-22ನೇ ಸಾಲಿನ ಏಪ್ರಿಲ್‍ನಿಂದ ಡಿಸೆಂಬರ್‍ವರೆಗೆ ಸೆಕ್ಷನ್-4, ಸೆಕ್ಷನ್-6ಎ ಹಾಗೂ ಸೆಕ್ಷನ್-6ಬಿಗೆ ಸಂಬಂಧಿಸಿದಂತೆ ಒಟ್ಟು 1144 ಪ್ರಕರಣಗಳನ್ನು ದಾಖಲಿಸಿ ರೂ.1,14,600/-ಗಳನ್ನು ದಂಡ ವಸೂಲಿ ಮಾಡಲಾಗಿದೆ. ಸೆಕ್ಷನ್-5ರ ಅಡಿಯಲ್ಲಿ 127 ಪ್ರತ್ಯಕ್ಷ ಹಾಗೂ ಪರೋಕ್ಷ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.
ಅಬಕಾರಿ ಇಲಾಖೆ ವತಿಯಿಂದ ಸೆಕ್ಷನ್-4ಕ್ಕೆ ಸಂಬಂಧಿಸಿದಂತೆ ಆಗಸ್ಟ್-2021 ರಿಂದ 2022ರ ಜನವರಿ 27 ರವರೆಗೆ 335 ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ.66,700/- ದಂಡ ವಸೂಲಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ನಾಗಶಯನ ಸಭೆಗೆ ಮಾಹಿತಿ ನೀಡಿದರು.
ಪೊಲೀಸ್ ಇಲಾಖೆವತಿಯಿಂದ 2021ನೇ ಸಾಲಿನಲ್ಲಿ 5,500 ಪ್ರಕರಣಗಳನ್ನು ದಾಖಲಿಸಿ ಒಟ್ಟು ರೂ.5,07,490 ದಂಡ ವಸೂಲಿ ಮಾಡಲಾಗಿದೆ ಎಂದು ಡಿವೈಎಸ್‍ಪಿ ಪಾಂಡುರಂಗ ತಿಳಿಸಿದರು.
ತಂಬಾಕು ಸೇವೆಯಿಂದ ಆಗುವ ದುಷ್ಪಾರಿಣಾಮಗಳ ಕುರಿತಂತೆ ರೈತರಿಗೆ ಜಾಗೃತಿ ಮೂಡಿಸುವುದು, ನ್ಯಾಯಬೆಲೆ ಅಂಗಡಿಗಳ ಹತ್ತಿರ ತಂಬಾಕು ಸೇವನೆಯಿಂದಾಗುವ ದುಷ್ಪಾರಿಣಾಮಗಳ ಕುರಿತು ಗೋಡೆ ಬರಹದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಡಿಜಿಟಲ್ ಬೋರ್ಡ್‍ನಲ್ಲಿ ತಂಬಾಕು ಸೇವನೆ ದುಷ್ಪಾರಿಣಾಮ ಕುರಿತು ಪ್ರದರ್ಶನ, ದಿನ ನಿತ್ಯದ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ದುಷ್ಪಾರಿಣಾಮಗಳ ಕುರಿತು ಆಡಿಯೋ ಜಂಗಲ್, ಜಿಲ್ಲೆಯ ಎಲ್ಲ ಶಾಲೆಗಳು ಮತ್ತು ಹಾಸ್ಟೆಲ್‍ಗಳನ್ನು ತಂಬಾಕು ಮುಕ್ತ ಶಾಲಾ, ಹಾಸ್ಟೆಲ್‍ಗಳನ್ನು ಮಾಡುವ ಕುರಿತು ಹಾಗೂ ಮುಂದಿನ ಕಾರ್ಯಸೂಚಿಗಳ ಕುರಿತು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕಾಶೀ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್, ಅಬಕಾರಿ ಉಪ ಆಯುಕ್ತ ನಾಗಶಯನ, ಡಿವೈಎಸ್‍ಪಿ ಪಾಂಡುರಂಗ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‍ರೆಡ್ಡಿ ಸೇರಿದಂತೆ ಆರೋಗ್ಯ ಇಲಾಖೆಯ ತಾಲ್ಲೂಕು ವೈದ್ಯಾಧಿಕಾರಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.

 

 

 

 

 

[t4b-ticker]

You May Also Like

More From Author

+ There are no comments

Add yours