ಚಿಣ್ಣರ ಬೇಸಿಗೆ ಶಿಬಿರಗಳು ಮಕ್ಕಳ ಪ್ರತಿಭೆ ಹೊರ ತರಲು ಸಹಕಾರಿ: ಡಾ.ಪ್ರಭಾಕರ್

 

 

 

 

ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್
ಚಿಣ್ಣರ ರಂಜಿಸಿದ ಬೇಸಿಗೆ ಶಿಬಿರ
*******
ಚಿತ್ರದುರ್ಗ (ಕರ್ನಾಟಕ ವಾರ್ತೆ) ಮೇ.13 :
ಬೇಸಿಗೆ ಶಿಬಿರದಲ್ಲಿ ಮಕ್ಕಳು ತಮ್ಮ ಕಲೆ, ಪ್ರತಿಭೆ ಅನಾವರಣಗೊಳಿಸಿದ್ದಾರೆ. ಸಾಕಷ್ಟು ಪ್ರತಿಭೆ ಇರುವ ಮಕ್ಕಳು ಶಿಬಿರದ ಪ್ರಯೋಜನ ಪಡೆದಿದ್ದಾರೆ. ಚಿಣ್ಣರು ಬೇಸಿಗೆ ಶಿಬಿರದಲ್ಲಿ ಆಡುತ್ತಾ, ನಲಿಯುತ್ತಾ, ಬೇಸಿಗೆ ರಜೆಯನ್ನು ರಂಜಿಸಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ. ಪ್ರಭಾಕರ್ ತಿಳಿಸಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಬಾಲಭವನ ಸಮಿತಿ ಚಿತ್ರದುರ್ಗ ಇವರ ವತಿಯಿಂದ 5 ರಿಂದ 16 ವರ್ಷದ ಮಕ್ಕಳಿಗಾಗಿ ಮೇ 4ರಿಂದ 13ರವರೆಗೆ ಹಮ್ಮಿಕೊಳ್ಳಲಾಗಿದ್ದ ಮಕ್ಕಳ  ಬೇಸಿಗೆ ಶಿಬಿರ ಕಾರ್ಯಕ್ರಮದ ಸಮಾರೋಪ ಸಮಾರಂಭ  ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕಾಲದಲ್ಲಿ ಬೇಸಿಗೆ ರಜೆಯನ್ನು ಹಳ್ಳಿಗಳಲ್ಲಿ ಓಡಾಡುವ  ಮೂಲಕ ಕಾಲ ಕಳೆಯುತ್ತಿದ್ದೆವು. ಆದರೆ ಈಗ ಬೇಸಿಗೆ ರಜೆಯನ್ನು ಮಕ್ಕಳು ಶಿಬಿರದಲ್ಲಿ ನಾನಾ ಚಟುವಟಿಕೆಗಳನ್ನು ಕಲಿಯುವುದರ ಮೂಲಕ ತಮ್ಮ ಬೇಸಿಗೆ ರಜೆಯನ್ನು ಕಳೆದಿದ್ದಾರೆ. ಬಾಲಭವನದ ಅಧಿಕಾರಿಗಳು ಮಕ್ಕಳಲ್ಲಿನ ಹೊಸತನ ಗುರುತಿಸಲು ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಲೋಕೇಶ್ವರಪ್ಪ ಮಾತನಾಡಿ, ವಿವಿಧ ಭಾಗಗಳಿಂದ ಮಕ್ಕಳನ್ನು ಕರೆ ತಂದು ಅವರಿಗೆ ಆಸಕ್ತಿ ಇರುವಂತಹ ನೃತ್ಯ, ಕಲೆ, ಸಂಗೀತ, ಮಣ್ಣಿನಿಂದ ಗೊಂಬೆ ಮಾಡುವುದು, ಮೆಹಂದಿ ಇತ್ಯಾದಿ ಚಟುವಟಿಕೆಗಳನ್ನು  ಶಿಬಿರದಲ್ಲಿ ಮಕ್ಕಳು ಕಲಿತು ಪ್ರದರ್ಶನ ಮಾಡಿರುವುದು ಹಾಗೂ ವೀಕ್ಷಣಾಲಯದ ಮಕ್ಕಳು ಶಿಬಿರದಲ್ಲಿ ಭಾಗವಹಿಸಿರುವುದು ಖುಷಿಯ ವಿಚಾರ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಭಾರತಿ ಆರ್.ಬಣಕಾರ್ ಮಾತನಾಡಿ, ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಹಾಗೂ ಸರ್ವೋತೋಮುಖ ಬೆಳವಣಿಗೆಗಾಗಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ಪರಿಣಿತಿ ಹೊಂದಿರುವ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿದಿನ ಶಿಬಿರದಲ್ಲಿ ವಿವಿಧ ಚಟುವಟಿಕೆಗಳನ್ನು ಹೇಳಿ ಕೊಡಲಾಗಿದೆ ಎಂದರು.
ಸಂಗೀತ, ಕರಕುಶಲತೆ, ಕ್ಯಾಲಿಗ್ರಫಿ, ಅಭಿನಯ, ಜೇಡಿ ಮಣ್ಣಿನ, ಕರಾಟೆ, ಕಸದಿಂದ ರಸ, ಮೆಹಂದಿಯನ್ನು ಒಳಗೊಂಡಂತೆ ನಾನಾ ರೀತಿಯ ಚಟುಟಿಕೆಗಳನ್ನು ಮಕ್ಕಳು ಶಿಬಿರದಲ್ಲಿ ಕಲಿತಿದ್ದಾರೆ. ಇದರ ಜೊತೆಗೆ ಜೀವನ ಕೌಶಲ್ಯವನ್ನು ಕಲಿಸುವ ನಿಟ್ಟಿನಲ್ಲಿ ತರಬೇತಿಯನ್ನು ಸಹ ನೀಡಲಾಗಿದೆ. ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಅಪೌಷ್ಟಿಕತೆಯ ಬಗ್ಗೆ ಮಕ್ಕಳಿಗೆ ತಿಳಿಸಲಾಯಿತು. ಅಗ್ನಿಶಾಮಕ ಇಲಾಖೆಯಿಂದ ಅಗ್ನಿ ಅವಘಡಗಳಿಂದ ಆಗುವ ಅನಾಹುತಗಳಿಗೆ ಯಾವ ರೀತಿಯ ಮುನ್ನೇಚರಿಕೆಗಳನ್ನು ಕೈಗೊಳ್ಳಬೇಕು ಹಾಗೂ ಪರಿಸರ ಪ್ರಜ್ಞೆ ಮೂಡಿಸುವ ನಿಟ್ಟಿನಲ್ಲಿ ಜೋಗಿಮಟ್ಟಿಗೆ ಹೊರಸಂಚಾರ ಕರೆದುಕೊಂಡು ಹೋಗಿದ್ದೆವು ಎಂದು ತಿಳಿಸಿದರು.
ಶಿಬಿರದಲ್ಲಿ ಹಾಡು, ನೃತ್ಯ, ಚಿತ್ರಕಲೆ ಕಲಿತಿದ್ದೇನೆ. ಬೇಸಿಗೆ ರಜೆಯಲ್ಲಿ ನಾನು ಸಂತೋಷದಿಂದ ಸ್ನೇಹಿತರೊಂದಿಗೆ ಕಾಲ ಕಳೆದಿದ್ದೇನೆ. ಮನೆಯಲ್ಲಿದ್ದರೆ ಫೋನ್, ಟಿವಿ ನೋಡಿಕೊಂಡು ಇರುತ್ತಿದ್ದೆ. ಶಿಬಿರದಲ್ಲಿ ಭಾಗವಹಿಸುವ ಮೂಲಕ ನನ್ನ ಮೈಂಡ್ ರಿಲ್ಯಾಕ್ಸ್ ಆಗಿದೆ ಎಂದು ಚಿತ್ರದುರ್ಗ 2ನೇ ತರಗತಿ ವಿದ್ಯಾರ್ಥಿ ಎಂ. ಚಿನ್ಮಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಶಿಬಿರದಲ್ಲಿ ಸ್ನೇಹಿತರೊಟ್ಟಿಗೆ ಆಟದ ಜೊತೆಗೆ  ಕರಾಟೆ, ಮಣ್ಣಿನಲ್ಲಿ ಗೊಂಬೆ ಮಾಡುವುದನ್ನು ಕಲಿತಿದ್ದೇನೆ. ಮುಂದಿನ ಬಾರಿಯೂ ನಾನು ಈ ಬೇಸಿಗೆ ಶಿಬಿರಕ್ಕೆ ಬರುತ್ತೇನೆ. ಈ ಶಿಬಿರ ಇನ್ನು ಇರಬೇಕಿತ್ತು ಅನ್ನಿಸುತ್ತದೆ ಎನ್ನುತ್ತಾರೆ ಎರಡನೇ ತರಗತಿ ವಿದ್ಯಾರ್ಥಿ ಚಿತ್ತ ಸ್ವರೂಪ್.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಾಣಾಧಿಕಾರಿ (ಪ್ರಭಾರ) ನರಸಿಂಹರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ.ಎನ್ , ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀಕ್ಷಕ ಮಾರುತಿ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ, ಅತಿಕ ಖಾನಂ, ಜಿಲ್ಲಾ ಬಾಲ ಭವನ ಸಂಯೋಜಕ ಡಿ.ಕುಮಾರ್ ಭಾಗಿಯಾಗಿದ್ದರು.

 

 

[t4b-ticker]

You May Also Like

More From Author

+ There are no comments

Add yours