ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಉದ್ಭವಿಸಿರುವ ಭೀಕರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೃಷಿ ವಲಯ ಹಾಗೂ ಕುಡಿಯುವ ನೀರಿನ ಭದ್ರತೆಯ ಮೇಲಾಗಿರುವ ಗಂಭೀರ ಪರಿಣಾಮಗಳನ್ನು ನಿಯಂತ್ರಿಸಲು ತಕ್ಷಣವೇ ಕೇಂದ್ರದ ಅಧ್ಯಯನ ತಂಡವನ್ನು ಕರ್ನಾಟಕಕ್ಕೆ ಕಳುಹಿಸಿಕೊಡಬೇಕು ಮತ್ತು ತುರ್ತು ಆರ್ಥಿಕ ನೆರವು ಬಿಡುಗಡೆ ಮಾಡಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿನಂತಿಸಿದ್ದಾರೆ.

ವಾಡಿಕೆಗಿಂತ ಕಡಿಮೆ ಮಳೆ ಮುಖ್ಯಮಂತ್ರಿಗಳು ಬರೆದಿರುವ ಪತ್ರದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಮಳೆಯ ಅಭಾವದಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ. ಮಳೆಯ ನಂಬಿ ಕೂತಿದ್ದ ರೈತರಿಗೆ ಸಕಾಲದಲ್ಲಿ ಮಳೆಯಾಗದ ಕಾರಣ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಸಂಪೂರ್ಣ ವಿಳಂಬವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೂ ಭಾರಿ ಸಂಕಷ್ಟ ಎದುರಾಗುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ಎದುರಾಗಿರುವ ಈ ಪರಿಸ್ಥಿತಿಯನ್ನ ಖುದ್ದಾಗಿ ವೀಕ್ಷಿಸಲು ಹಾಗೂ ಹಾನಿಯ ಪ್ರಮಾಣವನ್ನು ಅಳೆಯಲು ಕೇಂದ್ರದ ಉನ್ನತ ಮಟ್ಟದ ಅಧ್ಯಯನ ತಂಡವನ್ನು ತಕ್ಷಣವೇ ಕರ್ನಾಟಕಕ್ಕೆ ನಿಯೋಜಿಸಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ. ಕೇಂದ್ರ ತಂಡದ ವರದಿ ಆಧಾರದ ಮೇಲೆ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತುರ್ತು ಬರ ಪರಿಹಾರ ಧನವನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೇ, ಎಲ್ನಿನೋ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂಗಾರು ಮಳೆ ತೀವ್ರವಾಗಿ ಕೈಕೊಟ್ಟಿದೆ. ಜುಲೈ 11ರ ವೇಳೆಗೆ ರಾಜ್ಯದಲ್ಲಿ ವಾಡಿಕೆಯಂತೆ 292 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 203 ಮಿ.ಮೀ ಮಳೆಯಾಗಿದ್ದು, ಒಟ್ಟಾರೆ ಶೇಕಡಾ 30ರಷ್ಟು ಮಳೆ ಕೊರತೆ ದಾಖಲಾಗಿದೆ. ಜೂನ್ 5ರಂದು ರಾಜ್ಯ ಪ್ರವೇಶಿಸಿದ ಮುಂಗಾರು, ಇಡೀ ರಾಜ್ಯವನ್ನು ಆವರಿಸಲು 17 ದಿನಗಳನ್ನು ತೆಗೆದುಕೊಂಡಿದೆ. ಜೂನ್ 22ರ ವೇಳೆಗೆ ಮುಂಗಾರು ಪೂರ್ಣ ವ್ಯಾಪಿಸಿದರೂ, ಸುದೀರ್ಘ ಮಳೆ ಬಿಡುವಿನಿಂದಾಗಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಅಂಕಿಅಂಶ ನೀಡಿದ್ದಾರೆ.
ರಾಜ್ಯದ ಒಟ್ಟು 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳು ಈಗಾಗಲೇ ತೀವ್ರ ಮಳೆ ಕೊರತೆಯ ಪಟ್ಟಿಗೆ ಸೇರಿವೆ. ಒಟ್ಟು 240 ತಾಲೂಕುಗಳ ಪೈಕಿ 141 ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರಗಾಲದ ಭೀತಿ ಎದುರಾಗಿದೆ. ಕಾವೇರಿ, ತುಂಗಾ ಮತ್ತು ಭದ್ರಾ ನದಿಗಳ ಪ್ರಮುಖ ಜಲಾನಯನ ಪ್ರದೇಶವಾಗಿರುವ ಮಲೆನಾಡು ಭಾಗದಲ್ಲೇ ಶೇಕಡಾ 34ರಷ್ಟು ಮಳೆ ಕೊರತೆ ಉಂಟಾಗಿದೆ. ಇದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಭದ್ರತೆಗೆ ದೊಡ್ಡ ಆಪತ್ತನ್ನು ತಂದೊಡ್ಡಲಿದೆ. ಜುಲೈ ತಿಂಗಳು ಮುಂಗಾರು ಕೃಷಿ ಚಟುವಟಿಕೆಗೆ ಅತ್ಯಂತ ಪ್ರಮುಖವಾದ ಅವಧಿ. ಆದರೆ ಮಳೆಯ ಅಭಾವದಿಂದಾಗಿ ರೈತರು ಬಿತ್ತನೆ ಕಾರ್ಯದಿಂದ ದೂರ ಉಳಿಯುವಂತಾಗಿದೆ ಎಂದಿದ್ದಾರೆ.



