ರಾಜಬೀದಿಗಳಲ್ಲಿ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಸಂಭ್ರಮದ ಮೆರವಣಿಗೆ

 

 

 

 

ಮೇ.೧೩ಸಿಟಿಡಿ೧ ರವಿ ಉಗ್ರಾಣ
ಚಿತ್ರದುರ್ಗ:
ಕೋಟೆನಾಡಿನ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಬ್ಬಳಾದ, ನಗರವಾಸಿನಿ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ನಗರದ ರಾಜಬೀದಿಗಳಲ್ಲಿ ವೈಭವದಿಂದ ನೆರವೇರಿತು.
ಉತ್ಸವದ ಪ್ರಯುಕ್ತ ಉತ್ಸವ ಮೂರ್ತಿಗೆ ಕಮಲದ ಹೂವು, ಗುಲಾಬಿ, ಕನಕಾಂಬರ, ಬಣ್ಣ ಬಣ್ಣದ ಸೇವಂತಿಗೆ, ಸುಗಂಧರಾಜ, ಮಲ್ಲಿಗೆ ಸೇರಿದಂತೆ ಮತ್ತಿತರ ಪುಷ್ಪಗಳಿಂದ ಪೋಣಿಸಿದ ಮಾಲೆಗಳಿಂದ ಅತ್ಯಂತ ಮನಮೋಹಕವಾಗಿ ಅಲಂಕರಿಸಲಾಗಿತ್ತು. ಇದರೊಟ್ಟಿಗೆ ಐದು ಕೆ.ಜಿ.ಯಷ್ಟು ಒಣದ್ರಾಕ್ಷಿಯಿಂದ ತಯಾರಿಸಲಾಗಿದ್ದ ಮಾಲೆಯನ್ನು ಹಾಕಲಾಗಿತ್ತು.

 

 


ಅಶ್ವಾರೂಢಳಾಗಿದ್ದ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಿಯನ್ನು ಬಗೆ, ಬಗೆಯ ಪುಷ್ಪಗಳಿಂದ ಅತ್ಯಂತ ಸುಂದರವಾಗಿ ಸಿಂಗರಿಸಲಾಗಿತ್ತು. ಭಕ್ತರ ಕಣ್ಮನ ಸೆಳೆಯುವಂತಿದ್ದ ಉತ್ಸವ ಮೂರ್ತಿಯನ್ನು ಎತ್ತಿನ ಬಂಡಿಯಲ್ಲಿ ಕೂರಿಸಲಾಯಿತು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತಸಮೂಹದಿಂದ ಉದೋ, ಉದೋ ಎಂಬ ಉದ್ಘಾರ ಘೋಷಗಳು ಮೊಳಗಿದವು.
ನಗರದ ಕೋಟೆ ರಸ್ತೆಯ ಶ್ರೀ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದ ಮುಂಭಾಗ ಶುಕ್ರವಾರ ಬೆಳಗ್ಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಸಭೆ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಭಕ್ತರು ಉಪಸ್ಥಿತರಿದ್ದರು.
ಕಹಳೆ, ಉರುಮೆ, ತಮಟೆ, ಕರಡಿ ಚಮ್ಮಾಳ, ಕೀಲುಕುದುರೆ, ಬೊಂಬೆ ಕುಣಿತ ಸೇರಿದಂತೆ ನಾನಾ ಜಾನಪದ ಕಲಾ ವಾದ್ಯಗಳೊಂದಿಗೆ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮಹಿಳಾ ಭಕ್ತರು ಅಲ್ಲಲ್ಲಿ ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಯುವಕರು ಡಿಜೆ ಸದ್ದಿಗೆ ಕುಣಿದು ಸಂಭ್ರಮಿಸಿದರು. ದೇವಿಯನ್ನು ಮಡಿಯಿಂದ ಸ್ವಾಗತಿಸಲು ದಾರಿಯುದ್ಧಕ್ಕೂ ಭಕ್ತರು ತಮ್ಮ ಮನೆಗಳ ಮುಂದೆ ನೀರು ಹಾಕಿ ರಂಗೋಲಿ ಹಾಕುತ್ತಿದ್ದ ದೃಶ್ಯ ಕಂಡು ಬಂದಿತು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜಾನಪದ ಕಲಾವಿದರು ಹಾಗೂ ಭಕ್ತರಿಗೆ ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ಸೇರಿದಂತೆ ಪ್ರಸಾದ ವಿತರಿಸಲಾಯಿತು.
ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ಚಿಕ್ಕಪೇಟೆ, ಆನೆಬಾಗಿಲು ಬಳಿ, ಬುರುಜನಹಟ್ಟಿ, ಸಿಹಿನೀರು ಹೊಂಡದ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‌ಬಿಎಂ ಸರ್ಕಲ್, ಧರ್ಮಶಾಲೆ ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆ ಮಾರ್ಗವಾಗಿ ದೇವಸ್ಥಾನ ತಲುಪಿತು. ದಾರಿಯುದ್ಧಕ್ಕೂ ಭಕ್ತರಿಂದ ಅಕ್ಕಿ, ಬೇಳೆ, ಬೆಲ್ಲ ಸೇರಿದಂತೆ ಮತ್ತಿತರ ದವಸ ದಾನ್ಯಗಳ ಮೀಸಲು ಸ್ವೀಕರಿಸಲಾಯಿತು.
ಕುಟುಂಬ ಪರಿವಾರದವರು ಆರೋಗ್ಯವಾಗಿರಲು ರವಿಕೆ, ಬಳೆ, ಅಕ್ಕಿ, ಬೇಳೆ, ಬೆಲ್ಲ, ಅರಿಶಿನ, ಕುಂಕುಮ, ಕೊಬರಿ, ಎಲೆ, ಅಡಿಕೆ ಒಳಗೊಂಡ ಮಡ್ಲಕ್ಕಿಯನ್ನು ದೇವತೆಗೆ ಮೀಸಲು ರೂಪದಲ್ಲಿ ನೀಡುವ ಪ್ರತೀತಿ ಇದೆ. ಶಕ್ತಿದೇವತೆಗಳಿಗೆ ಬೇವಿನ ಸೀರೆಯುಟ್ಟು ಹರಕೆ ತೀರಿಸುವ ಸಂಪ್ರದಾಯವು ಪ್ರತಿವರ್ಷ ನಡೆದುಕೊಂಡು ಬಂದಿರುವುದು ಕೂಡ ವಿಶೇಷ.
ಮೌಢ್ಯ ನಿಷೇಧ ಕಾಯಿದೆ ಪ್ರಯುಕ್ತ ಶನಿವಾರ ನಡೆಯಬೇಕಿದ್ದ ಸಿಡಿ ಮಹೋತ್ಸವಕ್ಕೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಬ್ರೇಕ್ ಹಾಕಿದೆ. ಸಾಂಪ್ರದಾಯಿಕವಾಗಿ ಸಿಡಿ ಕಂಬದ ಪೂಜೆ ಮಾತ್ರ ನೆರವೇರಿಸಲಾಗುತ್ತದೆ. ಜಾತ್ರಾ ಮಹೋತ್ಸವದ ಪ್ರಯುಕ್ತ ದೇವಿಗೆ ಭಂಡಾರ ಪೂಜೆ ಹಾಗೂ ಪುಷ್ಪಾಲಂಕಾರದೊAದಿಗೆ ಪೂಜೆ ನೆರವೇರಲಿದೆ.
ಮೇ.೧೫ರ ಬೆಳಗ್ಗೆ ದೇವಿಗೆ ಅಭಿಷೇಕ, ಮಹಾಮಂಗಳಾರತಿ, ರಾತ್ರಿ ೯ಕ್ಕೆ ಜೋಗಪ್ಪ ಮತ್ತು ಜೋಗಮ್ಮ ಅವರಿಂದ ಓಕುಳಿ ನೆರವೇರಲಿದೆ. ಮೇ.೧೭ರ ಬೆಳಗ್ಗೆ ೯ಕ್ಕೆ ದೇವಿಗೆ ಅಭಿಷೇಕ, ಕಂಕಣ ವಿಸರ್ಜನೆ ಹಾಗೂ ಜಾತ್ರೆ ಮುಕ್ತಾಯ ಆಗಲಿದೆ.
ಫೋಟೊ ಕ್ಯಾಪ್ಷನ್/೧೩ಸಿಟಿಡಿ೩೦, ೩೦ಎ, ೩೦ಬಿ ೩೦ಸಿ
ಕೋಟೆನಾಡಿನ ಪ್ರಮುಖ ಶಕ್ತಿ ದೇವತೆಗಳಲ್ಲಿ ಒಬ್ಬಳಾದ, ನಗರವಾಸಿನಿ ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ಚಿತ್ರದುರ್ಗದ ರಾಜಬೀದಿಗಳಲ್ಲಿ ವೈಭವದಿಂದ ನೆರವೇರಿತು.
=======================

 

[t4b-ticker]

You May Also Like

More From Author

+ There are no comments

Add yours