ದಲಿತ್ ಫೈಲ್ಸ್, ವಾಲ್ಮೀಕಿ ಫೈಲ್ಸ್, ಕುರುಬ ಫೈಲ್ಸ್ ಕುರಿತು ಕೂಡ ಚರ್ಚೆಯಾಗಬೇಕು: ಮಾಜಿ ಸಚಿವ ಸತೀಶ್ ಜಾರಕಿಹೊಳಿ

 

 

 

 

ರಾಜಕೀಯ ಭಾಷಣಗಳಿಂದ ದೇಶ ಬದಲಾಗುವುದಿಲ್ಲ: ಸತೀಶ್ ಜಾರಕಿಹೊಳಿ
ಚಿತ್ರದುರ್ಗ: ಧರ್ಮ, ಜಾತಿ ಎನ್ನುವುದು ಅಫೀಮು ಇದ್ದಂತೆ. ನಮ್ಮ ಸಮಸ್ಯೆ ಬಂದಾಗ ನಾವೆಲ್ಲ ದಲಿತರು, ಉಪ್ಪಾರರು, ಯಾದವರಾಗುತ್ತೇವೆ. ಅವರ ಸಮಸ್ಯೆಗಳು ಬಂದಾಗ ನಾವೆಲ್ಲ ಹಿಂದೂಗಳಾಗುತ್ತೇವೆ. ದಲಿತರ ಕೊಲೆಯಾದರೆ ಅವರು ದಲಿತರು, ಹಿಂದೂವಲ್ಲ. ಆದ್ದರಿಂದ ಇಂತಹ ಗಂಭೀರ ಸಮಸ್ಯೆಗಳ ಕುರಿತು ಅರಿಯಬೇಕು ಎಂದು ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿ ಹೇಳಿದರು.
ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ಬಂಧುತ್ವ ಅಧಿವೇಶನಕ್ಕೆ ಮಾತಾಡಿದ ಅವರು, ಎರಡು ದಿನಗಳ ಕಾಲ ನಡೆಯುತ್ತಿರುವ ರಾಜ್ಯ ಬಂಧುತ್ವ ಅಧಿವೇಶನದಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ತಲುಪಿಸಬೇಕು ಎಂಬ ಉದ್ದೇಶವಿದೆ ಎಂದರು.
8 ವರ್ಷಗಳ ಹಿಂದೆ ಮಾನವ ಬಂಧುತ್ವ ವೇದಿಕೆ ಸ್ಥಾಪಿಸಲಾಯಿತು. ನಮ್ಮಲ್ಲಿರುವ ವಿಚಾರಗಳು, ಬುದ್ಧ, ಬಸವ, ಅಂಬೇಡ್ಕರ್, ಜ್ಯೋತಿಭಾಪುಲೆ, ಪೆರಿಯಾರ್ ಮೊದಲಾದವರ ವಿಚಾರಗಳನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು. ರೈತರು, ವಿದ್ಯಾರ್ಥಿಗಳು, ಶೋಷಿತರ ಸಮಸ್ಯೆಗಳಿಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ಜಾಗೃತಿ ಮೂಡಿಸುವ ಕೆಲಸವನ್ನು ನಡೆಸಲಾಗಿದೆ ಎಂದರು.
ಪ್ರಚಲಿತ ವಿದ್ಯಮಾನಗಳ ಕುರಿತು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರಿಗೆ ವಿಷಯಗಳನ್ನು ತಿಳಿಸುವ ಉದ್ದೇಶವಿದೆ. ನೀವೆಲ್ಲ ಎರಡು ದಿನಗಳ ಕಾಲ ಗಟ್ಟಿಯಾಗಿ ಕುಳಿತು ವಿಷಯಗಳನ್ನು ಅರಿಯಿರಿ. ಮಾಂಸವನ್ನು ಯಾರು, ಹೇಗೆ ತಿನ್ನಬೇಕು ಎಂದು ಶಾಖಾಹಾರಿಗಳು ಹೇಳುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹೋರಾಟ ತುಂಬಾ ಅಗತ್ಯ ಎಂದರು.
ಇಲ್ಲಿ ಭಾಗವಹಿಸುವ ವಿಷಯ ತಜ್ಞರು ನಿಮಗೆ ಉಚಿತವಾಗಿ ಅನೇಕ ವಿಷಯಗಳ ಕುರಿತು ಹೇಳಲಿದ್ದಾರೆ. ದೇಶದ ಮುಂದಿನ ನಡೆ ಕುರಿತು ಹೇಳುತ್ತಾರೆ. ನಮಗೆ ಈಗ ಪಡೆಯ ಅಗತ್ಯವಿದೆ. ಅದು ಬಸವ, ಅಂಬೇಡ್ಕರ್ ಮೊದಲಾದವರ ಪಡೆಯಾಗಬೇಕು ಎಂದರು.
ಸಂವಿಧಾನ ಇಲ್ಲವಾದರೆ ಮನುಸ್ಮೃತಿ ಬರುತ್ತದೆ. ಸ್ತ್ರೀಯರಿಗೆ ಆಸ್ತಿ, ಶಿಕ್ಷಣದ ಹಕ್ಕು ಇಲ್ಲ. ಆದ್ದರಿಂದ ಇದು ನಿರ್ಧಾರಕ ಸಮಯ. ನೀವು ವಾಟ್ಸಪ್ ಬಿಡಿ, ಬೇಕಾದರೆ ಊಟವನ್ನೂ ಬಿಡಿ. ಇಲ್ಲಿ ಚರ್ಚೆಯಾಗುವ ವಿಷಯಗಳನ್ನು ಆಸಕ್ತಿಯಿಂದ ಕೇಳಿ. ಕೇಳಿದ ವಿಷಯಗಳನ್ನು ಮನೆಗಳಲ್ಲಿ, ಊರುಗಳಲ್ಲಿ ತಿಳಿಸಿ. ಭಾರತ ರಕ್ಷಣೆಯನ್ನು ಮಾಡುವ, ಬಸವಣ್ಣನ ವಿಚಾರಗಳನ್ನು ತಿಳಿಸುವ, ಅಂಬೇಡ್ಕರ್ ಸಂವಿಧಾನವನ್ನು ರಕ್ಷಿಸುವ ಪಡೆಗಳ ಅಗತ್ಯವಿದೆ. ನೀವೆಲ್ಲ ಇಂತಹ ಪಡೆಗಳನ್ನು ಕಟ್ಟಿ ಎಂದು ಕರೆನೀಡಿದರು.
ಕೇಂದ್ರ, ರಾಜ್ಯ ಸರ್ಕಾರಗಳ ಸೌಲತ್ತುಗಳೆಲ್ಲ ಇಂದು ಮಾಯವಾಗಿವೆ. ಆದರೆ ನಾವೆಲ್ಲ ನಶೆಯಲ್ಲಿದ್ದೇವೆ. ದೇಶದ ರಕ್ಷಣೆಗೆ ಸೇನೆ ಇದೆ. ವಾಲ್ಮೀಕಿ ಸ್ವಾಮೀಜಿಗಳು ಮೀಸಲಾತಿ ಸೌಲಭ್ಯಕ್ಕೆ 50 ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಆದರೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿಯನ್ನು ಮೂರೇ ದಿನಗಳಲ್ಲಿ ಘೋಷಿಸಲಾಯಿತು. ಇಂತಹ ಸಂಗತಿಗಳನ್ನು ನೀವೆಲ್ಲ ಅರಿಯಬೇಕು ಎಂದರು.
ಸಮಾಜ, ನಮ್ಮ ಮಕ್ಕಳ ಭವಿಷ್ಯವನ್ನು ಕಟ್ಟಲು ನೀವೆಲ್ಲ ಸಜ್ಜಾಗಿ. ಇದುವರೆಗೆ ನಮ್ಮನ್ನು ಆಳಿರುವವರು ಯಾರು? ಯಾಕೆ ಎಂಬ ವಿಷಯವನ್ನು ಅರಿಯಿರಿ. ನಮ್ಮ ವೈರಿಯನ್ನು ಕಂಡುಹಿಡಿಯುವುದು ಕಷ್ಟವಿದೆ. ಇದನ್ನು ಅರಿಯಲು ಇತಿಹಾಸವನ್ನು ಅರಿಯಬೇಕು. ಇಂತಹ ಕೆಲಸವನ್ನು ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುತ್ತಿದೆ ಎಂದರು.
ಕೆಲವರು ಸಂವಿಧಾನ ಬದಲಿಸಲೇ ನಾವು ಬಂದಿದ್ದೇವೆ ಎನ್ನುತ್ತಾರೆ. ನೀವೆಲ್ಲ ಅದರ ವಿರುದ್ಧ ಪ್ರತಿಭಟನೆ ಮಾಡಬೇಕು. ಸಂವಿಧಾನ ಅಪಾಯದಲ್ಲಿದ್ದರೆ ದಲಿತರು ಮಾತ್ರವಲ್ಲ, ಲಿಂಗಾಯತರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಪ್ರತಿಭಟಿಸಬೇಕು. ಸಂವಿಧಾನ ಇಲ್ಲವಾದರೆ ನಾವೆಲ್ಲ ಮತ್ತೆ ಗಡಿಗೆ, ಪೊರಕೆ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದರು.
ಹಂಸಲೇಖ ಅವರು ಸತ್ಯ ಹೇಳಿದ್ದರು. ಅವರು ನಿಮ್ಮ ಪರವಾಗಿ ಮಾತಾಡಿದ್ದರು. ಆದರೆ, ನಾವೆಲ್ಲ ವಾಟ್ಸ್ ಅಪ್ ನಲ್ಲಿ ಸಂದೇಶಗಳನ್ನು ಕಳಿಸಿಕೊಂಡು ಕುಂತೆವು. ಕಡೆಗೆ ಹಂಸಲೇಖ ಕ್ಷಮೆ ಕೋರಿದರು. ನಾವು ಅವರ ಪರ ನಿಲ್ಲಬೇಕಿತ್ತು. ಹಂಸಲೇಖ, ಪೆರಿಯಾರ್ ಮೊದಲಾದವರ ವಿಷಯಗಳಿಗೆ ಧಕ್ಕೆಯಾದಾಗ ನಾವೆಲ್ಲ ಅವರ ಪರ ನಿಲ್ಲಬೇಕು ಎಂದರು.
ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಕೇಂದ್ರ, ರಾಜ್ಯ ಸರ್ಕಾರಗಳು ಟಿಕೆಟ್ ಮಾರುವ ಮಟ್ಟಕ್ಕೆ ಹೋದರು. ದಲಿತ್ ಫೈಲ್ಸ್, ವಾಲ್ಮೀಕಿ ಫೈಲ್ಸ್, ಕುರುಬ ಫೈಲ್ಸ್ ಕುರಿತು ಕೂಡ ಚರ್ಚೆಯಾಗಬೇಕು. ಕಂಬಾಲಪಲ್ಲಿ, ಮನೀಷಾ ವಾಲ್ಮೀಕಿ ಫೈಲ್ಸ್ ಕೂಡ ಬರಬೇಕು. ಇವರು ಹಿಂದೂಗಳಾಗಲಿಲ್ಲ. ನಮ್ಮ ಸಮಸ್ಯೆ ಬಂದಾಗ ನಾವು ಹಿಂದೂಗಳಾಗುವುದಿಲ್ಲ. ಇಂತಹ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದರು.
ರಾಜಕೀಯ ಭಾಷಣಗಳಿಂದ ದೇಶ ಬದಲಾಗುವುದಿಲ್ಲ ಎಂಬ ಕಾರಣಕ್ಕೆ ಪರ್ಯಾಯವಾದ ಸಂಘಟನೆಯನ್ನು ಹುಟ್ಟುಹಾಕಿದ್ದೇವೆ. ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ಎಂದರೆ ದುಡಿದೇ ಮಾತಾಡಬೇಕು. ಬಿಟ್ಟಿಯಾಗಿ ಮಾತಾಡುವುದಲ್ಲ. ಅಂಬೇಡ್ಕರ್ ನನ್ನ ಜನಾಂಗ ಬೇಡುವುದಲ್ಲ ಕೊಡುವ ಕೈಯಾಗಬೇಕು ಎಂದಿದ್ದಾರೆ. ಬಸವಣ್ಣನವರು ಕೂಡ ಅದನ್ನೇ ಹೇಳಿದ್ದಾರೆ. ನೀವು ದುಡಿದದ್ದರಲ್ಲಿ ದಾನಮಾಡಬೇಕು. ದೇಶವೆಂದರೆ ನಕಾಶೆಯಲ್ಲ, ಜನ ಎಂದರು.
ಹತ್ತು ರೂ. ಪಂಚಾಂಗ ಹಿಡಿದವರು ನಮ್ಮನ್ನು ದಿಕ್ಕುತಪ್ಪಿಸುತ್ತಾರೆ. ಈಗ ಹಲಾಲ್ ವಿಷಯ ತಂದಿದ್ದಾರೆ. ನಿಮ್ಮನ್ನು ಗೊಂದಲದಲ್ಲಿ ಸಿಲುಕಿಸಲು ಇಂತಹ ಕೆಲಸ ಮಾಡುತ್ತಾರೆ. ನೀವು ಕಾಶ್ಮೀರ್ ಫೈಲ್ಸ್ ಕುರಿತು ಗೊಂದಲಕ್ಕೆ ಒಳಗಾಗಬೇಡಿ ಎಂದರು.

 

 

[t4b-ticker]

You May Also Like

More From Author

+ There are no comments

Add yours