ಬೆಳ್ಳಣ್: ರಾಜ್ಯ ಸರ್ಕಾರವು ಕುಂಬಾರ ನಿಗಮಕ್ಕೆ ಅನುದಾನ ಘೋಷಣೆ ಮಾಡಿದ ಕೂಡಲೇ, ಅದನ್ನು ಆದ್ಯತೆಯ ಮೇರೆಗೆ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಕುಂಬಾರ ನಿಗಮದ ಅಧ್ಯಕ್ಷ ಶ್ರೀನಿವಾಸ ವೇಲು ತಿಳಿಸಿದ್ದಾರೆ.
ಅವರು ಬೆಳ್ಳಣ್ನಲ್ಲಿ ಜರುಗಿದ ಕುಲಾಲ ಸಂಘ (ನಾನಿಲ್ತಾರ್) ಇದರ 38ನೇ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕುಂಬಾರ ನಿಗಮ ಆರಂಭಗೊಂಡ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ಆಯಾಯ ಪ್ರದೇಶದ ಕುಂಬಾರ ಸಮುದಾಯದ ಸಮಸ್ಯೆಗಳನ್ನು ಹತ್ತಿರದಿಂದ ತಿಳಿದು ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಾಲ ಸಂಘದ ಅಧ್ಯಕ್ಷ ಜಯರಾಮ್ ಕುಲಾಲ್ ಮಾತನಾಡಿ, ಸಂಘದ ಒಗ್ಗಟ್ಟು, ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರದ ಕುರಿತು ವಿವರವಾಗಿ ಹಂಚಿಕೊಂಡರು.
ಗಣ್ಯರ ಉಪಸ್ಥಿತಿ:
ವೇದಿಕೆಯಲ್ಲಿ ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಾಘು ಮೂಲ್ಯ, ಪ್ರಮುಖ ಉದ್ಯಮಿ ಸುನಿಲ್ ಸಾಲ್ಯಾನ್, ಮುಂಬೈ ಜ್ಯೋತಿ ಕೋ-ಆಪರೇಟಿವ್ ಚೇರ್ಮನ್ ಗಿರೀಶ್ ಬಿ. ಸಾಲ್ಯಾನ್, ಮುಂಬೈ ಸಂಘದ ಉಪಾಧ್ಯಕ್ಷ ಡಿ.ಐ. ಮೂಲ್ಯ, ವಲಯ ಅರಣ್ಯ ಅಧಿಕಾರಿ ಪ್ರಭಾಕರ್ ಕುಲಾಲ್, ಮುಂಬೈ ನಾನಿಲ್ತಾರ್ ಅಭಿಮಾನಿ ಬಳಗದ ಅಧ್ಯಕ್ಷ ಹರೀಶ್, ಕುಂಭ ನಿಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬೆಳ್ಳಣ್ ಅಧ್ಯಕ್ಷ ಕುಶ ಆರ್. ಮೂಲ್ಯ ಇನ್ನ, ನಿವೃತ್ತ ಯೋಧ ರಮೇಶ್ ಕುಲಾಲ್, ಶ್ರೀಮತಿ ದೇವಕಿ ಸುನಿಲ್ ಸಾಲ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಚೈತ್ರ ಕುಲಾಲ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೆಲಾಡಿ, ಜಗನ್ನಾಥ್ ಮೂಲ್ಯ ಬೆಳ್ಳಣ್ ಹಾಗೂ ಯುವ ಘಟಕದ ಅಧ್ಯಕ್ಷೆ ಹರ್ಷಿತ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಕಾರ್ಯಕ್ರಮದಲ್ಲಿ ಸಮಾಜಕ್ಕೆ ಮತ್ತು ಕ್ರೀಡಾ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಕೀರ್ತಿ ತಂದ ಸಾಧಕರನ್ನು ಗೌರವಿಸಲಾಯಿತು. ನಿವೃತ್ತ ಯೋಧ ರಮೇಶ್, ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ರಮೇಶ್ ಕುಲಾಲ್ ಮಾಳ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ರಾಂಕ್ ಪಡೆದ ವೈಭವ್ ಕುಲಾಲ್, ಸಮಾಜ ಸೇವಕ ಪ್ರೇಮ್ ಕುಲಾಲ್, ಎಸ್.ಎಲ್.ಆರ್.ಎಂ. ತಾಲೂಕು ಘಟಕದ ಅಧ್ಯಕ್ಷೆ ಶ್ರೀಮತಿ ಉಷಾ ಕುಲಾಲ್ ಮುಂಡೂರು ಹಾಗೂ ನಾನಿಲ್ತಾರ್ ಅಭಿಮಾನಿ ಬಳಗದ ಹರೀಶ್ ಅವರನ್ನು ಅತಿಥಿಗಳು ಸನ್ಮಾನಿಸಿ, ಅಭಿನಂದಿಸಿದರು.
ಕಾರ್ಯಕ್ರಮ ನಿರ್ವಹಣೆ:
ಕುಶ ಆರ್. ಮೂಲ್ಯ ಇನ್ನ ಸ್ವಾಗತಿಸಿದರು. ಶ್ರೀಕಾಂತ್ ಮೂಲ್ಯ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು. ಅಂತಿವಾಗಿ ಹರ್ಷಿತ ವಂದನಾರ್ಪಣೆಗೈದರು.

