ಕಾರ್ಕಳ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಅವರು ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿದೆ. ಮುಂಡ್ಕೂರಿನ ಪಾಲಿಗೆ ಕರ್ಣನಂತಿದ್ದ ನಾನಾ ಪಾಟೇಕರ್ ಅಗಲುವಿಕೆ ಮುಂಡ್ಕೂರಿಗೆ ತುಂಬಲಾಗದ ನಷ್ಟ ಎಂದು ಮುಂಡ್ಕೂರು ಶಿಕ್ಷಣ ಮತ್ತು ಸಮಾಜೋದ್ಧಾರಕ ಸಂಘದ ಅಧ್ಯಕ್ಷರಾದ ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.


ನನ್ನ ಆಪ್ತ ಸ್ನೇಹಿತರಾಗಿದ್ದ ನಾನಾ ಪಾಟೇಕರ್ ಅವರು ಈ ಹಿಂದೆ ಆಗಾಗ್ಗೆ ಮುಂಡ್ಕೂರಿಗೆ ಭೇಟಿ ನೀಡುತ್ತಿದ್ದರು. ಸುಮಾರು25 ವರ್ಷಗಳ ಹಿಂದೆ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಿರ್ಮಾಣಗೊಂಡ ಬೃಹತ್ ನಾನಾ ಪಾಟೇಕರ್ ಸಭಾಗೃಹ ನಿರ್ಮಾಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇದರೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ಮುಲ್ಲಡ್ಕ ಬ್ರಹ್ಮ ಬೈದರ್ಕಳ ಗರಡಿ ಹಾಗೂ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯೀ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಿಗೂ ಅವರು ಉದಾರ ದೇಣಿಗೆ ನೀಡಿದ್ದರು.
ಧಾರ್ಮಿಕ ಕ್ಷೇತ್ರದ ಜೊತೆಗೆ ಶೈಕ್ಷಣಿಕ ಕ್ಷೇತ್ರಕ್ಕೂ ಶ್ರಮಿಸಿದ್ದ ಅವರು, ಶತಮಾನ ಕಂಡ ಮುಂಡ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿಗೆ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಮತ್ತು ಕಂಪ್ಯೂಟರ್ಗಳನ್ನು ಕೊಡುಗೆಯಾಗಿ ನೀಡಿದ್ದರು.
ಪ್ರತೀ ಬಾರಿ ಮುಂಡ್ಕೂರಿಗೆ ಬಂದಾಗ ಗುರುಕುಲ ಮಾದರಿಯ ಶಿಕ್ಷಣವನ್ನು ಪ್ರಾರಂಭಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾವೂ ಆಲೋಚನೆ ನಡೆಸಿದ್ದೆವು. ಆದರೆ ಅವರ ಅಕಾಲಿಕ ನಿಧನ ನಮ್ಮನ್ನು ದುಃಖದ ಮಡುವಿಗೆ ತಳ್ಳಿದೆ ಎಂದು ಮುಲ್ಲಡ್ಕ ಗುರುಪ್ರಸಾದ್ ಸುಧಾಕರ ಶೆಟ್ಟಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.


