ಕೊಕ್ಕಡ: ಕೊಕ್ಕಡ ಬಳಿಯ ಸೌತಡ್ಕದ ಅಂಗನವಾಡಿ ಕೇಂದ್ರದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಪುಟ್ಟ ಮಗುವಿಗೆ ಹಾವು ಕಚ್ಚಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವು ಕಚ್ಚಿದ ಬಾಲಕಿಯನ್ನು ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ನಾಲ್ಕು ವರ್ಷದ ಪುತ್ರಿ ‘ಫಾತಿಮತ್ ಸಹದಿಯಾ’ ಎಂದು ಗುರುತಿಸಲಾಗಿದೆ. ಜುಲೈ 14ರಂದು ಎಂದಿನಂತೆ ಸೌತಡ್ಕದ ಅಂಗನವಾಡಿಗೆ ತೆರಳಿದ್ದ ಫಾತಿಮತ್, ತರಗತಿಯ ಕೊಠಡಿಯೊಳಗೆ ಆಟಿಕೆಗಳೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಆಟಿಕೆಗಳ ನಡುವೆ ಅಡಗಿ ಕುಳಿತಿದ್ದ ಹಾವು ದಿಢೀರನೆ ಬಾಲಕಿಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣ ಮಗು ಜೋರಾಗಿ ಅಳಲು ಪ್ರಾರಂಭಿಸಿದೆ.
ಬಾಲಕಿಯ ಅಳು ಕೇಳಿ ಓಡಿ ಬಂದ ಅಂಗನವಾಡಿ ಸಹಾಯಕಿ ತಕ್ಷಣವೇ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅಂಗನವಾಡಿ ಶಿಕ್ಷಕಿ ಬಿ.ಎಲ್.ಓ (BLO) ಕರ್ತವ್ಯದ ನಿಮಿತ್ತ ಹೊರಹೋಗಿದ್ದರಿಂದ, ಕೇಂದ್ರದಲ್ಲಿ ಸಹಾಯಕಿ ಮಾತ್ರ ಇದ್ದರು ಎನ್ನಲಾಗಿದೆ. ಅಸ್ವಸ್ಥಗೊಂಡ ಬಾಲಕಿಯನ್ನು ತಕ್ಷಣ ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಬಾಲಕಿಗೆ ಐಸಿಯುನಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.



