ಶಬರಿಮಲೆ, ನ.16: ಪ್ರಸಿದ್ಧ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ವಾರ್ಷಿಕ ಮಂಡಲ ಪೂಜೆ ಹಾಗೂ ತೀರ್ಥಯಾತ್ರೆ ಹಿನ್ನಲೆ ಇಂದು ಸೋಮವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಗುತ್ತದೆ.




ನಿರ್ಗಮಿತ ಮುಖ್ಯ ಅರ್ಚಕರಾದ ಇ.ಡಿ. ಪ್ರಸಾದ್ ನಂಬೂದರಿ ಅವರು ತಂತ್ರಿ ಕಂಕರು ಬ್ರಹ್ಮದತ್ತನ್ ಅವರ ಉಪಸ್ಥಿತಿಯಲ್ಲಿ ಗರ್ಭಗುಡಿಯ ದೀಪ ಬೆಳಗಲಿದ್ದಾರೆ. ನಂತರ ಪವಿತ್ರ ಹದಿನೆಂಟು ಮೆಟ್ಟಿಲುಗಳನ್ನು ಇಳಿದು ಬಂದು ಪವಿತ್ರ ಅಗ್ನಿಯನ್ನು ಬೆಳಗಿಸಿ, ಹೊಸದಾಗಿ ಆಯ್ಕೆಯಾದ ಪ್ರಮುಖ ಅರ್ಚಕರನ್ನು ಸನ್ನಿಧಾನಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಸಂಜೆ ಸುಮಾರು 6:30ಕ್ಕೆ ತಂತ್ರಿಗಳು ಶಬರಿಮಲೆಯ ನೂತನ ಮೇಲ್ಶಾಂತಿ ಅರೀಕ್ಕರ ಸುಬ್ರಹ್ಮಣ್ಯನ್ ಶಂಕರನ್ ನಂಬೂತಿರಿ ಅವರ ಪ್ರತಿಷ್ಠಾಪನಾ ವಿಧಿಯನ್ನು ನೆರವೇರಿಸಲಿದ್ದಾರೆ. ಇದೇ ರೀತಿಯ ಸಮಾರಂಭವು ಮಾಳಿಕಪ್ಪುರಂ ದೇವಾಲಯದಲ್ಲೂ ನಡೆಯಲಿದ್ದು, ಅಲ್ಲಿ ಎ.ದಾಮೋದರನ್ ನಂಬೂತಿರಿ ಅವರು ನೂತನ ಮುಖ್ಯ ಅರ್ಚಕರಾಗಿ ಅಧಿಕಾರ ಸ್ವೀಕರಿಸುವರು.ಇಂದು ಬೇರೆ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ನಿಗದಿಪಡಿಸಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ತಿಳಿಸಿದ್ದಾರೆ.ನಾಳೆ ಬೆಳಗ್ಗೆ 3 ಗಂಟೆಗೆ ನೂತನ ಮುಖ್ಯ ಅರ್ಚಕರು ಶಬರಿಮಲೆ ಮತ್ತು ಮಾಳಿಕಪ್ಪುರಂ ದೇವಾಲಯಗಳ ಬಾಗಿಲುಗಳನ್ನು ಭಕ್ತರಿಗಾಗಿ ತೆರೆಯುವುದರೊಂದಿಗೆ ಮಂಡಲ ಯಾತ್ರಾ ಋತು ಅಧಿಕೃತವಾಗಿ ಶುರುವಾಗುತ್ತದೆ ಎಂದು ಅವರು ಹೇಳಿದರು.ಡಿಸೆಂಬರ್ 27ರಂದು ಮಂಡಲ ಪೂಜೆ ನಡೆಯಲಿದ್ದು, ಆ ದಿನದ ಪೂಜಾ ಕೈಂಕರ್ಯಗಳ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ. ಇದಾದ ನಂತರದಲ್ಲಿ ಮಕರವಿಳಕ್ಕು ಯಾತ್ರಾ ಋತು ಆರಂಭವಾಗಲಿದ್ದು, ಡಿಸೆಂಬರ್ 30ರ ಸಂಜೆ 5 ಗಂಟೆಗೆ ದೇವಾಲಯ ಮತ್ತೆ ತೆರೆಯಲಿದೆ. ಮಕರವಿಳಕ್ಕು ಉತ್ಸವ ಜನವರಿ 14ರಂದು ನಡೆಯುತ್ತದೆ. ಭಕ್ತರು ಜನವರಿ 19ರ ವರೆಗೆ ದರ್ಶನ ಪಡೆಯಬಹುದು.
ಜನವರಿ 20ರಂದು ದೇವಾಲಯವನ್ನು ಮುಚ್ಚಲಾಗುತ್ತದೆ. ದಿನವೊಂದಕ್ಕೆ 80,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಆನ್ಲೈನ್ ಬುಕಿಂಗ್ ಕಡ್ಡಾಯವಾಗಿರುತ್ತದೆ ಎಂಬುದನ್ನು ಭಕ್ತರು ಗಮನಿಸಬೇಕು.
