ಅರ್ಜೆಂಟ್ ಅಂದ್ರೆ ‘ನಮಗೊತ್ತಿಲ್ಲ’ ಅಂತಾರೆ!: ತಾಲೂಕು ಕಚೇರಿಯ ಸಿಬ್ಬಂದಿಯ ಉದ್ಧಟತನದ ಕಥೆ ಇಲ್ಲಿದೆ

ಬೆಳ್ತಂಗಡಿ: ‘ಜನಸೇವೆ ಎಂಬುದು ಭಾಷಣಕ್ಕೆ ಮಾತ್ರ ಸೀಮಿತವೇ?’ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದೆ, ತಾಲೂಕಿನಲ್ಲಿ ಬಿಜೆಪಿ ಶಾಸಕರಿದ್ದಾರೆ. ಕೆಪಿಸಿಸಿ, ಎಐಸಿಸಿ ಎಂದೆಲ್ಲಾ ಹುದ್ದೆ-ಪಟ್ಟಗಳನ್ನು ಹೊತ್ತು ಮೆರೆಯುವ ನಾಯಕರ ದಂಡೇ ಇಲ್ಲಿದೆ. ಆದರೆ, ಸಾರ್ವಜನಿಕರ ದಿನನಿತ್ಯದ ಕಷ್ಟ-ಸುಖಗಳಿಗೆ ಸ್ಪಂದಿಸಬೇಕಾದ ‘ಆಡಳಿತದ ಶಕ್ತಿ ಕೇಂದ್ರ’ ತಾಲೂಕು ಕಚೇರಿಯಲ್ಲಿ ಮಾತ್ರ ಅರಾಜಕತೆ ತಾಂಡವವಾಡುತ್ತಿದೆ. ಸಣ್ಣದೊಂದು ಸರಕಾರಿ ಪ್ರಮಾಣಪತ್ರಕ್ಕಾಗಿ ಸಾಮಾನ್ಯ ಜನ ನಿತ್ಯ ಬೆಳಿಗ್ಗೆದ್ದು ಕಚೇರಿಯ ಮೆಟ್ಟಿಲು ಹತ್ತಿ, ತಿಂಗಳುಗಟ್ಟಳೆ ಅಲೆಯಬೇಕಾದ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಯಂತ್ರದ ಈ ನಿರ್ಲಕ್ಷ್ಯ ಮತ್ತು ಸಿಬ್ಬಂದಿಯ ಅಹಂಕಾರದ ನಡವಳಿಕೆಗೆ ತಾಲೂಕಿನ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅರ್ಜಿ ಸಲ್ಲಿಸಿ 2 ತಿಂಗಳಾದರೂ ಸಿಗದ ‘ಜನನ ಪ್ರಮಾಣಪತ್ರ’!
ಜನ ಸಾಮಾನ್ಯರ ಗೋಳಿಗೆ ಉದಾಹರಣೆಯಾಗಿ ಮರೋಡಿ ಗ್ರಾಮದ ಶಮೀಲಾ ಪೂಜಾರಿ (ಹೆಸರು ಬದಲಾಯಿಸಲಾಗಿದೆ) ಅವರ ಪ್ರಕರಣವೇ ಸಾಕ್ಷಿ. ತಮ್ಮ ಅತ್ಯಂತ ತುರ್ತು ಅಗತ್ಯಕ್ಕಾಗಿ 20.6.1997 ರಂದು ಜನಿಸಿದ ಜನನ ಪ್ರಮಾಣಪತ್ರಕ್ಕಾಗಿ ಅವರು 26.8.2026 ರಂದು ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮಾನುಸಾರ ಕೆಲವೇ ದಿನಗಳಲ್ಲಿ ಸಿಗಬೇಕಿದ್ದ ಪ್ರಮಾಣಪತ್ರವು, ದಿನಾಂಕ 16.10.2026 ಕಳೆದರೂ (ಎರಡು ತಿಂಗಳಾಗುತ್ತ ಬಂದರೂ) ಇನ್ನೂ ಅವರ ಕೈಸೇರಿಲ್ಲ! ಜನರ ತುರ್ತು ಅಗತ್ಯಗಳಿಗೆ ಸರಕಾರಿ ವ್ಯವಸ್ಥೆಯಲ್ಲಿ ಬೆಲೆಯೇ ಇಲ್ಲವೇ ಎಂಬ ಪ್ರಶ್ನೆ ಈಗ ಮೂಡಿದೆ.
ಜನರ ಮುಖ ನೋಡಿಯೂ ಮಾತನಾಡದ ಸಿಬ್ಬಂದಿ; ಉದ್ಧಟತನದ ಉತ್ತರ!
ಜನನ-ಮರಣ ವಿಭಾಗದ ಕಥೆಯಂತೂ ಹೇಳತೀರದು. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು ಕಳೆದ ಆಗಸ್ಟ್ 30ಕ್ಕೆ ರಾಜೀನಾಮೆ ನೀಡಿ ತೆರಳಿದ್ದಾರೆ. ಪ್ರಸ್ತುತ ಆ ವಿಭಾಗದ ಜವಾಬ್ದಾರಿ ಹೊತ್ತಿರುವ ವಿ.ಎ ಸುನೇತ್ರಾ (ಹೆಸರು ಬದಲಾಯಿಸಿದೆ) ಅವರಲ್ಲಿ ಸಾರ್ವಜನಿಕರು ಮನವಿ ಮಾಡಲು ಹೋದರೆ, ಜನರ ಮುಖ ನೋಡಿ ಮಾತನಾಡುವಷ್ಟು ಕನಿಷ್ಠ ಸೌಜನ್ಯವಾಗಲಿ, ತಾಳ್ಮೆಯಾಗಲಿ ಅವರಿಗಿಲ್ಲ.
ಸರಕಾರಿ ಖಜಾನೆಯಿಂದ ಸಂಬಳ ಪಡೆಯುವ ಈ ಸಿಬ್ಬಂದಿ ಇಡೀ ದಿನ ಕಚೇರಿಯಲ್ಲಿ ಏನು ಕೆಲಸ ಮಾಡುತ್ತಾರೆ ಎಂಬುದೇ ಯಕ್ಷಪ್ರಶ್ನೆ. “ಅಮ್ಮಾ, ಅರ್ಜಿ ಕೊಟ್ಟು ಒಂದೂವರೆ-ಎರಡು ತಿಂಗಳಾಯಿತು, ಅತ್ಯಂತ ತುರ್ತು ಕೆಲಸವಿದೆ” ಎಂದು ಸಾರ್ವಜನಿಕರು ಭಿನ್ನವಿಸಿಕೊಂಡರೆ, “ಅದೆಲ್ಲಾ ನಮಗೆ ಗೊತ್ತಿಲ್ಲ. ಇಲ್ಲಿ ಸಾವಿರಾರು ಅರ್ಜಿಗಳಿವೆ, ಎಲ್ಲರಿಗೂ ಅರ್ಜೆಂಟೇ! ನಾವೇನೂ ಮಾಡೋಕಾಗಲ್ಲ, ಬೇಕಿದ್ದರೆ ತಹಶೀಲ್ದಾರರ ಬಳಿಯೇ ಹೋಗಿ ಮಾತನಾಡಿ” ಎಂದು ಅತ್ಯಂತ ಉದ್ಧಟತನದಿಂದ ತಳ್ಳಿಹಾಕುತ್ತಿದ್ದಾರೆ.
ಒಳ ರಾಜಕೀಯಕ್ಕೆ ಬಲಿಯಾಯ್ತು ಹೊಸ ಸಿಬ್ಬಂದಿ ನೇಮಕ!
ಇನ್ನು ಜನನ-ಮರಣ ವಿಭಾಗಕ್ಕೆ ಹೊಸ ಸಿಬ್ಬಂದಿ ನೇಮಕಾತಿಯಲ್ಲೂ ರಾಜಕೀಯ ‘ದೊಣ್ಣೆ ನಾಯಕ’ರ ಕೈವಾಡ ಎದ್ದು ಕಾಣುತ್ತಿದೆ! ತೆರವಾದ ಸ್ಥಾನಕ್ಕೆ ಒಬ್ಬರು ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರು. ಆದರೆ, ಸ್ಥಳೀಯ ರಾಜಕೀಯ ಪ್ರಭಾವಿಯೊಬ್ಬರು ತನಗೆ ಬೇಕಾದ ಆಪ್ತನಿಗೆ ಜಾಗ ಗಿಟ್ಟಿಸಲು ಇನ್ನೆರಡು ಅರ್ಜಿಗಳನ್ನು ಗುಜರಾಯಿಸಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ. ಪರಿಣಾಮವಾಗಿ, ಮೂರೂ ಅರ್ಜಿಗಳು ಈಗ ಮೂಲೆಯಲ್ಲಿ ಧೂಳು ತಿನ್ನುತ್ತಿವೆ!
ಮಂಗಳೂರಿನ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, “ನಾವು ಮೂರೂ ಅರ್ಜಿಗಳನ್ನು ಬೆಂಗಳೂರಿಗೆ ಕಳುಹಿಸುತ್ತೇವೆ, ಅವರೇ ನಿರ್ಧಾರ ಮಾಡಲಿ” ಎಂದು ಚೆಂಡನ್ನು ಬೆಂಗಳೂರು ಅಂಗಳಕ್ಕೆ ತಳ್ಳಿ ಕೈತೊಳೆದುಕೊಂಡಿದ್ದಾರೆ.
ವಿಧವೆಯರ ಕಣ್ಣೀರಿಗೂ ಕರಗದ ಮಾಶಾಸನ ವಿಭಾಗ!
ವಿಧವೆ ಹಾಗೂ ವಿಕಲಚೇತನರ ಮಾಶಾಸನ ವಿಭಾಗದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪತಿಯ ನಿಧನದಿಂದ ಅನುಕಂಪದ ಆಧಾರದಲ್ಲಿ ಹುದ್ದೆಗೆ ಬಂದಿರುವ ಸುಜಯಶ್ರೀ (ಹೆಸರು ಬದಲಾಯಿಸಿದೆ) ಅವರಿಗೆ ವಿಧವೆಯರ ನೋವು-ಅಳಲು ಕೇಳಿಸಿಕೊಳ್ಳುವಷ್ಟು ತಾಳ್ಮೆಯಿಲ್ಲ. ಬಾಗಿಲಲ್ಲಿ ನಿಂತು ಕಾಯುವ ಕಷ್ಟದಲ್ಲಿದ್ದ ಮಹಿಳೆಯರಿಗೆ, “ನನಗೆ ಕೆಲಸವಿದೆ, ನಾನು ಬ್ಯುಸಿ ಇದ್ದೇನೆ. ಆಮೇಲೆ ಬನ್ನಿ, ಒಂದು ವಾರ ಬಿಟ್ಟು ಬನ್ನಿ” ಎಂದು ಆಚೆ ಕಳುಹಿಸುವ ಗೀಳು ಹತ್ತಿದೆ.
”ಪ್ರಜಾಸೇವೆ” ಎಂಬ ಹೆಸರಿನಲ್ಲಿ ಕೋಟಿ ಕೋಟಿ ವೆಚ್ಚ ಮಾಡಿ ವೇದಿಕೆ ಕಾರ್ಯಕ್ರಮಗಳನ್ನು ನಡೆಸುವ ಸರಕಾರಕ್ಕೆ, ತಾಲೂಕು ಕಚೇರಿಯ ಅಂಗಳದಲ್ಲಿ ಪ್ರತಿದಿನ ಸಾರ್ವಜನಿಕರು ಅನುಭವಿಸುತ್ತಿರುವ ಈ ‘ನರಕಯಾತನೆ’ ಕಣ್ಣಿಗೆ ಕಾಣಿಸುತ್ತಿಲ್ಲವೇ? ಒಂದೊಂದು ಟೇಬಲ್ನಲ್ಲೂ ಲಂಚ ಅಥವಾ ಸಿಬ್ಬಂದಿಯ ಅಹಂಕಾರದ ಕಥೆಗಳೇ ತುಂಬಿ ತುಳುಕುತ್ತಿವೆ. ಚುನಾಯಿತ ಜನಪ್ರತಿನಿಧಿಗಳು ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೆ, ತಕ್ಷಣವೇ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಈ ಕರ್ತವ್ಯಭ್ರಷ್ಟ ಸಿಬ್ಬಂದಿಗೆ ಚಾಟಿ ಬೀಸಬೇಕಿದೆ. ಇಲ್ಲವಾದಲ್ಲಿ, ತಾಳ್ಮೆಯ ಕಟ್ಟೆಯೊಡೆದಿರುವ ಸಾರ್ವಜನಿಕರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸುವುದು ಖಚಿತ!
