ಮಂಗಳೂರು: ಎಂಆರ್ಪಿಎಲ್ನಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟ ಪ್ರಕರಣವನ್ನು ಕೇವಲ ಪರಿಹಾರ ಮತ್ತು ಉದ್ಯೋಗದ ವಿಚಾರಕ್ಕೆ ಸೀಮಿತಗೊಳಿಸದೆ, ಘಟನೆಯ ಹಿಂದಿರುವ ಸುರಕ್ಷತಾ ಲೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಇದು ಕೇವಲ ಎಂಆರ್ಪಿಎಲ್ ಸಂಸ್ಥೆಯೊಳಗಿನ ಸಮಸ್ಯೆಯಲ್ಲ; ಇಡೀ ದಕ್ಷಿಣ ಕನ್ನಡ ಜಿಲ್ಲೆಯ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ವಿಚಾರ ಎಂದು ಎಂಆರ್ಪಿಎಲ್ ಮದ್ದೂರ್ ಸಂಘದ ಗೌರವಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.


ನಗರದ ಪತ್ರಿಕಾಭವನದಲ್ಲಿ : ಪ್ರಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯನ್ನು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ, ಸಾಫ್ಟ್ವೇರ್ ಕಂಪನಿಗಳ ಸ್ಥಾಪನೆ ಹಾಗೂ ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಮಂಗಳೂರಿನಲ್ಲಿರುವ ಪ್ರತಿಷ್ಠಿತ ಎಂಆರ್ಪಿಎಲ್ ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿರುವುದು ಆತಂಕಕಾರಿ ಬೆಳವಣಿಗೆ ಎಂದರು.
ಎಂಆರ್ಪಿಎಲ್ ಅನ್ನು ‘ಜೀವಂತ ಜ್ವಾಲಾಮುಖಿ’ಯಂತೆ ಮಡಿಲಲ್ಲಿ ಇಟ್ಟುಕೊಂಡು ಜನರು ಬದುಕುವ ಪರಿಸ್ಥಿತಿ ನಿರ್ಮಾಣವಾಗಬಾರದು. ಇಂತಹ ಕೈಗಾರಿಕಾ ಘಟಕಗಳಲ್ಲಿ ಸುರಕ್ಷತೆ ಹಾಗೂ ಜನರ ಜೀವದ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಘಟನೆಯ ಬಳಿಕ ಮೃತ ಕಾರ್ಮಿಕ ಮನೀಶ್ ಕರ್ಕೇರ ಅವರ ಕುಟುಂಬಕ್ಕೆ ಪರಿಹಾರ ಹಾಗೂ ಉದ್ಯೋಗ ಸೇರಿದಂತೆ ಅಗತ್ಯ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಘಟನೆಯಲ್ಲಿ ಒಟ್ಟು ₹1.20 ಕೋಟಿ ಪರಿಹಾರ ಒದಗಿಸಿರುವುದನ್ನು ಸ್ವಾಗತಿಸಿದ ಅವರು, ಎಂಆರ್ಪಿಎಲ್ನಿಂದ ₹90 ಲಕ್ಷ, ವಿಮೆಯಿಂದ ₹10 ಲಕ್ಷ ಹಾಗೂ ಇತರ ಮೂಲಗಳಿಂದ ₹20 ಲಕ್ಷ ಸೇರಿ ಈ ಮೊತ್ತ ನೀಡಲಾಗಿದೆ ಎಂದು ತಿಳಿಸಿದರು. ಹಣದಿಂದ ಕಳೆದುಕೊಂಡ ಜೀವವನ್ನು ಮರಳಿ ತರಲು ಸಾಧ್ಯವಿಲ್ಲವಾದರೂ, ಕುಟುಂಬಕ್ಕೆ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ. ಇದಕ್ಕಾಗಿ ಸಂಬಂಧಪಟ್ಟವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.


