ಬಂಟ್ವಾಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಈ ಬಾರಿಯ ಶರನ್ನವರಾತ್ರಿ ಉತ್ಸವವು ಶ್ರೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಲು ಸಜ್ಜಾಗಿದೆ.


ಅಕ್ಟೋಬರ್ 11ರಿಂದ 23ರವರೆಗೆ ಜರುಗಲಿರುವ ಈ ಧಾರ್ಮಿಕ ಮಹೋತ್ಸವದಲ್ಲಿ ವೈದಿಕ ಕಾರ್ಯಕ್ರಮಗಳು, ಚಂಡಿಕಾಯಾಗ, ಸಾಂಸ್ಕೃತಿಕ ವೈಭವ ಹಾಗೂ ಯಕ್ಷಗಾನ ಬಯಲಾಟ ಸೇರಿದಂತೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೈಂಕರ್ಯಗಳು ನೆರವೇರಲಿವೆ.
ಅ. 11ರಂದು ಬೆಳಿಗ್ಗೆ 5-30ರಿಂದ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದ್ದು, ಬೆಳಿಗ್ಗೆ 6-30ಕ್ಕೆ ಕೊಪ್ಪರಿಗೆ ಮುಹೂರ್ತ ನಡೆಯಲಿದೆ.
ಅ.11 ರಿಂದ 23ರವರೆಗೆ ಬೆಳಿಗ್ಗೆ 7-00 ಗಂಟೆಯಿಂದ ಪಂಚಾಮೃತ ಅಭಿಷೇಕ, ಕುಂಭೇಶ್ವರಿ ಪೂಜೆ, ಗುರುಪೂಜೆ, ಗೋಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ೯-೩೦ರಿಂದ ಚಂಡಿಕಾಯಾಗ, ಬೆಳಿಗ್ಗೆಯಿಂದ ಸಂಜೆಯವರೆಗೆ ವಿವಿಧ ಭಜನ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಬೆಳಿಗ್ಗೆ 11-00 ಗಂಟೆಗೆ ಸಾಮೂಹಿಕ ಕುಂಕುಮಾರ್ಚನೆ, ಪೂರ್ವಾಹ್ನ 11-30ಕ್ಕೆ ಚಂಡಿಕಾಯಾಗದ ಪೂರ್ಣಾಹುತಿ ನಡೆಯಲಿದೆ. ಮಧ್ಯಾಹ್ನ 12-00 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 5-30ರಿಂದ ದುರ್ಗಾನಮಸ್ಕಾರ ಪೂಜೆ, ಲಲಿತಾಸಹಸ್ರನಾಮಾರ್ಚನೆ ನಡೆಯಲಿದೆ.
ಅ. 22ರಂದು ಪ್ರಾತಃಕಾಲ 6-30ರಿಂದ ಗಣಹೋಮ, ಪಂಚಾಮೃತಾಭಿಷೇಕ, ಕುಂಭೇಶ್ವರಿ ಪೂಜೆ, ಗುರುಪೂಜೆ, ಗೋಪೂಜೆ, ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ ನಡೆಯಲಿದೆ. ವಿಶೇಷವಾಗಿ ಬೆಳಿಗ್ಗೆ 11-30ರಿಂದ ಪೂಜ್ಯ ಸ್ವಾಮೀಜಿಯವರಿಂದ ಮಧುಕರಿ, ಮಹಾಪೂಜೆ ಬಳಿಕ ಧಾರ್ಮಿಕಸಭೆ ಜರಗಲಿದೆ. ರಾತ್ರಿ 8-00 ಗಂಟೆಯಿಂದ ಮಾಣಿಲ ಶ್ರೀ ಮಹಾಲಕ್ಷ್ಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ಮತ್ತು ಅತಿಥಿ ಕಲಾವಿದರಿಂದ ‘ಬ್ರಹ್ಮಕಲಾಪ’ ಯಕ್ಷಗಾನ ಬಯಲಾಟ ನಡೆಯಲಿದೆ.
ಧಾರ್ಮಿಕ ಪವಿತ್ರತೆ, ವೈದಿಕ ವಿಧಿ-ವಿಧಾನಗಳು ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮದೊಂದಿಗೆ ನೆರವೇರಲಿರುವ ಈ ಶರನ್ನವರಾತ್ರಿ ಉತ್ಸವವು, ಭಕ್ತಾದಿಗಳಿಗೆ ದುರ್ಗಾಮಹಾಲಕ್ಷ್ಮಿ ಹಾಗೂ ಪೂಜ್ಯ ಶ್ರೀಗಳ ಅನುಗ್ರಹ ಪಡೆಯಲು ಒಂದು ಅನನ್ಯ ಅವಕಾಶವಾಗಿದ್ದು, ಮಾಣಿಲ ಕ್ಷೇತ್ರವನ್ನು ಭಕ್ತಿರಸದಲ್ಲಿ ತೇಲಿಸಲಿದೆ.


