ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕೋಟಿ ಕೋಟಿ ಗುಳುಂ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಕಿಡಿ

 

 

 

 

 

 

 

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ  ಹಗರಣ ಬಗ್ಗೆ ಶಾಸಕ.ಜಿ.ಹೆಚ್.ತಿಪ್ಪಾರೆಡ್ಡಿ ಅಸಮಾಧಾನ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದುರಪಯೋಗದ ತನಿಖೆಗೆ ಸೂಚನೆ: ಕೇಂದ್ರ ಸರ್ಕಾರದ ವತಿಯಿಂದ ಗಿರಿಜನ ಉಪಯೋಜನೆಯಡಿ ಪರಿಶಿಷ್ಟ ವರ್ಗದವರಿಗೆ ಇಲಾಖೆ ಮೂಲಕ  ಹೈನುಗಾರಿಕೆಯಡಿ ಹಸು ಖರೀದಿಗೆ ಅನುದಾನ ನೀಡಲಾಗುತ್ತಿದೆ. ಪ್ರತಿ ಘಟಕಕ್ಕೆ ರೂ.1.20ಲಕ್ಷ ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ ಒಂದು ಹಸು ಖರೀದಿಗೆ ರೂ.95,000/-, ಖರೀದಿ ವೇಳೆ ಮೇವಿಗಾಗಿ ರೂ.10,000/-, ಸಾಗಾಣಿಕೆ ವೆಚ್ಚ ರೂ.5000/ ಹಾಗೂ ವಿಮಾ ವೆಚ್ಚಕ್ಕಾಗಿ 5,000/-ರೂಗಳನ್ನು ವೆಚ್ಚ ಮಾಡಲಾಗಿದೆ. ಆದರೆ ವಿಮಾ ಮೊತ್ತವನ್ನು ವಿಮಾ ಕಂಪನಿಗೆ ನೀಡದೇ ವ್ಯಕ್ತಿಗೆ ನೀಡಲಾಗಿದೆ. ಹಸು ಖರೀದಿಯ ಮೊತ್ತ, ಸಾಗಾಣಿಕೆ ವೆಚ್ಚದ ಮೊತ್ತವನ್ನು ಒಬ್ಬನೇ ವ್ಯಕ್ತಿಗೆ ನೀಡಲಾಗಿದೆ. ಈ ಯೋಜನೆಗೆ ಬಗ್ಗೆ ಯಾವುದೇ ಜನಪ್ರತಿನಿಧಿಯ ಗಮನಕ್ಕೆ ತರದಂತೆ ಅನುಷ್ಠಾನ ಮಾಡಲಾಗಿದೆ. ಯಾವ ಮಾನದಂಡದ ಆಧಾರದ ಮೇಲೆ ಈ ಎಲ್ಲ ಪ್ರಕ್ರಿಯೆ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಸರ್ಕಾರದ ಹಣ ದುರುಪಯೋಗಪಡಿಸಿಕೊಂಡವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ವೇಳೆ ಮಾತನಾಡಿದ ನೂತನ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಈ ಮೊತ್ತಕ್ಕೆ ಗುಜರಾತಿನಿಂದ ಮುರಾ ತಳಿಯ ಹಸುವನ್ನು ಖರೀದಿಬಹುದು. ಪ್ರತಿನಿತ್ಯವೂ 30ಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದಿಸುತ್ತವೆ. ಸ್ಥಳೀಯವಾಗಿ ದುಬಾರಿ ವೆಚ್ಚಕ್ಕೆ ಹಸು ಖರೀದಿಸಲಾಗಿದೆ. ಈ ಮಾನದಂಡಗಳ ಕುರಿತು ಪರಿಶೀಲಿಸುವ ಅಗತ್ಯವಿದೆ ಎಂದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಈ ಬಗ್ಗೆ ಕೇಂದ್ರ ಕಚೇರಿ ನಿರ್ದೇಶಕರ ಹಂತದಲ್ಲಿ ತನಿಖೆ ನಡೆಯುತ್ತಿದೆ. ಯಾವ ಹಂತದಲ್ಲಿದೆ ಎಂಬುದು ತಿಳಿದುಬಂದಿಲ್ಲ. ತನಿಖೆಯ ಬಗ್ಗೆ ಮುಂದಿನ ಸಭೆಯಲ್ಲಿ ವರದಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ರೂ.1 ಲಕ್ಷ ಸಾಲ ಮತ್ತು ರೂ.50 ಸಾವಿರ ಸಹಾಯಧನ ಸೇರಿದಂತೆ ಒಟ್ಟು 1.50 ಲಕ್ಷ ನೀಡಲಾಗುತ್ತಿದೆ. ಆದರೆ ಇದನ್ನು ಯಾವುದೋ ಸಹಕಾರ ಸಂಸ್ಥೆಯ ಮೂಲಕ ಆ ಸಂಸ್ಥೆಯ ವ್ಯಾಪ್ತಿಯನ್ನು ಹೊರತುಪಡಿಸಿ ಬೇರೆ ತಾಲ್ಲೂಕಿನ ಫಲಾನುಭವಿಗಳಿಗೆ ಆ ಸಹಕಾರ ಸಂಘದ ಮೂಲಕ ಸೌಲಭ್ಯ ನೀಡಲಾಗಿದೆ. ಅದರಲ್ಲೂ ಸಹಾಯಧನ ಮಾತ್ರ ನೀಡಲಾಗಿದ್ದು, ಸಾಲವನ್ನೇ ನೀಡಿರುವುದಿಲ್ಲ ಇದು ರೂ.3 ಕೋಟಿಗೂ ಹೆಚ್ಚಿನ ಹಣದ ದುರುಪಯೋಗವಾಗಿದ್ದು, ಇದರ ಬಗ್ಗೆಯು ಕೂಲಂಕುಷವಾಗಿ ತನಿಖೆಯಾಗಬೇಕು ಎಂದರು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.

[t4b-ticker]

You May Also Like

More From Author

+ There are no comments

Add yours