ಗ್ರಾಮ ಪಂಚಾಯಿತಿ ಉಪಚುನಾವಣೆ: ಇಂದು ತುರುವನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 39ಕ್ಕೆ ಮರು ಮತದಾನ

 

 

 

 

ಚಿತ್ರದುರ್ಗ, ಡಿಸೆಂಬರ್28:
ಗ್ರಾಮ ಪಂಚಾಯಿತಿಗಳ ಉಪ ಚುನಾವಣೆ ಡಿಸೆಂಬರ್ 2021ರ ಸಂಬಂಧ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಗ್ರಾಮ ಪಂಚಾಯಿತಿಯ ತುರುವನೂರು ಕ್ಷೇತ್ರದ ಮತಗಟ್ಟೆ ಸಂಖ್ಯೆ 39ಕ್ಕೆ ಇದೇ ಡಿಸೆಂಬರ್ 29ರಂದು ಮರು ಮತದಾನ ನಡೆಸುವಂತೆ ಚುನಾವಣಾ ಆಯೋಗ ಆದೇಶಿಸಿದೆ.
ತುರುವನೂರು ಗ್ರಾಮ ಪಂಚಾಯಿತಿಯ ಮತಗಟ್ಟೆ ಸಂಖ್ಯೆ 39 ಸರ್ಕಾರಿ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ಮತದಾನಕ್ಕೆ ಸಂಬಂಧಿಸಿದಂತೆ ಕ್ರಮಸಂಖ್ಯೆ 0051 ರಿಂದ 0100 ರವರೆಗಿನ ಮತಪತ್ರಗಳು ನಾಪತ್ತೆಯಾಗಿದ್ದಾಗ್ಯೂ ಮತದಾನ ಪ್ರಕ್ರಿಯೆಯನ್ನು ಮುಂದುವರೆಸಿ ಪೂರ್ಣಗೊಳಿಸಿರುವುದು ಸಮಂಜಸವೆನಿಸುವುದಿಲ್ಲ. ಆದುದರಿಂದ ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308 ಹಾಗೂ ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು, 1993ರ ನಿಯಮಗಳಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಈ ಕ್ಷೇತ್ರದ ಡಿಸೆಂಬರ್ 27ರಂದು ನಡೆದ ಮತದಾನವನ್ನು ಅಸಿಂಧುವೆಂದು ಘೋಷಿಸಿದೆ.
ಚುನಾವಣಾ ವೇಳಾಪಟ್ಟಿಯಲ್ಲಿ ಮರು ಮತದಾನಕ್ಕೆ ನಿಗಧಿಪಡಿಸಿರುವಂತೆ ಮರು ಮತದಾನವನ್ನು ಇದೇ ಡಿಸೆಂಬರ್ 29ರಂದು ನಡೆಸುವಂತೆ ಆದೇಶಿಸಿದೆ.
ಕ್ಷೇತ್ರದ ಮರು ಮತದಾನಕ್ಕಾಗಿ ಮತಪತ್ರಗಳನ್ನು ಮುದ್ರಿಸುವಾಗ ಮತಪತ್ರಗಳ ಕ್ರಮ ಸಂಖ್ಯೆಗಳನ್ನು ಹಿಂದೆ ನೀಡಲಾದ ಕೊನೆಯ ಸಂಖ್ಯೆಯಿಂದ ಮುಂದುವರೆಸಿ ನೀಡಬೇಕು. ಕಾಯ್ದಿರಿಸಿದ ಮತಗಟ್ಟೆ ಸಿಬ್ಬಂದಿಯನ್ನು ಮತಗಟ್ಟೆಗೆ ಡಿಸೆಂಬರ್ 29ರಂದು ಮರು ಮತದಾನ ಕಾರ್ಯಕ್ಕೆ ನಿಯೋಜಿಸಲಾಗಿದೆ.
ಈ ಕ್ಷೇತ್ರದ ಮತಗಟ್ಟೆಯಲ್ಲಿ ಡಿಸೆಂಬರ್ 29ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಸಬೇಕು. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕ್ಷೇತ್ರದ ಅಭ್ಯರ್ಥಿಗಳಿಗೆ ಹಾಗೂ ಎಲ್ಲ ಮತದಾರರಿಗೆ ಮರು ಮತದಾನದ ದಿನಾಂಕ ಮತ್ತು ಸಮಯವನ್ನು ಧ್ವನಿವರ್ಧಕದ ಮೂಲಕ ವ್ಯಾಪಕ ಪ್ರಚಾರ ಮಾಡಬೇಕು. ಮತದಾರರ ಎಡಗೈ ಕಿರುಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಮಾಡಬೇಕು ಎಂದು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.

 

 

[t4b-ticker]

You May Also Like

More From Author

+ There are no comments

Add yours