ದೇಶಾದ್ಯಂತ ನಡೆಯುವ ಜನಗಣತಿಯಲ್ಲಿ ಇದುವರೆಗೆ ಕೇವಲ ಸರ್ಕಾರಿ ಶಾಲಾ ಶಿಕ್ಷಕರು, ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನ ಮಾತ್ರ ಗಣತಿದಾರರನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನ ತೆಗೆದುಕೊಂಡಿದೆ.


ಇನ್ನು ಮುಂದೆ ಖಾಸಗಿ ಶಾಲಾ ಶಿಕ್ಷಕರು ಜನಗಣತಿ ಕಾರ್ಯದಲ್ಲಿ ಭಾಗಿಯಾಗುವುದು ಕಡ್ಡಾಯವಾಗಲಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಗಣತಿ ಪ್ರಕ್ರಿಯೆಯಲ್ಲಿ ಅನುದಾನಿತ ಹಾಗೂ ಅನುದಾನರಹಿತ ಖಾಸಗಿ ಶಾಲೆಗಳ ಶಿಕ್ಷಕರನ್ನ ಅಧಿಕೃತವಾಗಿ ಗಣತಿದಾರರನ್ನಾಗಿ ನೇಮಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ.

1990ರ ಜನಗಣತಿ ನಿಯಮಗಳ ತಿದ್ದುಪಡಿ
ಕೇಂದ್ರ ಸರ್ಕಾರ 1990ರ ಜನಗಣತಿ ನಿಯಮಗಳಿಗೆ ಮಹತ್ವದ ತಿದ್ದುಪಡಿ ತರುವ ಮೂಲಕ ಈ ಹೊಸ ಆದೇಶವನ್ನ ಹೊರಡಿಸಿದೆ. ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತ್ಯುಂಜಯ ಕುಮಾರ್ ನಾರಾಯಣ್ ಅವರು ಈ ಕುರಿತು ಅಧಿಕೃತ ಗೆಜೆಟ್ ಅಧಿಸೂಚನೆಯನ್ನ ಪ್ರಕಟಿಸಿದ್ದಾರೆ. ಈ ಅಧಿಸೂಚನೆಯ ಪ್ರಕಾರ, ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ಶಿಕ್ಷಕರು, ಕ್ಲರ್ಕ್ ಅಥವಾ ಇತರ ಸೂಕ್ತ ಅಧಿಕಾರಿಗಳನ್ನ ಜನಗಣತಿ ಕಾರ್ಯಕ್ಕಾಗಿ ಕಾನೂನುಬದ್ಧವಾಗಿ ನಿಯೋಜಿಸಿಕೊಳ್ಳಬಹುದಾಗಿದೆ.
ಇಲ್ಲಿಯವರೆಗೆ ಗಣತಿಯ ಸಂಪೂರ್ಣ ಹೊರೆ ಕೇವಲ ಸರ್ಕಾರಿ ಶಾಲಾ ಶಿಕ್ಷಕರ ಮೇಲಿತ್ತು. ಇದರಿಂದ ಸರ್ಕಾರಿ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ ಎಂಬ ದೂರುಗಳಿದ್ದವು. ಇದೀಗ ಈ ತಿದ್ದುಪಡಿಯಿಂದ ಸರ್ಕಾರಿ ಶಿಕ್ಷಕರ ಮೇಲಿನ ಕಾರ್ಯದೊತ್ತಡ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದೆ.
ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಹೊಸ ಜವಾಬ್ದಾರಿ
ಹೊಸ ನಿಯಮಗಳ ಪ್ರಕಾರ ಕೇವಲ ಸರ್ಕಾರಿ ಅನುದಾನ ಪಡೆಯುವ ಅಂದರೆ ಅನುದಾನಿತ ಶಾಲೆಗಳ ಶಿಕ್ಷಕರು ಮಾತ್ರವಲ್ಲದೆ, ಸರ್ಕಾರದ ಯಾವುದೇ ಆರ್ಥಿಕ ನೆರವು ಪಡೆಯದೆ ಸಂಪೂರ್ಣ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅಂದರೆ ಅನುದಾನರಹಿತ ಖಾಸಗಿ ಶಾಲೆಗಳ ಬೋಧಕ ಸಿಬ್ಬಂದಿಯನ್ನ ಕೂಡ ಗಣತಿದಾರರನ್ನಾಗಿ ನೇಮಿಸಲು ಮುಕ್ತ ಅವಕಾಶ ನೀಡಲಾಗಿದೆ. ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಮನೆಮನೆಗೆ ತೆರಳಿ ಮಾಹಿತಿ ಕಲೆಹಾಕುವ ಜನಗಣತಿಗೆ ಅಪಾರ ಪ್ರಮಾಣದ ಮಾನವ ಸಂಪನ್ಮೂಲದ ಅಗತ್ಯವಿರುತ್ತದೆ. ಹೀಗಾಗಿ, ಲಭ್ಯವಿರುವ ಶಿಕ್ಷಿತ ಮಾನವ ಸಂಪನ್ಮೂಲವನ್ನ, ಅಂದರೆ ಖಾಸಗಿ ವಲಯದ ಬೋಧಕ ಸಿಬ್ಬಂದಿಯನ್ನ ಈ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ.
