ಚಿತ್ರದುರ್ಗ ಕೋಟೆಯಲ್ಲಿ ಸಾಹಸ ದಿನ: ಜ್ಯೋತಿರಾಜ್‍ಗೆ ಸಾಹಸ ರತ್ನ ಪ್ರಶಸ್ತಿ

 

 

 

 

ಚಿತ್ರದುರ್ಗ,ಡಿಸೆಂಬರ್27:
ನೊಪಾಸನ (ನ್ಯಾಷನಲ್ ಆರ್ಗನೈಸೇಶನ್ ಫಾರ್  ಪ್ರಮೋಷನ್ ಆಫ್ ಅಡ್ವೆಂಚರ್ ಸ್ಪೋರ್ಟ್ ಅಂಡ್ ನೇಚರ್ ಅವೇರ್‍ನೆಸ್) ಸಂಸ್ಥೆಯ 34ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಕೋಟೆಯಲ್ಲಿ “ಸಾಹಸ ದಿನ” ಹಮ್ಮಿಕೊಂಡು ವಿಶೇಷ ಗಮನ ಸೆಳೆಯಿತು.
ಬೆಳಿಗ್ಗೆ 8 ಗಂಟೆಯಿಂದ ಸಂಜೆ 6ಗಂಟೆಯವರೆಗೂ ಕೋಟೆಯಲ್ಲಿ ಚಾರಣ, ಚಂದ್ರವಳ್ಳಿಯ ತೋಟದ ಗುಹೆಗಳಲ್ಲಿ ಸಂಚಾರ ಮತ್ತು ರಾಕ್ ಕ್ಲೈಂಬಿಂಗ್‍ಗೆ ಮುಂಚಿನ ಅಭ್ಯಾಸವಾದ ಬೋಲ್ಡರಿಂಗ್ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.

 

 


ಬಳ್ಳಾರಿ, ಬೆಂಗಳೂರು ಹಾಗೂ ಮೈಸೂರಿನ ಪ್ರಾಥಮಿಕ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕಿಯರು, ಗೃಹಿಣಿಯರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಮೊದಲಿಗೆ ನಡೆದ ಚಾರಣದಲ್ಲಿ ಸ್ಥಳೀಯ ಸಾಹಸ ಸಂಸ್ಥೆ  ಚೈತ್ರ ಸಂಸ್ಥೆಯ ಮುಖ್ಯಸ್ಥರಾದ ಎನ್.ಟಿ.ಬಸವರಾಜ್ ಮಾರ್ಗದರ್ಶನ ನೀಡಿ ಕೋಟೆಯ ವಿಶೇಷಗಳನ್ನು ವಿವರಿಸಿದರು. ಮಧ್ಯಾಹ್ನದ ಬಳಿಕ ಚಂದ್ರವಳ್ಳಿಯ ಗುಹೆಗಳಲ್ಲಿ ಸಂಚರಿಸಿ ಶಿಬಿರಾರ್ಥಿಗಳು ರೋಮಾಂಚನ ಅನುಭವಿಸಿದರು. ಗುಹೆಗಳ ಹಿಂಭಾಗದ ಪ್ರದೇಶದಲ್ಲಿ ಬಂಡೆ ಹತ್ತುವ ಪ್ರಾಯೋಗಿಕ ಪಾಠಗಳನ್ನು ಕಲಿತರು.
ಜ್ಯೋತಿರಾಜ್‍ಗೆ ಸಾಹಸ ರತ್ನ ಪ್ರಶಸ್ತಿ: ಸಾಹಸ ಚಟುವಟಿಕೆಗಳ ಬಳಿಕ ಸಂಜೆ ಇಲ್ಲಿನ ರೋಟರಿ ಭವನದಲ್ಲಿ ಸಂಸ್ಥೆಯು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜ್ಯೋತಿರಾಜ್ ಅವರಿಗೆ ಸಾಹಸ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿರಾಜ್, ಬಂಡೆ ಹತ್ತುವ ಸಾಧನೆಗೆ ಬಸವರಾಜ್  ಪ್ರೇರಣೆ ನೀಡಿದರು. ಸಾಹಸ ಪ್ರದರ್ಶನಕ್ಕೆ ಕಳೆದ ವರ್ಷ ಅಮೇರಿಕಾಕಕ್ಕೆ ತೆರಳಬೇಕಿತ್ತು. ಕೋವಿಡ್‍ನಿಂದ ಕಾರಣಕ್ಕೆ ಆಗಿರಲಿಲ್ಲ. ಜನವರಿ ಅಥವಾ ಫೆಬ್ರುವರಿಯಲ್ಲಿ  ತೆರಳುವೆ ಎಂದು ತಿಳಿಸಿದರು.
ಸಾಂಪ್ರದಾಯಿಕ ಶಿಕ್ಷಣ ಕೊಡಿಸುವುದರ ಜೊತೆಗೆ, ಮಕ್ಕಳಿಗೆ ಸ್ವಯಂ ರಕ್ಷಣೆಯ ಈಜು, ಕರಾಟೆ ಅಂತಹ ಕೌಶಲಗಳನ್ನೂ ಕಲಿಸಬೇಕು. ಈಜು ಬಾರದೆ ನೀರಿನಲ್ಲಿ ಮುಳುಗಿ ಸತ್ತವರ ಶವಗಳನ್ನು ಹೊರತೆಗೆಯುವ ಸಂದರ್ಭದಲ್ಲಿ ಈಜು ಕೌಶಲದ ಮಹತ್ವ ಪದೇಪದೇ ಅರಿವಿಗೆ ಬರುತ್ತದೆ ಎಂದರು.
ರ್ಯಾಪ್ಲಿಂಗ್‍ನಲ್ಲಿ ಯೋಗಾಸನ ದಾಖಲೆ ಮಾಡಿರುವ ಪ್ರಿಯಾಕೃಷ್ಣ ಪಿಳ್ಳೈ, ಸಂಸ್ಥೆಯ ಚಟುವಟಿಕೆಗಳಿಗೆ ಗಮನಾರ್ಹ ಕೊಡುಗೆ ಕೊಟ್ಟಿರುವ ವಟ್ಟಂ ಆದಿತ್ಯ, ಅಮಿನ್ ಐಬುಲ್ಲು, ಅಸ್ಮಾ ಖಾತುನ್, ಎಂ.ವೀರೇಶ್, ಬಿ.ಮಂಜುಳಾ ಮತ್ತು ತಿಪ್ಪೇರುದ್ರ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎ.ಶಕೀಬ್ ಅವರ ಸೇವೆಯನ್ನೂ ಗಣ್ಯರು ಶ್ಲಾಘಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಮಜಹರ್ ಉಲ್ಲಾ , ರೋಟರಿ ಸಂಸ್ಥೆಯ ಶಿವರಾಂ, ಗಾಯತ್ರಿ ಶಿವರಾಂ, ಚಂದ್ರಶೇಖರ್, ಎನ್.ಟಿ.ಬಸವರಾಜ್ ವೇದಿಕೆಯಲ್ಲಿದ್ದರು. ಸ್ಥಳೀಯ ತರಬೇತುದಾರರಾದ ಜೆ.ಮನೋಹರ್, ಪ್ರಶಾಂತ್‍ಕುಮಾರ್, ಮಧು ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

[t4b-ticker]

You May Also Like

More From Author

+ There are no comments

Add yours