ಇತ್ತೀಚಿನ ದಿನಗಳಲ್ಲಿ, ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಎಲ್ಲರೂ ಹೆಚ್ಚಿನ ಸಮಯ ಮೊಬೈಲ್ನಲ್ಲಿಯೇ ಕಳೆಯುತ್ತಾರೆ. ಅದರಲ್ಲೂ ಹೆಚ್ಚಿನವರು ಊಟ ಮಾಡುವಾಗ ಕೂಡ ಮೊಬೈಲ್ ಕೈಯಲ್ಲಿಟ್ಟುಕೊಂಡಿರುತ್ತಾರೆ. ಹೀಗೆ ಮೊಬೈಲ್ ನೋಡುತ್ತಾ ಊಟ ಮಾಡುವ ಅಭ್ಯಾಸ ನಿಮಗೂ ಇದ್ಯಾ, ಈ ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಎಷ್ಟು ದೊಡ್ಡ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ತಿಳಿಯಿರಿ.
ಊಟ ಮಾಡುವಾಗ ಮೊಬೈಲ್ ಫೋನ್ ನೋಡಿದರೆ ಏನಾಗುತ್ತದೆ?
ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ನೀವು ಮೊಬೈಲ್ ನೋಡುತ್ತಾ ಊಟ ಮಾಡುವಾಗ, ನಿಮ್ಮ ಪೂರ್ಣ ಗಮನ ಫೋನ್ ಮೇಲೆಯೇ ಇರುತ್ತದೆ ಹೊರತು ಆಹಾರದ ಮೇಲೆ ಇರುವುದಿಲ್ಲ. ಇದರಿಂದ ಆಹಾರವನ್ನು ಸರಿಯಾಗಿ ಜಗಿಯಲು ಸಾಧ್ಯವಾಗುವುದಿಲ್ಲ, ಈ ರೀತಿ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಇದು ಗ್ಯಾಸ್, ಅಜೀರ್ಣ ಮತ್ತು ಆಮ್ಲೀಯತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಲ್ಲದೆ ಜೀರ್ಣಕ್ರಿಯೆಯ ಮೇಲೆಯೂ ಸಾಕಷ್ಟು ಪರಿಣಾಮಗಳನ್ನು ಬೀರುತ್ತದೆ.
ಅತಿಯಾಗಿ ತಿನ್ನುವ ಅಪಾಯ: ಊಟ ಮಾಡುವಾಗ ಟಿವಿ ಅಥವಾ ಮೊಬೈಲ್ ಫೋನ್ ನೋಡುವುದರಿಂದ ಆಹಾರದ ಮೇಲಿನ ಗಮನ ಕಡಿಮೆಯಾಗುತ್ತದೆ, ಇದರಿಂದಾಗಿ ಜನರು ಅಗತ್ಯಕ್ಕಿಂತ ಹೆಚ್ಚು ತಿನ್ನುತ್ತಾರೆ. ಅತಿಯಾಗಿ ಊಟ ಮಾಡುವ ಅಭ್ಯಾಸ ಇದು ತೂಕ ಹೆಚ್ಚಾಗುವ ಮತ್ತು ಬೊಜ್ಜುತನದ ಅಪಾಯವನ್ನು ಹೆಚ್ಚಿಸುತ್ತದೆ.
ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು: ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಆಹಾರವನ್ನು ಎಚ್ಚರಿಕೆಯಿಂದ ಸೇವನೆ ಮಾಡುವುದು ಅತ್ಯಗತ್ಯ. ಊಟ ಮಾಡುವಾಗ ಮೊಬೈಲ್ ಫೋನ್ ಬಳಸುವುದರಿಂದ ಕರುಳು ಮತ್ತು ಮೆದುಳಿನ ನಡುವಿನ ಸಮನ್ವಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ, ಜೀರ್ಣಕ್ರಿಯೆಯ ಸಮಸ್ಯೆಗಳು ಹೆಚ್ಚಾಗಬಹುದು.
ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ: ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ತೋರಿಸುತ್ತಾ ಊಟ ಮಾಡಿಸುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳಲ್ಲಿ ಸರಿಯಾದ ಆಹಾರ ಪದ್ಧತಿ ಬೆಳೆಯುವುದಿಲ್ಲ. ಇದು ಪೌಷ್ಟಿಕಾಂಶದ ಕೊರತೆ, ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ: ಮೊಬೈಲ್ ನೋಡುತ್ತಾ ಊಟ ಮಾಡುವುದರಿಂದ ಒತ್ತಡ ಹೆಚ್ಚಾಗುತ್ತದೆ ಮತ್ತು ಇದು ವ್ಯಕ್ತಿಯು ಆಹಾರವನ್ನು ಆನಂದಿಸುತ್ತಾ ಸವಿಯುವುದನ್ನು ತಡೆಯುತ್ತದೆ.
ಸೋಂಕಿನ ಅಪಾಯ ಹೆಚ್ಚಾಗಬಹುದು: ಮೊಬೈಲ್ ಫೋನ್ಗಳಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಅಂಟಿಕೊಂಡಿರುತ್ತವೆ. ಊಟ ಮಾಡುವಾಗ ಫೋನ್ ಅನ್ನು ಪದೇ ಪದೇ ಸ್ಪರ್ಶಿಸುವ ಮೂಲಕ ಈ ಸೂಕ್ಷ್ಮಜೀವಿಗಳು ದೇಹವನ್ನು ಪ್ರವೇಶಿಸಬಹುದು. ಇದು ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ.
ಆಹಾರ ಸೇವಿಸುವಾಗ ಪಾಲಿಸಬೇಕಾದ ಪ್ರಮುಖ ನಿಯಮಗಳೇನು?
- ಊಟ ಮಾಡುವಾಗ ಮೊಬೈಲ್ ಮತ್ತು ಟಿವಿಯಿಂದ ದೂರವಿರಿ.
- ಆಹಾರವನ್ನು ಚೆನ್ನಾಗಿ ಜಗಿದು ತಿನ್ನಿರಿ. ಈ ರೀತಿ ಮಾಡುವುದರಿಂದ ಲಾಲಾರಸವು ಆಹಾರದೊಂದಿಗೆ ಚೆನ್ನಾಗಿ ಬೆರೆಯುತ್ತದೆ. ಮತ್ತು ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ.
- ಯಾವಾಗಲೂ ಶಾಂತ ಮತ್ತು ಆಹ್ಲಾದಕರ ವಾತಾವರಣದಲ್ಲಿ ಕುಳಿತು ಊಟ ಮಾಡಿ.
- ಸಾಧ್ಯವಾದರೆ ಕುಟುಂಬದೊಂದಿಗೆ ಕುಳಿತು ಒಟ್ಟಿಗೆ ಊಟ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.



