ವೇಣೂರು, ಜು. 15: ಕುಂಭಶ್ರೀ ಪದವಿಪೂರ್ವ ಕಾಲೇಜು, ನಿಟ್ಟಡೆ–ವೇಣೂರಿನಲ್ಲಿ 2026–27ನೇ ಶೈಕ್ಷಣಿಕ ವರ್ಷದ ಸಿಎ ಫೌಂಡೇಶನ್ ಪಠ್ಯಕ್ರಮ ಉದ್ಘಾಟನೆ ಹಾಗೂ ಓರಿಯೆಂಟೇಶನ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ಲೆಫ್ಟಿನೆಂಟ್ ಅಶ್ವಿತ್ ಕುಲಾಲ್ ಅವರು ಸಿಎ ಫೌಂಡೇಶನ್ ಪಠ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು ಮತ್ತು ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ನಾಯ್ಕ್ ಅವರು ಮಾತನಾಡಿ, ವಿದ್ಯಾರ್ಥಿಗಳು ಆರಂಭದಿಂದಲೇ ನಿಯಮಿತ ಅಧ್ಯಯನದ ಅಭ್ಯಾಸ ಬೆಳೆಸಿಕೊಂಡು ಆತ್ಮವಿಶ್ವಾಸದಿಂದ ಸಿಎ ಫೌಂಡೇಶನ್ ಕೋರ್ಸ್ನ್ನು ಅಭ್ಯಾಸ ಮಾಡಿದರೆ ಉತ್ತಮ ಯಶಸ್ಸು ಸಾಧಿಸಬಹುದು ಎಂದು ತಿಳಿಸಿದರು.
ವಾಣಿಜ್ಯ ವಿಭಾಗದ ಉಪನ್ಯಾಸಕಿ ಕುಮಾರಿ ಶರಣ್ಯ ಕೆ. ಎಸ್. ಅವರು ಸಿಎ ಫೌಂಡೇಶನ್ ಕೋರ್ಸ್ನ ರಚನೆ, ಪಠ್ಯಕ್ರಮ, ಪರೀಕ್ಷಾ ವಿಧಾನ ಹಾಗೂ ವೃತ್ತಿ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಅಭಿಲಾಷ್ ಕಾಮತ್ ಅವರು ಡಿಜಿಟಲ್ ಕೌಶಲ್ಯಗಳ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವೂ ನಡೆಯಿತು.
ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಕುಮಾರಿ ಲಿಖಿತಾ ಎಂ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



