ಲ. ಅನಿಲ್ದಾಸ್ರಿಂದ ಕುಂಭ ಕುಟೀರ ಮನೆ ನಾಮಫಲಕ ಅನಾವರಣ; ಡಾ. ಅಣ್ಣಯ್ಯ ಕುಲಾಲ್ ದೀಪ ಪ್ರಜ್ವಲನೆ

ಬಂಟ್ವಾಳ: ಬಾಡಿಗೆ ಮನೆ ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿ ನಿರ್ಗತಿಕರಾಗಿದ್ದ ಕುಟುಂಬವೊಂದಕ್ಕೆ ಕರ್ನಾಟಕ ರಾಜ್ಯ ಕುಂಬಾರ-ಕುಲಾಲ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ.) ಜಿಲ್ಲಾ ಸಮಿತಿ ವತಿಯಿಂದ ನಿವೇಶನ ಸಹಿತ ಕುಂಭ ಕುಠೀರ ಮನೆ ಹಸ್ತಾಂತರ ಕಾರ್ಯಕ್ರಮ ಜು. 13ರಂದು ಜರಗಿತು.
ಕುಲಾಲ ಯುವ ವೇದಿಕೆಯ ಸಂಸ್ಥಾಪಕರಾದ ಡಾ. ಅಣ್ಣಯ್ಯ ಕುಲಾಲ್ ಉಳ್ತೂರುರವರು ದೀಪಬೆಳಗಿಸಿ ಭಜನೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮನೆ ಎಂದರೆ ಕೇವಲ ಕಲ್ಲು ಇಟ್ಟಿಗೆಯ ಗೂಡಲ್ಲ. ಏಳುಬೀಳುಗಳ ಉಗ್ರಾಣವಿದು. ಮನೆ ಸದಸ್ಯರು ಮನೆಯಲ್ಲಿ ಕೂಡಿ ಬಾಳಿ ಒಬ್ಬರೊಬ್ಬರ ಮನಸ್ಸನ್ನು ಅರ್ಥಮಾಡಿ ಅರಿತು ಬಾಳಿದರೆ ಬದುಕು ಬಂಗಾರವಾಗುತ್ತದೆ. ಹಾಗೆ ಹಾಲು ಜೇನಿನಂತೆ ಬೆರೆತಂತೆ ರುಚಿ ಶುಚಿ ಯಾಗಿ ಹೃದಯ ಮನಸ್ಸು ಬೆರೆತಿರಬೇಕು ಎಂದು ಹಿತನುಡಿಯಾಗಿ ಮಾತನಾಡಿ ಶುಭ ಹಾರೈಸಿದರು.
ತುಳುನಾಡ ಸಭಾ ಕೇಂದ್ರ ಸಮಿತಿ (ರಿ) ಇದರ ಅಧ್ಯಕ್ಷರಾದ ನಿಟ್ಟೆ ಕೆಎಸ್ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಆದ ಡಾ. ಅವಿನ್ ಆಳ್ವರವರು ಈ ಕುಲಾಲ ಸಮಾಜವು ಇತರ ಸಮುದಾಯವನ್ನು ಒಟ್ಟು ಸೇರಿಸಿ ಸೌಹಾರ್ದದಿಂದ ಸಮಾಜ ಸೇವೆ ಮಾಡುವುದು ಈ ಸಮಾಜಕ್ಕೆ ವಿಶೇಷ ಮಾದರಿ ಎಂದು ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸೇವಾ ಯೋಜನೆಯ ರುವಾರಿ, ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾದ ಲ. ಅನಿಲ್ದಾಸ್ ಕುಂಭ ಕುಟೀರ ಅನಾವರಣ ಮಾಡಿದರು. ಚಂದಪ್ಪ ಮೂಲ್ಯ ಭಗವದ್ ಗೀತೆ ಪುಸ್ತಕ ನೀಡಿ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಧಾಕರ್ ಸಾಲಿಯಾನ್ ಸುರತ್ಕಲ್,ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಸುಮಿತ್ ಸಾಲಿಯಾನ್, ವಿಭಾಗೀಯ ಅಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಮಾಜಿ ಆಯುಕ್ತರು ರಾಜ್ಯ ಮಾಹಿತಿ ಹಕ್ಕು ಆಯೋಗದ ಡಾ. ಲಿಂಗರಾಜು ಕೆ. ಬೆಂಗಳೂರು, ನಿವೃತ್ತ ಕಮಾಂಡೆಂಟ್ ಚಂದಪ್ಪ ಮೂಲ್ಯ, ವಿಟ್ಲಕುಲಾಲ ಸಂಘದ ಅಧ್ಯಕ್ಷ ಬಾಬು ಕುಲಾಲ್ ವಜ್ರಮಾತ, ಸಮಾಜಸೇವಕ ಅಚ್ಚುತ ಕುಲಾಲ್ ವಿಟ್ಲ, ಹಿರಿಯರಾದ ಮಹಾಬಲ ಕುಲಾಲ್, ಅಶೋಕ್ ಕುಲಾಲ್, ಸುರತ್ಕಲ್ ನ ಮಾಜಿ ಅಧ್ಯಕ್ಷ ದಿನಕರ್ ಕುಲಾಲ್, ಯುವ ವೇದಿಕೆ ಯ ಮಾಜಿ ರಾಜ್ಯಾಧ್ಯಕ್ಷ ಗಂಗಾದರ ಬಂಜನ್ ಮತ್ತು ವಿಟ್ಲ ಹಿಂದೂ ಮಹಾ ಸಂಗಮದ ಸದಸ್ಯರು, ಬಂಟ್ವಾಳ, ಹಿರಿಯರಾದ ಚಂದಪ್ಪ ಮೂಲ್ಯ, ಬಂಟ್ವಾಳ , ಸುರತ್ಕಲ್ , ಕುಳಾಯಿ, ಮಂಗಳೂರು, ನೀರುಮಾರ್ಗ, ವಿಟ್ಲ, ಉಳ್ಳಾಲ ವಿಭಾಗದ ಕುಲಾಲ ನಾಯಕರು ಮತ್ತಿತ್ತರು ಉಪಸಿತರಿದ್ದರು.
ಈ ಕುಂಭ ಕುಟೀರ ಮನೆ ನಿರ್ಮಾಣಕ್ಕೆ ಹತ್ತು ಹಲವು ಮಂದಿಗಳು ಶ್ರಮದಾನ ಕೊಡುಗೆ ಸಹಕಾರ ಮಾಡಿದವರಲ್ಲಿ ವಿಶೇಷವಾಗಿ ಪಕ್ಷಿಕೆರೆಯ ಟೈಲ್ಸ್ ಅಳವಡಿಕೆಯ ಶಿವಪ್ರಸಾದ್ ಕುಲಾಲ್, ಸಾಲೆತ್ತೂರಿನ ಮನೆ ಮಾಲೀಕರಾದ ಅಬ್ದುಲ್ ರೆಹಮಾನ್, ಕನ್ಯಾನದ ಮಾಜಿ ಅಧ್ಯಕ್ಷ ರೇಖಾ ರಮೇಶ್, ಸಾಲೆತ್ತೂರು ಕುಳಾಲ್ ನ ಎಲೆಕ್ಟ್ರಿಷಿಯನ್ ರವೀಂದ್ರ ಕುಲಾಲ್ ಹಾಗೂ ಸಹ ಉದ್ಯೋಗಿಗಳು, ಮುಡಿಪು ಕುಲಾಲ ವೇದಿಕೆಯ ನವೀನ್ ಕುಲಾಲ್ ಪೆದಮಲೆ, ಕನ್ಯಾನದ ಬಡಗಿ ಕೆಲಸ ಮಾಡುವ ಜಯರಾಮ ಗೌಡ ಇವರುಗಳ ವಿಶೇಷ ಕಾಳಜಿಯ ಸೇವೆಯನ್ನು ಗುರುತಿಸಿ ಸಮಾಜಕ್ಕೆ ಮಾದರಿ ಎಂದು ತಿಳಿಸಲು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸುಕುಮಾರ್ ಬಂಟ್ವಾಳ್ ರವರು ಸ್ವಾಗತಿಸಿ, ಎಚ್.ಕೆ. ನೈನಾಡ್ ನಿರ್ವಹಿಸಿದರು. ಫಲಾನುಭವಿ ಮನೆ ಸದಸ್ಯೆ ಕು. ಗುಣವತಿ ಕುಲಾಲ್ ವಂದಿಸಿದರು.
ಬೆಂಕಿಗಾಹುತಿಯಾಗಿದ್ದ ಮನೆ
2025ರ ಇಸವಿ ಡಿಸೆಂಬರ್ ತಿಂಗಳ 19ನೇ ತಾರೀಕಿಗೆ ಈ ಬಡ ಕುಟುಂಬ ವಾಸವಾಗಿದ್ದ ಕನ್ಯಾನದಲ್ಲಿ ಬಾಡಿಗೆ ಮನೆ ಹಗಲಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿಗಾಹುತಿಯಾಗಿತ್ತು. ಘಟನೆ ವೇಳೆ ಆದಷ್ಟವಶಾತ್ ಮನೆಯಲ್ಲಿ ಈ ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ಆದರೆ ಕೂಡಿಟ್ಟ ಅಲ್ಪಸ್ವಲ್ಪ ಹಣ, ಚಿನ್ನ, ಬಟ್ಟೆ-ಬರೆ ಇತರ ಉಪಯೋಗಿ ವಸ್ತುಗಳು ಸುಟ್ಟು ಕರಕಲಾಗಿತ್ತು. ಸಂತ್ರಸ್ತ ಕುಟುಂಬಕ್ಕೆ ತಾತ್ಕಾಲಿಕ ನೆಲೆಯಾಗಿ ಕನ್ಯಾನ ಗ್ರಾಮ ಪಂಚಾಯತ್ ಕೊಠಡಿಯೊಂದನ್ನು ಒದಗಿಸಿತ್ತು. ಇದಕ್ಕೆ ಅಂದಿನ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರೇಖಾ ರಮೇಶ್ ರವರು ಸಹಕರಿಸಿದ್ದರು. ಈ ಘಟನೆಯ ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆಯ ಗಮನಕ್ಕೆ ಬಂದ ಕಾರಣ ಪರಿಸ್ಥಿತಿಯನ್ನು ಅವಲೋಕಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಲ. ಅನಿಲ್ದಾಸ್ ಅವರು ನಿವೇಶನ ಖರೀದಿಸಿ ಮನೆ ಕಟ್ಟಿಕೊಡುವುದಾಗಿ ಭರವಸೆ ನೀಡಿದರು. ಇದಕ್ಕಾಗಿ ಕೆಲವು ದಾನಿಗಳನ್ನು ಅವರು ಸಂಪರ್ಕಿಸಿದರು. ಶ್ರಮದಾನ, ದೇಣಿಗೆ ಸಂಗ್ರಹ ಕಾರ್ಯಕ್ರಮಗಳ ಯೋಜನೆ ಇತ್ಯಾದಿಗಳನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ವೇದಿಕೆ ಹಮ್ಮಿಕೊಂಡಿತು. ಇದಕ್ಕೆ ಸಹಕಾರವಾಗಿ ಬೆಳ್ತಂಗಡಿಯ ಗುಂಡೂರಿ ಗ್ರಾಮದ ಗುರು ಚೈತನ್ಯ ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ರವರು ಸಹಕರಿಸಿದರು.



