ಪ್ರಜಾಪ್ರಭುತ್ವದ ಸುಭದ್ರತೆಗೆ ಮತ ಚಲಾಯಿಸಿ:ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಮನಗೂಳಿ ಪ್ರೇಮಾವತಿ

 

 

 

 

ರಾಷ್ಟ್ರೀಯ ಮತದಾರರ ದಿನಾಚರಣೆ
ಚಿತ್ರದುರ್ಗ,ಜನವರಿ25:
ಪ್ರಜಾಪ್ರಭುತ್ವದದ ಸುಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಮನಗೂಳಿ ಪ್ರೇಮಾವತಿ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
18 ವರ್ಷ ಪೂರೈಸಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಪ್ರತಿಯೊಂದು ಚುನಾವಣೆಯಲ್ಲಿಯೂ ಯೋಗ್ಯ ವ್ಯಕ್ತಿಗೆ ಮತದಾನ ಮಾಡಬೇಕು. ಉತ್ತಮ ಸಮಾಜ ಹಾಗೂ ಉತ್ತಮ ಸರ್ಕಾರ ನಿರ್ಮಿಸುವಲ್ಲಿ ಮತದಾನ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಯಾವುದೇ ಆಸೆ-ಆಮಿಷಕ್ಕೆ ಒಳಗಾಗದೇ ಯೋಗ್ಯವಾದ ವ್ಯಕ್ತಿಗೆ ಮತ ನೀಡುವ ಮೂಲಕ ಸುಭದ್ರ ಸರ್ಕಾರ ರಚಿಸಿಕೊಳ್ಳಬೇಕು. ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೇ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಉತ್ತಮವಾದ ಸರ್ಕಾರ ರಚನೆ ಮಾಡಬೇಕು. ಸುಭದ್ರ ಸರ್ಕಾರ ರಚಿಸುವುದು ಮತದಾರರ ಕೈಯಲ್ಲಿದೆ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಯಾವುದೇ ಮತದಾರ ಮತದಾನದಿಂದ ದೂರ ಉಳಿಯಬಾರದು. ಮತದಾನ ಎಂಬುದು ಬಹಳ ಮುಖ್ಯವಾದುದು. ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆ ನಿರ್ಮಾಣ ಮಾಡಬೇಕಾದರೆ ಜಾತಿ, ಧರ್ಮ, ಜನಾಂಗ ಎಂಬ ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ ಯೋಗ್ಯವಾದ ವ್ಯಕ್ತಿಗೆ ಮತ ಚಲಾಯಿಸುವುದರ ಮೂಲಕ ಸರ್ಕಾರವನ್ನು ಆಯ್ಕೆ ಮಾಡಬೇಕು ಎಂದರು.
ಮತದಾರರು ತಮ್ಮ ಮತವನ್ನು ಯಾವುದೇ ಆಮಿಷಗಳಿಗೆ ಬಲಿಕೊಡದೇ ದೇಶದ ಅಭಿವೃದ್ಧಿಗೆ ಉತ್ತಮ ನಾಯಕರ ಆಯ್ಕೆಗೆ ತಪ್ಪದೇ ಮತ ಚಲಾಯಿಸಬೇಕು. ವರ್ಷದಲ್ಲಿ ನಾಲ್ಕು ಬಾರಿ ಮತದಾರರ ನೋಂದಣಿ ಕಾರ್ಯ ಮಾಡಲಾಗುತ್ತದೆ. 18 ವರ್ಷ ಪೂರೈಸಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಮತ ಚಲಾಯಿಸಬೇಕು ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 13,83,180 ಮತದಾರರಿದ್ದು,  ಇದರಲ್ಲಿ 21,049 ಯುವ ಮತದಾರರಿದ್ದಾರೆ. 18 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮತದಾನದ ಗುರುತಿನ ಚೀಟಿ ಮಾಡಿಸಿಕೊಳ್ಳಬೇಕು ಜೊತೆಗೆ ಮತ ಚಲಾಯಿಸುವ ವಿಧಾನವನ್ನು ತಿಳಿದುಕೊಂಡು ಮತ ಚಲಾಯಿಸಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ, ಅಭಿವೃದ್ಧಿ ಕಡೆ ಗಮನ ಹರಿಸುವ ವ್ಯಕ್ತಿಗೆ ಮತ ನೀಡುವುದರ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಾಚೀನ ಭಾರತ ಕಾಲದಿಂದಲೂ ಸಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಂತ ಹಂತವಾಗಿ ಮತದಾನ ಎಂಬುದು ಜಾರಿಗೆ ಬಂದಿದೆ. ಯಾವುದೇ ಜಾತಿ-ಧರ್ಮಗಳನ್ನು ಲೆಕ್ಕಿಸದೆ ನಿಷ್ಟಾವಂತರಿಗೆ ಮತದಾನ ಮಾಡುವ ಮೂಲಕ ಉತ್ತಮ ಸರ್ಕಾರ ರಚಿಸುವ ಕರ್ತವ್ಯ ನಾಗರಿಕರದ್ದಾಗಿದೆ. ಮತದಾರರು ತಮ್ಮ ಅಮೂಲ್ಯ ಮತ ಚಲಾಯಿಸುವುದರ ಮೂಲಕ ಮತದಾನದ ಹಕ್ಕನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಹೊಸ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿಗಳ ವಿತರಣೆ, ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಿಎಲ್‍ಒ ಅಜಯ್‍ಕುಮಾರ್ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್ ಸತ್ಯನಾರಾಯಣ್ ಇದ್ದರು.

 

 

 

[t4b-ticker]

You May Also Like

More From Author

+ There are no comments

Add yours