ದೀಪಾವಳಿ ಹಾಗೂ ಸಾಲು ಸಾಲು ಹಬ್ಬಗಳ ರಜಾ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಪ್ರಯಾಣಿಕರಿಗೆ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಬಿಗ್ ಶಾಕ್ ನೀಡಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಇಂಧನ (ATF) ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಹೊರೆಯನ್ನ ಸರಿದೂಗಿಸಲು ಸಂಸ್ಥೆಯು ಪ್ರಯಾಣಿಕರ ಮೇಲೆ ಇಂಧನ ಶುಲ್ಕವನ್ನು ವಿಧಿಸಲು ಮುಂದಾಗಿದೆ.


ಇದರ ಪರಿಣಾಮವಾಗಿ ಇಂದಿನಿಂದಲೇ (ಮಂಗಳವಾರ) ಇಂಡಿಗೋ ವಿಮಾನ ಟಿಕೆಟ್ ದರ ಗಣನೀಯವಾಗಿ ಹೆಚ್ಚಾಗಲಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳಲಿದೆ. ವಿಮಾನ ಕ್ರಮಿಸುವ ಮಾರ್ಗ ಹಾಗೂ ವಲಯವನ್ನು ಆಧರಿಸಿ ಟಿಕೆಟ್ ದರದಲ್ಲಿ ಕನಿಷ್ಠ 375 ರೂಪಾಯಿಯಿಂದ ಗರಿಷ್ಠ 10,000 ರೂಪಾಯಿವರೆಗೆ ಹೆಚ್ಚಳವಾಗಲಿದೆ.
ಇಂಡಿಗೋ ವಿಮಾನ ಟಿಕೆಟ್ ದರ ಏರಿಕೆ: ಇಂಧನ ಬೆಲೆ ಏರಿಕೆಯೇ ಪ್ರಮುಖ ಕಾರಣ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಮತ್ತು ವಿಮಾನಯಾನ ಇಂಧನದ ಬೆಲೆಯಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿವೆ. ಯಾವುದೇ ವಿಮಾನಯಾನ ಸಂಸ್ಥೆಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಶೇಕಡಾ 40ರಷ್ಟು ಪಾಲು ಕೇವಲ ಇಂಧನಕ್ಕಾಗಿಯೇ ಖರ್ಚಾಗುತ್ತದೆ. ಹೀಗಾಗಿ, ಇಂಧನ ಬೆಲೆ ಮಿತಿಮೀರಿ ಏರಿಕೆಯಾದಾಗಲೆಲ್ಲಾ ಆರ್ಥಿಕ ನಷ್ಟವನ್ನು ತಡೆಗಟ್ಟಲು ಸಂಸ್ಥೆಗಳು ಟಿಕೆಟ್ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆಯು ಹೊಸ ಇಂಧನ ಶುಲ್ಕವನ್ನ ಜಾರಿಗೆ ತಂದಿದೆ. ಇದರಿಂದಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ಇನ್ನು ಮುಂದೆ ತಮ್ಮ ನಿಗದಿತ ಟಿಕೆಟ್ ದರದ ಜೊತೆಗೆ ಹೆಚ್ಚುವರಿ ಹಣವನ್ನ ಪಾವತಿಸಬೇಕಾಗುತ್ತದೆ.
ಮುಂಬರುವ ರಜಾ ದಿನಗಳು ಮತ್ತು ಹಬ್ಬದ ಸೀಸನ್ನಲ್ಲಿ ವಿಮಾನ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಆದರೆ, ಇಂಡಿಗೋ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರದಿಂದಾಗಿ ಸಾಮಾನ್ಯ ಪ್ರಯಾಣಿಕರು ಮತ್ತು ಪ್ರವಾಸಿಗರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ದರ ಹೆಚ್ಚಿಸಿರುವುದರಿಂದ, ಮುಂಬರುವ ದಿನಗಳಲ್ಲಿ ಇತರ ವಿಮಾನಯಾನ ಸಂಸ್ಥೆಗಳು ಕೂಡ ಇದೇ ಹಾದಿ ಹಿಡಿದು ತಮ್ಮ ಟಿಕೆಟ್ ದರಗಳನ್ನು ಪರಿಷ್ಕರಿಸುವ ಸಾಧ್ಯತೆ ಹೆಚ್ಚಿದೆ.


