ಕಟೀಲು: ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರೇಮಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ಶ್ರೀ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಏಳು ಮೇಳಗಳ ಈ ಸಾಲಿನ ತಿರುಗಾಟವು ಡಿಸೆಂಬರ್ 3ರಂದು ಸಂಭ್ರಮದಿಂದ ಆರಂಭಗೊಳ್ಳಲಿದೆ.
ಕರಾವಳಿಯಾದ್ಯಂತ ಲಕ್ಷಾಂತರ ಭಕ್ತರು ಹಾಗೂ ಕಲಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಕ್ಷಣ ಇದೀಗ ಸಮೀಪಿಸಿದೆ. ಡಿಸೆಂಬರ್ 3ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ವಿಶೇಷ ಪೂಜಾ ವಿಧಿವಿಧಾನಗಳೊಂದಿಗೆ ದೇವಿಯ ಸನ್ನಿಧಿಯಲ್ಲಿ ಗೆಜ್ಜೆ ಪೂಜೆ ಹಾಗೂ ಪ್ರಥಮ ಸೇವೆಯಾಟ ನೆರವೇರಲಿದೆ. ಬಳಿಕ ಏಳು ಮೇಳಗಳು ವಿವಿಧೆಡೆ ತಮ್ಮ ತಿರುಗಾಟವನ್ನು ಪ್ರಾರಂಭಿಸಲಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ಕಟೀಲು ಮೇಳಗಳ ತಿರುಗಾಟವು ಕರಾವಳಿ ಭಾಗದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದು, ಭಕ್ತಾದಿಗಳು ಮತ್ತು ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಲಿದ್ದಾರೆ.




