ಸುಲ್ಕೇರಿಮೊಗ್ರು: ಹಿಂದೂ ಯುವಸೇನೆ ಸೇವಾ ಸಂಘ ಸುಲ್ಕೇರಿಮೊಗ್ರು ಇದರ ದಶಮಾನೋತ್ಸವ ಸಂಭ್ರಮ ಹಾಗೂ ನೂತನ ‘ಸಂಚಾರಿ ಚಿತಾಗಾರ’ ಲೋಕಾರ್ಪಣೆ ಕಾರ್ಯಕ್ರಮವು ನವೆಂಬರ್ 22, 2026ರ ಆದಿತ್ಯವಾರದಂದು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸುಲ್ಕೇರಿಮೊಗ್ರು ಇದರ ಸಭಾಂಗಣದಲ್ಲಿ ಅಶ್ವಥ್ ಸಾಲ್ಯಾನ್ ವರ್ಪಾಳೆ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಹಕಾರ್ಯವಾಹರಾದ ಶ್ರೀ ಹರಿಕೃಷ್ಣ ಅವರು, “ಗ್ರಾಮ ವಿಕಾಸದ ಪರಿಕಲ್ಪನೆಯೊಂದಿಗೆ ಇಂದಿನ ಮಕ್ಕಳಿಗೆ ಸೂಕ್ತ ತಿಳುವಳಿಕೆ ಮೂಡಿಸಿದಾಗ, ಅದು ಮುಂದಿನ ಜನಾಂಗದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಭದ್ರವಾದ ಅಡಿಗಲ್ಲಾಗಲಿದೆ” ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಮುಖ್ಯ ಅತಿಥಿಗಳಾದ ಅಳದಂಗಡಿಯ ವೈದ್ಯರಾದ ಡಾ. ಶ್ರೀಮತಿ ಸುಷ್ಮಾ ಡೋಂಗ್ರೆ ಅವರು ಮಾತನಾಡಿ, “ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಮ್ಮ ಆಹಾರ ಪದ್ಧತಿಯು ವಿಷಪೂರಿತವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ. ಈ ಬಗ್ಗೆ ಇಂತಹ ಸಮಾಜ ಸೇವಾ ಸಂಘಟನೆಗಳ ಮೂಲಕ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ” ಎಂದರು.
ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ರೀ ರವಿ ಸಾಲ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಸಂಘವು ಬೆಳೆದು ಬಂದ ಹಾದಿಯನ್ನು ಸ್ಮರಿಸಿದರು. ಸಂಘದ ಕಾರ್ಯದರ್ಶಿ ಸುದರ್ಶನ್ ಅಂಬಡೆದಡಿ ಅವರು ಸಂಘದ ವಾರ್ಷಿಕ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು.
ಸೇವಾ ಕಾರ್ಯ: ಸಂಘದ ಸೇವಾ ಯೋಜನೆಯ ಅಂಗವಾಗಿ ಇದೇ ಸಂದರ್ಭದಲ್ಲಿ ಮೂವರು ಅಶಕ್ತ ಕುಟುಂಬಗಳಿಗೆ ಧನಸಹಾಯವನ್ನು ವಿತರಿಸಲಾಯಿತು.
ಧನುಷ್ ಕಾಡಂಗೆ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಶುಭಾರಂಭಗೊಂಡಿತು. ನಂದನ್ ಕುಮಾರ್ ಸ್ವಾಗತ ಕೋರಿದರು. ಸುಧೀರ್ ಸುವರ್ಣ ಧನ್ಯವಾದ ಸಮರ್ಪಿಸಿದರೆ, ಪುರುಷೋತ್ತಮ್ ಹೊಸಮನೆ ಪಟ್ಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.




